- ಡಿಸಿಗೆ ಕಬ್ಬೂರು ಪರಿಶಿಷ್ಟರು, ಹಿಂದುಳಿದವರ ಒತ್ತಾಯ । ಡಿಎಸ್‌ಎಸ್, ರೈತ ಸಂಘ- ಹಸಿರು ಸೇನೆ ನೇತೃತ್ವದ ಪ್ರತಿಭಟನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾಡಳಿತ ಭವನ ವೃತ್ತದಿಂದ ಕಚೇರಿವರೆಗೆ ರೈತ ಸಂಘ- ಡಿಎಸ್‌ಎಸ್ ಮುಖಂಡರ ನೇತೃತ್ವದಲ್ಲಿ ಘೋಷಣೆ ಕೂಗುತ್ತ ಧಾವಿಸಿ, ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.
ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಕಬ್ಬೂರು ಗ್ರಾಮದ ಸರ್ಕಾರಿ ಕೆರೆ, ಗೋಮಾಳದ ಅಳತೆ ವೇಳೆ ವ್ಯತ್ಯಾಸ ಕಂಡುಬಂದಿದೆ. ಆದ್ದರಿಂದ ಗ್ರಾಮಸ್ಥರು ಭೂ ಮಾಪಕರನ್ನು ವಾಪಸ್ ಕಳಿಸಿದ್ದರು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರೂ ಇರುವ ಗ್ರಾಮಸ್ಥರ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿ, ಹೊಸದಾಗಿ ಅಳತೆ ಮಾಡಿಸಿ, ಕೆರೆ ಮತ್ತು ಗೋಮಾಳ ಜಾಗವನ್ನು ಹದ್ದುಬಸ್ತು ಮಾಡಿಸಬೇಕು ಎಂದರು.ಕಬ್ಬೂರು ಗ್ರಾಮದ ರಿ. ಸ.ನಂ.31ರಲ್ಲಿ 71 ಎಕರೆ, ರಿ.ಸ.ನಂ.32ರಲ್ಲಿ ಸರ್ಕಾರಿ ಗೋಮಾಳದ ಬಗ್ಗೆ ಸಮಗ್ರ ಮಾಹಿತಿ ಸಮೇತ ಹಿಂದೆಯೇ ಗ್ರಾಮಸ್ಥರು ತಾಲೂಕು ಆಡಳಿತ, ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮದ ಗೋಮಾಳ ಜಮೀನಿನ ಅಳತೆ ಮಾಡಿ, ಹದ್ದುಬಸ್ತು ಮಾಡಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಂತೆ ಮಾ.5ರಂದು ಭೂ ಮಾಪಕರು ಗ್ರಾಮಕ್ಕೆ ಭೇಟಿ ನೀಡಿದ್ದರು ಎಂದು ತಿಳಿಸಿದರು.
