ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ವಾಹನ ಕೊರತೆ, ಕಾರ್ಯವ್ಯಾಪ್ತಿ ಹೆಚ್ಚು!

KannadaprabhaNewsNetwork | Published : Feb 2, 2025 11:47 PM

ಸಾರಾಂಶ

ಜಿಲ್ಲೆಯಲ್ಲಿ ಒಟ್ಟು 7 ತಾಲೂಕುಗಳಿದ್ದರೂ ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರ ಹಾಗೂ ಬೈಂದೂರಿನಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿವೆ. ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳಿಲ್ಲ. ಆದ್ದರಿಂದ ಹೆಬ್ರಿ, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳಲ್ಲಿ ಸಂಭವಿಸುವ ಅಗ್ನಿ ಅವಘಡ ನಿರ್ವಹಣೆಯನ್ನೂ ಕಾರ್ಕಳ ಠಾಣೆಯೇ ಮಾಡಬೇಕಿದೆ.

ಏಕಕಾಲದಲ್ಲಿ ವಿವಿಧೆಡೆ ಅವಘಡ ಸಂಭವಿಸಿದರೆ ನಿರ್ವಹಣೆ ಕಷ್ಟ । ವಾಹನಕ್ಕೆ ಬೇಡಿಕೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಬೇಸಿಗೆ ಆಗಮಿಸುತ್ತಿದ್ದು, ಇನ್ನು ಅಗ್ನಿ ಅವಘಡಗಳು ಹೆಚ್ಚಾಗಲಿದೆ. ಅದರಲ್ಲೂ ಪಶ್ಚಿಮ ಘಟ್ಟ ಶ್ರೇಣಿಯನ್ನು ಹೊಂದಿರುವ ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಅಗ್ನಿ ಅವಘಡಗಳು, ಕಾಡ್ಗಿಚ್ಚುಗಳು ಸಂಭವಿಸುವುದು ಅಧಿಕ. ಆದರೆ ಇಲ್ಲಿ ಇರುವ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ವಾಹನವಿದ್ದು, ಜತೆಗೆ ಇದರ ಕಾರ್ಯವಾಪ್ತಿ ಹೆಚ್ಚಾಗಿದ್ದು, ನಿರ್ವಹಣೆ ಮೇಲೆ ಅಧಿಕ ಒತ್ತಡ ಬೀಳುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 7 ತಾಲೂಕುಗಳಿದ್ದರೂ ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರ ಹಾಗೂ ಬೈಂದೂರಿನಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿವೆ. ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳಿಲ್ಲ. ಆದ್ದರಿಂದ ಹೆಬ್ರಿ, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳಲ್ಲಿ ಸಂಭವಿಸುವ ಅಗ್ನಿ ಅವಘಡ ನಿರ್ವಹಣೆಯನ್ನೂ ಕಾರ್ಕಳ ಠಾಣೆಯೇ ಮಾಡಬೇಕಿದೆ.

ಕಾರ್ಕಳ ತಾಲೂಕಿನಲ್ಲಿ ಜನವರಿ ಅಂತ್ಯದ ವರೆಗೆ ಒಟ್ಟು 12 ಅಗ್ನಿ ಅವಘಡಗಳು ಸಂಭವಿಸಿದೆ.

35 ವರ್ಷ ಹಳೆಯ ವಾಹನಗಳು!:

ಕಾರ್ಕಳ ತಾಲೂಕಿನಲ್ಲಿ ಒಟ್ಟು ಮೂರು ಅಗ್ನಿಶಾಮಕ ವಾಹನಗಳಿದ್ದರೂ ಎರಡು ವಾಹನಗಳು 35 ವರ್ಷ ಹಳೆಯ ವಾಹನಗಳಾಗಿವೆ. ಈ ವಾಹನಗಳ ನೋಂದಣಿ ರದ್ದಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಸ್ತೆಗಿಳಿಸುವಂತಿಲ್ಲ. ಪ್ರಸ್ತುತ ಠಾಣೆಯಲ್ಲಿ 4,500 ಲೀಟ‌ರ್ ಸಾಮರ್ಥ್ಯದ ಬೆಂಕಿ ನಂದಿಸುವ ಒಂದು ವಾಹನ ಮಾತ್ರವಿದೆ.

