ಗ್ರಾಮೀಣ ಜನರ ಪ್ರಗತಿಗೆ ನರೇಗಾ ಬಲ: ನಿಂಗನಗೌಡ

KannadaprabhaNewsNetwork |  
Published : Feb 02, 2025, 11:47 PM IST
ಪೋಟೊ2.6: ಕುಷ್ಟಗಿ ತಾಲೂಕಿನ ಬೀಳೆಕಲ್ ಗ್ರಾಮದಲ್ಲಿ ನಡೆದ ನರೇಗಾ ದಿವಸ್ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ  ಮಾತನಾಡಿದರು.ಹಾಗೂ ನೂರು ದಿನ ಪೂರೈಸಿದ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಉತ್ತಮವಾದ ಗುಣಾತ್ಮಕ ಬದಲಾವಣೆ ತಂದಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಉತ್ತಮವಾದ ಗುಣಾತ್ಮಕ ಬದಲಾವಣೆ ತಂದಿದೆ ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.

ತಾಲೂಕಿನ ಬೀಳೆಕಲ್ ಗ್ರಾಮದಲ್ಲಿ ನಡೆದ ನರೇಗಾ ದಿವಸ್ ಆಚರಣೆಯಲ್ಲಿ ಮಾತನಾಡಿದರು.

ಗಿಡ ಸದೃಢವಾಗಿರಲು ಬೇರು ಗಟ್ಟಿಯಾಗಿರಬೇಕು, ಗ್ರಾಮೀಣ ಜನರು ಪ್ರಗತಿಯಾಗಲು ನರೇಗಾ ಯೋಜನೆಯ ಬಲವಿರಬೇಕು. ಜಮೀನಿಗೆ ಉಪಕಾರಿ, ರೈತರಿಗೆ ಸಹಕಾರಿ, ಕೂಲಿಕರಿಗೆ ಬಲಕಾರಿ, ಗ್ರಾಮಕ್ಕೆ ಪರೋಪಕಾರಿ ಈ ನಮ್ಮ ನರೇಗಾ ಯೋಜನೆ ಎಂದ ಅವರು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ವರ್ಷ ಫೆ. 2ರಂದು ನರೇಗಾ ದಿನವೆಂದು ಆಚರಿಸಲಾಗುತ್ತದೆ ಎಂದರು.

ನರೇಗಾ ಯೋಜನೆ ಗ್ರಾಮೀಣ ಜನರಿಗೆ ನೋಂದಾಯಿತ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳ ಕೆಲಸ ನೀಡುತ್ತಾ ಬಂದಿದೆ. ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಾಲೂಕಿನ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿಯಡಿ ಬಾಲಕ, ಬಾಲಕಿಯರ ಹೈಟೆಕ್ ಶೌಚಾಲಯ ನಿರ್ಮಾಣ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಟಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಪ್ರತಿಭೆಗಳು ಹೊರಬರಲು ಒತ್ತು ನೀಡಲಾಗಿದೆ. ರೈತರು ಆರ್ಥಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಲಾಗಿದೆ ಎಂದರು.

ಎಲ್ಲಾ ಗ್ರಾಪಂಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳಾ ಕಾಯಕೋತ್ಸವ ಅಭಿಯಾನದಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಿ ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಉದ್ಯೋಗ ಖಾತರಿ ನಡೆಗೆ ಸಬಲತೆಯಡೆಗೆ ಮುಖಾಂತರ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಬೇಡಿಕೆಯನ್ನು ಆಧರಿಸಿ ಕೆಲಸ ಒದಗಿಸಿ ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲಾಗಿದೆ ಎಂದರು.

ನರೇಗಾ ಯೋಜನೆಯಡಿ ೧೦೦ ದಿನಗಳನ್ನು ಪೂರೈಸಿರುವ ಕುಟುಂಬದ ವ್ಯಕ್ತಿಗಳಿಗೆ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು. ರೋಜಗಾರ ದಿನಾಚರಣೆ, ಜಲ ಸಂಜೀವಿನಿಯ ವಿಶೇಷ ಜಾಗೃತಿ ಕಾರ್ಯಕ್ರಮಗಳು, ಕೂಲಿಕಾರರಿಗೆ ಕ್ರೀಡೆಗಳನ್ನು ಆಡಿಸುವ ಮೂಲಕ ದೈಹಿಕ ಮಾನಸಿಕವಾಗಿ ಸದೃಢರಾಗಲು ಪ್ರೋತ್ಸಾಹ ನೀಡಲಾಯಿತು.

ಈ ಸಂದರ್ಭ ಪಿಡಪೊ ಚಂದಪ್ಪ ಕೌಡಿಕಾಯಿ, ಗ್ರಾಪಂ ಸದಸ್ಯರಾದ ಮುತ್ತಪ್ಪ, ಶಿವಾನಂದ, ಕನಕಮ್ಮ ದಾಸರ, ಪರಮೇಶ್ವರ ಕರಡಿ, ತಾಂತ್ರಿಕ ಸಹಾಯಕ ಗುರುಲಿಂಗಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮಲ್ಲೇಶಪ್ಪ, ದರಿಯಪ್ಪ, ಯಮನೂರಪ್ಪ, ಭೀಮವ್ವ, ರೇಣುಕಾ, ಹನುಮಂತ, ಕೂಲಿ ಕಾರ್ಮಿಕರಿದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’