ಕೆರೆ ಭೂಮಿ ಒತ್ತುವರಿ: ತೆರೆವಿಗಾಗಿ ಆಗ್ರಹ

KannadaprabhaNewsNetwork |  
Published : Jun 26, 2024, 12:33 AM IST
ಕೆರೆಯ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಶಿಕಾರಿಪುರದ ವಿವಿಧ ಸಂಘಟನೆಗಳ ವತಿಯಿಂದ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕೋಟ್ಯಾಂತರ ಮೌಲ್ಯದ ಸರ್ಕಾರಿ ಕೆರೆ ಭೂಮಿಯನ್ನು ಸಂಪೂರ್ಣವಾಗಿ ತೆರೆವುಗೊಳಿಸುವ ಜತೆಗೆ ಕೆರೆ ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿಕಾರಿಪುರದ ವಿವಿಧ ಸಂಘಟನೆಗಳ ವತಿಯಿಂದ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನಾದ್ಯಂತ ಅಕ್ರಮವಾಗಿ ಒತ್ತುವರಿ ಆಗಿರುವ ಕೋಟ್ಯಾಂತರ ಮೌಲ್ಯದ ಸರ್ಕಾರಿ ಕೆರೆ ಭೂಮಿಯನ್ನು ಸಂಪೂರ್ಣವಾಗಿ ತೆರೆವುಗೊಳಿಸಿ ರಕ್ಷಿಸುವ ಜತೆಗೆ ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುವುದಕ್ಕೆ ಪರವಾನಗಿ, ಈ-ಸ್ವತ್ತು ನೀಡಿರುವ ಮತ್ತು ಕೆರೆ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಲು ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವ ಸಂಚು ರೂಪಿಸಿದ ಪುರಸಭೆ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಯುವರಾಜ್ ಆಗ್ರಹಿಸಿದರು.