ಡಿಎಸ್‌ಎಸ್ ಕುಂದುವಾಡ ಮಂಜುನಾಥ ಮಾತನಾಡಿ, ಭೂ ಮಾಪಕರು ಜಮೀನು ಅಳತೆಗೆ ಬೇಕಾದ ಗೋಮಾಳದ ಆಕಾರ (ನೀಲಿನಕ್ಷೆ), ಚಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿ, ಇತರೆ ಸಾಮಗ್ರಿಗಳೇ ಇಲ್ಲದೇ, ಭಾಗಶಃ ಅಳತೆ ಮಾಡುವ ಸಂದರ್ಭದಲ್ಲಿ ಅಳತೆ ವ್ಯತ್ಯಾಸ ಕಂಡುಬಂದಿತು. ಆದ್ದರಿಂದ ಗ್ರಾಮಸ್ಥರು ಅಳತೆಗೆ ಸಹಕಾರ ನೀಡಿದರೂ, ಭೂ ಮಾಪಕರು ಅಳತೆ ಮಾಡಲು ಗ್ರಾಮಸ್ಥರೇ ಸಹಕಾರ ನೀಡಿಲ್ಲವೆಂದು ಅಲ್ಲಿಂದ ವಾಪಸಾಗಿದ್ದಾರೆ. ಹಾಗಾಗಿ, ಆಧುನಿಕ ವ್ಯವಸ್ಥೆಯಾದ ಡಿಜಿಟಲ್ ಉಪಕರಣಗಳಿಂದ ಗ್ರಾಮದ ಸರ್ಕಾರಿ ಗೋಮಾಳ ಅಳತೆ ಮಾಡಬೇಕು. ಗೋಮಾಳದ ಆಕಾರ, ಚಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿಯೊಂದಿಗೆ ಕಬ್ಬೂರು ಗ್ರಾಮದ ಗೋಮಾಳ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಗ್ರಾಮದ ಮುಖಂಡರಾದ ಕಬ್ಬೂರು ವೈ.ಮಂಜುನಾಥ, ಮಲ್ಲಿಕಾರ್ಜುನ, ಕೆ.ಪಿ.ರಾಮಸ್ವಾಮಿ, ಧರ್ಮಣ್ಣ, ಪ್ರಸನ್ನ, ಚಂದ್ರಪ್ಪ, ಎನ್.ಎಂ.ಕೋಟೆಪ್ಪ, ಧನ್ಯಕುಮಾರ, ಕೆ.ಎನ್.ಗುರುಮೂರ್ತಿ, ಎಲ್.ಪಿ.ರಾಮಸ್ವಾಮಿ, ಎನ್.ಶಿವಕುಮಾರ, ದೇವರಾಜ, ಎನ್.ಎಂ.ಕೋಟಿ ಸೇರಿದಂತೆ ಗ್ರಾಮಸ್ಥರು ಇದ್ದರು.
- - -ಬಾಕ್ಸ್ * ಮರುಅಳತೆಗೆ ಕ್ರಮ: ಜಿಲ್ಲಾಧಿಕಾರಿ ಭರವಸೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಕಬ್ಬೂರು ಗ್ರಾಮದ ಗೋಮಾಳವನ್ನು ಜಿಲ್ಲೆಯ ಬೇರೆ ತಾಲೂಕುಗಳ ಭೂಮಾಪಕರಿಂದ ಉಪ ವಿಭಾಗಾಧಿಕಾರಿ, ತಹಸೀಲ್ದಾರರು, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲೇ ಮರುಅಳತೆಗೆ ಕ್ರಮ ಕೈಗೊಳ್ಳಲಾಗುವುದು. ಮಾ.12ರಂದು ಈ ಎಲ್ಲ ಅಧಿಕಾರಿಗಳು ಕಬ್ಬೂರಿಗೆ ಭೇಟಿ ನೀಡಿ, ಗೋಮಾಳದ ಅಳತೆ ಕಾರ್ಯದ ವೇಳೆ ಹಾಜರಿರುತ್ತಾರೆ. ಗ್ರಾಮಸ್ಥರು ಸಹ ಜಮೀನು ಅಳತೆಗೆ ಸಹಕರಿಸಬೇಕು. ಸರಿಯಾಗಿ ಅಳತೆ ಮಾಡಿದ ನಂತರ ಸರ್ಕಾರಿ ಗೋಮಾಳದ ಜಾಗವನ್ನು ಹದ್ದುಬಸ್ತು ಮಾಡುವುದಾಗಿ ಭರವಸೆ ನೀಡಿದರು.
- - - -10ಕೆಡಿವಿಜಿ1.ಜೆಪಿಜಿ: ದಾವಣಗೆರೆ ತಾಲೂಕು ಕಬ್ಬೂರು ಗ್ರಾಮದ ಸರ್ಕಾರಿ ಗೋಮಾಳ ಜಾಗ ಮರುಸರ್ವೇ ಮಾಡಿ, ಹದ್ದುಬಸ್ತು ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.