ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾಲ್ಕೈದು ವರ್ಷದ ಹಿಂದೆ ಗ್ರಾಮದವರು ಕೆರೆಯ ಅಭಿವೃದ್ಧಿ ಮಾಡಬೇಕು ಎಂದು ಕೆರೆಗೆ ಕಲ್ಲುಗಳಿಂದ ಒಡ್ಡು ನಿರ್ಮಾಣ ಮಾಡಿಸಲಾಗಿತ್ತು. ಗ್ರಾಮ ಪಂಚಾಯಿತಿಯವರು ಮಂಗಳವಾರ ಮತ್ತು ಬುಧವಾರದಂದು ಏಕಾಏಕಿ ನರೇಗಾ ಯೋಜನೆ ಯಡಿಯಲ್ಲಿ ಕೆರೆ ಮಣ್ಣನ್ನು ತೆಗೆದು, ಆ ಮಣ್ಣನ್ನು ಕಲ್ಲಿನ ರಿವಿಂಟ್ ಮೆಂಟ್‌ನ ಮೇಲೆ ಹಾಕಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಜನಾರ್ದನ ಪಟೇಲ್ ಆರೋಪಿಸಿದರು.
ಈ ಯೋಜನೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಬಂದಿರುವುದಿಲ್ಲ. ಇದೆಲ್ಲ ಗಮನಿಸಿದರೆ ಸರ್ಕಾರದ ಹಣ ಲೂಟಿ ಮಾಡುವ ಉದ್ದೇಶ ಎದ್ದು ಕಾಣುತ್ತಿದೆ. ಕೆರೆ ಮಣ್ಣನ್ನು ಕೆರೆಯಿಂದ ದೂರ ಸಾಗಿಸಬೇಕು. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿ ಕೆರೆ ಮಣ್ಣನ್ನು ಕೆರೆಗೆ ಚೆಲ್ಲುವ ಯೋಜನೆ ಇದಾಗಿದೆ. ನಮಗೆ ಸರ್ಕಾರದ ಈ ಯೋಜನೆ ಬೇಕಾಗಿರುವುದಿಲ್ಲ. ಇದರ ಬದಲು ಕೆರೆ ಏರಿ ಸ್ವಚ್ಛತೆ, ಪಕ್ಕದಲ್ಲಿರುವ ಸ್ಮಶಾನದ ಅಭಿವೃದ್ಧಿ, ಬಹುಮುಖ್ಯವಾಗಿ ನಮ್ಮೂರಿನ ಕೆರೆ ತುಂಬಿಸಲು ಈ ಹಣ ಬಳಸಬಹುದಿತ್ತು. ಇದರ ಬದಲು ಅಧಿಕಾರಿಗಳ ಸ್ವಾರ್ಥತೆಯಿಂದ ಈ ಕಾಮಗಾರಿ ಕೈಗೆ ಎತ್ತಿಕೊಂಡಿರುವಂತೆ ಕಾಣುತ್ತಿದೆ ಎಂದು ಗ್ರಾಮದ ನರಸಿಂಹಪ್ಪ ತಮ್ಮ ಅಕ್ಷೇಪ ವ್ಯಕ್ತಪಡಿಸಿದರು.ಆರು ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ ಈ ಕೆರೆ ಅಭಿವೃದ್ಧಿಯನ್ನು ಅಧಿಕಾರಿಗಳು ಗಮನಹರಿಸಿ ಮಾಡುವ ಬದಲು. ಕೆರೆಯ ಮಣ್ಣನ್ನು ಅಲ್ಲಿಯೇ ಹಾಕುವುದರಿಂದ ಮಳೆ ಬಂದಾಗ ಮಣ್ಣು ಕೊಚ್ಚಿಕೊಂಡು ಮತ್ತೆ ಕೆರೆಗೆ ಬರುತ್ತದೆ. ಇದರಿಂದ ಈ ಮಣ್ಣನ್ನು ಹೊರ ಸಾಗಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.
ಈ ವೇಳೆ ಹಿರೇಬಾಸೂರು ಗ್ರಾಮದ ತಾರಕೇಶ್ವರ, ಸಂಪತ್ ಕುಮಾರ್, ಲಿಂಗರಾಜಯ್ಯ, ಎಚ್.ಎಂ ಹನುಮಂತಪ್ಪ, ಎಂ ಜಿ. ಹನುಮಂತಪ್ಪ, ಲಿಂಗರಾಜ್ ಬಿ.ಜಿ, ಎಂ.ಎಚ್ ಹನುಮಂತಪ್ಪ, ಗೋಪಾಲ್ ಸೇರಿ ಅನೇಕರಿದ್ದರು.