ಮೂರು ತಾಲೂಕಿನ ಜವಾಬ್ದಾರಿ:

ಕಾರ್ಕಳ ತಾಲೂಕಿನ ಅಗ್ನಿಶಾಮಕ ದಳದಲ್ಲಿ ಪ್ರಸ್ತುತ ಒಂದು ಅಗ್ನಿಶಾಮಕ ವಾಹನವಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಒಟ್ಟು 16 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ 2023-24ರಲ್ಲಿ ಒಟ್ಟು 428 ಅಗ್ನಿ ಕರೆಗಳು ಬಂದಿವೆ. ಅದರಲ್ಲಿ ಕಾಪು ಹಾಗು ಹೆಬ್ರಿ ತಾಲೂಕಿಕೆ ಸಂಬಂಧಿಸಿದ ಕರೆಗಳು ಹೆಚ್ಚಾಗಿತ್ತು.

ಕಾರ್ಯವ್ಯಾಪ್ತಿ ವಿಸ್ತಾರ:

ಹೆಬ್ರಿ ಹಾಗೂ ಕಾರ್ಕಳದಲ್ಲಿ ಏಕಕಾಲದಲ್ಲಿ ಅಗ್ನಿ ಅವಘಡಗಳು ಸಂಭವಿದರೆ ಅಗ್ನಿಶಾಮಕ ದಳಕ್ಕೆ ನಿರ್ವಹಣೆ ಕಷ್ಟ ಸಾಧ್ಯ. ‌ ಈಗಾಗಲೇ ಹೆಬ್ರಿ ತಾಲೂಕಿನ ಶೇಡಿಮನೆ, ಅಗುಂಬೆ, ಮಡಾಮಕ್ಕಿ, ಶಿವಪುರ, ಕಾರ್ಕಳ ತಾಲೂಕಿನ ನಾರಾವಿ, ಇನ್ನಾ ಹಿರಿಯಡ್ಕ, ಕುದುರೆಮುಖ ರಸ್ತೆಯ ಎಸ್‌.ಕೆ. ಬಾರ್ಡರ್, ಕಾಪು ತಾಲೂಕಿನ ಶಿರ್ವ, ಮುದರಂಗಡಿ, ಪಡುಬಿದ್ರಿ ಸೇರಿದಂತೆ ಒಟ್ಟು ಕಾರ್ಕಳದಿಂದ 60 ಕಿ.ಮೀ. ವ್ಯಾಪ್ತಿ ವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಆದ್ದರಿಂದ ಠಾಣೆಗಳ ಮೇಲಿನ ಒತ್ತಡ ನಿಯಂತ್ರಣಕ್ಕಾಗಿ ಹೆಬ್ರಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಲ್ಲೂ ಪ್ರತ್ಯೇಕ ಅಗ್ನಿಶಾಮಕ ಠಾಣೆಗಳ ನಿರ್ಮಾಣ ಮಾಡಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಹೊಸ ವಾಹನಗಳನ್ನು ನೀಡಿ:

ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಈಗಿರುವ ಅಗ್ನಿಶಾಮಕ ವಾಹನದ ನೋಂದಣಿ ಇನ್ನು ನಾಲ್ಕು ವರ್ಷಗಳಲ್ಲಿ ಕೊನೆಗೊಳ್ಳಲಿದೆ. ಆದ್ದರಿಂದ ಹೊಸ ವಾಹನದ ಅಗತ್ಯವಿದೆ. ಎರಡು ಅಗ್ನಿಶಾಮಕ ವಾಹನಗಳನ್ನು ನೀಡಿದರೆ ಏಕಕಾಲದಲ್ಲಿ ಎರಡು ಅಗ್ನಿ ಅನಾಹುತಗಳನ್ನು ತಡೆಯಲು ಸಹಕಾರಿಯಾಗಬಹುದಾಗಿದೆ.

----------------ಹೆಬ್ರಿ, ಕಾಪು ಹಾಗೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.

। ಡಾ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ.

Share this article