ತಹಸೀಲ್ದಾರ್ ಕಚೇರಿ ಮುಂಭಾಗ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ಹಾಗೂ ಜಯ ಕರ್ನಾಟಕ ಸಂಘಟನೆ ಮತ್ತು ಕರ್ನಾಟಕ ರಾಜ್ಯ ಗೆಳೆಯರ ಬಳಗ ಸಂಘಟನೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಕಸಬಾ ಹೋಬಳಿ ಕಾನೂರು ಗ್ರಾಮದ ಸ.ನಂ.145ರಲ್ಲಿರುವ ವಡ್ಡನಕಟ್ಟೆ ಸರ್ಕಾರಿ ಕೆರೆ ಪುರಸಭೆ ವ್ಯಾಪ್ತಿಗೊಳಪಟ್ಟು 12.20 ಎಕರೆ ವಿಸ್ತೀರ್ಣವಿದೆ. ಕೆಲ ವರ್ಷಗಳಿಂದ ಭೂಗಳ್ಳರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಸಮತಟ್ಟಾಗಿಸಿ ಲೇಔಟ್ ಮೂಲಕ ಕಟ್ಟಡ ಮನೆ ಪಾರ್ಕ ನಿರ್ಮಾಣ ಮಾಡಿಕೊಂಡಿದ್ದರು. ಸ್ಥಳೀಯ ಸಂಘಟನೆ, ಸಾರ್ವಜನಿಕರ ತೀವ್ರ ಹೋರಾಟದ ಪ್ರತಿಫಲವಾಗಿ ಕಡು ಬಡವರ ಸಣ್ಣಸಟ್ಟ ಮನೆಗಳನ್ನು ಮಾತ್ರ ಸ್ಥಳೀಯ ಆಡಳಿತ ತೆರವುಗೊಳಿಸಿತ್ತು. ಆದರೆ ಇನ್ನೂ ಹಲವು ಪ್ರಭಾವಿಗಳ ಮನೆ ಲೇಔಟ್ ಪಾರ್ಕ ತೆರವುಗೊಳಿಸದೆ ಜಾಣ ಕುರುಡು ಆಟವಾಡುತ್ತಾ ಕಾಲ ವಿಳಂಬ ಮಾಡುತ್ತಿರುವ ಪುರಸಭೆ ಅಧಿಕಾರಿಗಳು ಅಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಪರವಾನಿಗೆ ಮತ್ತು ಈ-ಸ್ವತ್ತು ನೀಡಿರುವ ಜತೆಗೆ ಒತ್ತುವರಿಯಾದ ಕೆರೆ ಏಳು ಗುಂಟೆ ಭೂಮಿಯಲ್ಲಿ ನಿರ್ಮಾಣವಾದ ಪಾರ್ಕ್ ಖಾಸಗಿ ಸಂಸ್ಥೆಗೆ ನೀಡುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ ಅವರು ಸಂಚಿನಲ್ಲಿ ಭಾಗಿಯಾದ ಅಧಿಕಾರಿಗಳನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ನಾಲ್ಕು ಗುಂಟೆ ಕೆರೆ ಭೂಮಿಯಲ್ಲಿ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ನಿರ್ಮಿಸಲಾಗಿದ್ದು, ಸದರಿ ಪ್ರಕರಣ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಹೊರತುಪಡಿಸಿ ಉಳಿದ ಒತ್ತುವರಿ ಕೆರೆ ಭೂಮಿ ತೆರವುಗೊಳಿಸಲು ಸಮಸ್ಯೆಗಳು ಇರುವುದಿಲ್ಲ. ಇತ್ತೀಚಿನ ದಿನದಲ್ಲಿ ನಗರ ಪ್ರದೇಶ ಭೂಮಿಯ ಬೆಲೆ ತೀವ್ರ ಹೆಚ್ಚಳವಾಗುತ್ತಿದ್ದು ಈ ದಿಸೆಯಲ್ಲಿ ಸರ್ಕಾರಿ ಭೂಮಿ, ಕೆರೆಗಳ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದ ಅವರು, ಸರ್ಕಾರಿ ಕೆರೆಗಳನ್ನು ಅಳತೆಗೊಳಪಡಿಸಿ ಒತ್ತುವರಿ ಪ್ರದೇಶ ತೆರವುಗೊಳಿಸುವ ಜತೆಗೆ ವಶಕ್ಕೆ ಪಡೆದು ಬೇಲಿ ಹಾಕಿಸಿ ಸಂರಕ್ಷಿಸಿ ಸದರಿ ಪ್ರದೇಶ ಸರ್ಕಾರಿ ಕೆರೆ ಎಂದು ಘೋಷಿಸಿ ಸ.ನಂ. ಹಾಗೂ ವಿಸ್ತೀರ್ಣದೊಂದಿಗೆ ನಾಮಫಲಕ ಅಳವಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 192 (ಎ )ಅಡಿಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಮತ್ತು ಜಯ ಕರ್ನಾಟಕ ಸಂಘಟನೆ ಹಾಗೂ ಗೆಳೆಯರ ಬಳಗದ ಮೂಲಕ ದೂರಿನ ಪ್ರತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ,ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್‌ ಮೂಲಕ ಸಲ್ಲಿಸಲಾಯಿತು.

ಈ ವೇಳೆ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮಂಜುನಾಥ್, ಗೆಳೆಯರ ಬಳಗದ ಅಬ್ದುಲ್ ಗಫಾರ್ ಸಾಬ್, ಆಯೇಶ, ಇಂತಿಯಾಜ್, ಚಂದ್ರಶೇಖರ್, ಗುರು, ಫಕೀರಪ್ಪ, ರುದ್ರಪ್ಪ, ನಾಗರಾಜ್ ನಾಯ್ಕ, ಸುರೇಶ್ ನಾಯ್ಕ, ಲಿಂಗರಾಜು ವಿಕ್ರಂ, ಸಿದ್ದಪ್ಪ, ಎಲ್ಲಪ್ಪ ಸಹಿತ ಹಲವರು ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?