ಒಕ್ಕಲಿಗರಲ್ಲಿ ಒಗ್ಗಟ್ಟಿನ ಕೊರತೆ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ

KannadaprabhaNewsNetwork |  
Published : Jan 18, 2026, 01:30 AM IST
17ಕೆಎಂಎನ್‌ಡಿ-5ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ  ನೂತನ ಒಕ್ಕಲಿಗ ಸಂಘವನ್ನು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಒಕ್ಕಲಿಗ ಸಮುದಾಯ ಒಂದಾದರೆ ರಾಜ್ಯದ ಚುನಾವಣಾ ಫಲಿತಾಂಶವನ್ನೇ ಬದಲಾವಣೆ ಮಾಡುವಷ್ಟು ಶಕ್ತಿಯಿದೆ. ರಾಜ್ಯದಲ್ಲಿ ನಾವು ಎಲ್ಲರಿಗಿಂತ ಪ್ರಬಲರಾಗಿದ್ದರೂ ನಮ್ಮಲ್ಲಿ ಒಂದು ಧ್ವನಿ ಇಲ್ಲ. ಈ ಸಮಸ್ಯೆಯನ್ನು ಸಮಾಜದ ಜನರು ಮಾತ್ರವಲ್ಲದೆ ಸರ್ಕಾರಿ ನೌಕರಿಯಲ್ಲಿರುವ ಅಧಿಕಾರಿಗಳೂ ಸಹ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಎಲ್ಲ ಸಮುದಾಯಗಳಿಗಿಂತ ಪ್ರಬಲವಾಗಿದೆ. ಆದರೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ನೂತನ ತಾಲೂಕು ಒಕ್ಕಲಿಗರ ಸಂಘ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಕ್ಕಲಿಗ ಸಮುದಾಯ ಒಂದಾದರೆ ರಾಜ್ಯದ ಚುನಾವಣಾ ಫಲಿತಾಂಶವನ್ನೇ ಬದಲಾವಣೆ ಮಾಡುವಷ್ಟು ಶಕ್ತಿಯಿದೆ. ರಾಜ್ಯದಲ್ಲಿ ನಾವು ಎಲ್ಲರಿಗಿಂತ ಪ್ರಬಲರಾಗಿದ್ದರೂ ನಮ್ಮಲ್ಲಿ ಒಂದು ಧ್ವನಿ ಇಲ್ಲ. ಈ ಸಮಸ್ಯೆಯನ್ನು ಸಮಾಜದ ಜನರು ಮಾತ್ರವಲ್ಲದೆ ಸರ್ಕಾರಿ ನೌಕರಿಯಲ್ಲಿರುವ ಅಧಿಕಾರಿಗಳೂ ಸಹ ಅನುಭವಿಸುತ್ತಿದ್ದಾರೆ. ಹಾಗಾಗಿ ಇದರ ಸೂಕ್ಷ್ಮತೆ ಅರಿತು ನಮ್ಮ ಸಮಾಜದ ಗುರು-ಹಿರಿಯರೊಂದಿಗೆ ಸ್ಪಂದಿಸಿ ಅವರ ಮಾರ್ಗದರ್ಶನ ಪಡೆದು ಎಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಜನರು ದೊಡ್ಡ ದೊಡ್ಡ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಈಗಾಗಲೇ ತಾಲೂಕಿನಲ್ಲಿ ನಾಲ್ಕು ಒಕ್ಕಲಿಗ ಸಂಘವಿದ್ದು, ಸಂಘ ಹತ್ತಕ್ಕೆ ಏರಿದರೂ ಪರವಾಗಿಲ್ಲ, ಆದರೆ, ಸಮಾಜ ಹಾಗೂ ಸಮುದಾಯದ ಪರವಾಗಿ ಕ್ಷೇತ್ರದಲ್ಲಿ ಎಲ್ಲಾ ಸಂಘಟನೆಗಳಿಂದ ಒಮ್ಮತದ ಒಂದೇ ದ್ವನಿ ಹೊರಬರಬೇಕು. ಈ ಸಂಘ ಬಹಳ ಸದುದ್ದೇಶದಿಂದ ಪ್ರಾರಂಭಿಸಿದ್ದಾರೆ. ಅದರ ಉದ್ದೇಶ ಫಲಪ್ರದವಾಗಲಿ ಎಂದು ಮನವಿ ಮಾಡಿದರು.

ನಂತರ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಮಾತನಾಡಿ, ಒಕ್ಕಲಿಗ ಸಮಾಜದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ದೈಹಿಕವಾಗಿ ನಮ್ಮ ಜೊತೆಯಲ್ಲಿರದಿದ್ದರೂ, ಅವರ ಮುಂದಾಲೋಚನೆಯಿಂದ ಎಷ್ಟೋ ಮಕ್ಕಳಿಗೆ ಶಿಕ್ಷಣ, ವಸತಿ ಹಾಗೂ ಅನ್ನದಾಸೋಹ ನಡೆಯುತ್ತಿದೆ. ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ದಿನದಲ್ಲಿ ಅದೇ ಮಠವನ್ನು ಶ್ರೀನಿರ್ಮಲಾನಂದ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಒಕ್ಕಲಿಗ ಸಮಾಜದ ಎಲ್ಲಾ ಮುಖಂಡರು ಸಂಘ-ಸಂಸ್ಥೆಗಳು ಸ್ವಾಮೀಜಿಯವರ ನೇತೃತ್ವದಲ್ಲಿ ಒಂದುಗೂಡಿ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣದಲ್ಲಿ ಒಂದು ಭವನ ನಿರ್ಮಿಸಬೇಕು. ನಾನೂ ಸಹ ನನ್ನ ತಂದೆ ಹೆಸರಿನಲ್ಲಿ 25 ಲಕ್ಷ ರು. ದೇಣಿಗೆಯನ್ನು ಭವನ ನಿರ್ಮಾಣಕ್ಕೆ ನೀಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಡಾ. ಬಲ್ಲೇನಹಳ್ಳಿ ಶಂಕರ್, ಡಿವೈಎಸ್ಪಿ ಚಲುವರಾಜು, ಪರಿಸರ ರಮೇಶ್, ಪ್ರಕಾಶ್ ಚಿಕ್ಕಪಾಳ್ಯ, ಲಕ್ಷ್ಮೀಶ್ ಆರ್, ವಾಸು ಬೆಳಗೊಳ ಸೇರಿದಂತೆ ಇತರ ಸಮುದಾಯದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಆದಿಚುಂಚನಗಿರಿ ಮೈಸೂರು ಮಹಾ ಸಂಸ್ಥಾನದ ಕಾರ್ಯದರ್ಶಿ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಜಿ.ಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ರೈತ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ, ಪಾಲಹಳ್ಳಿ ಚಂದ್ರಶೇಖರ್, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ. ಇಂದ್ರಕುಮಾರ್, ಗೌರವಾಧ್ಯಕ್ಷ ಎಚ್.ಡಿ ಮಹದೇವು, ಗಂಜಾಂ ಚಂದ್ರಶೇಖರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.೨೭ಕ್ಕೆ ಕೆ.ಆರ್.ಪೇಟೆಗೆ ನಿಖಿಲ್ ಆಗಮನ: ಶಾಸಕ ಎಚ್.ಟಿ.ಮಂಜು
ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಶಿಕ್ಷಾರ್ಹ: ನ್ಯಾ.ಕ್ರಾಂತಿ ಕಿರಣ್