ಕನ್ನಡಪ್ರಭ ವಾರ್ತೆ ಸೊರಬ
ಪರಿಸರ ವೈಪರೀತ್ಯದಿಂದ ಇಂದು ಅಂತರ್ಜಲ ಕುಗ್ಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನೀರನ್ನು ಹಿಡಿದಿಟ್ಟು ಇಂಗಿಸುವ ಕಾರ್ಯದಲ್ಲಿ ಮಗ್ನರಾಗಿ, ರೈತಸಮೂಹಕ್ಕೆ ನೆರವಾಗುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸತ್ಕಾರ್ಯ ಶ್ಲಾಘನೀಯ ಎಂದು ಶಾಂತಪುರ ಸಂಸ್ಥಾನ ಮಠದ ಷ.ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ತಾಲೂಕಿನ ಜಡೆ ಹೋಬಳಿ ವ್ಯಾಪ್ತಿಯ ಸೂರಣಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 577ನೇ ನಮ್ಮೂರ ನಮ್ಮಕೆರೆ ಕಾರ್ಯಕ್ರಮದಲ್ಲಿ ಬಸವನಕಟ್ಟೆ ಕೆರೆಯನ್ನು ಪುನಃಶ್ಚೇತನಗೊಳಿಸಿದ ಹಿನ್ನೆಲೆ ಕೆರೆಗೆ ಬಾಗಿನ ಅರ್ಪಿಸಿದ ನಂತರ ಕೆರೆ ಹಸ್ತಾಂತರ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಸ್ಥರಿಗೆ ಕೆರೆಯಲ್ಲಿನ ಹೂಳು ತೆಗೆದು, ಹೆಚ್ಚಿನ ನೀರು ಸಂಗ್ರಹಣೆ ಆಗುವಂತೆ ಮಾಡಿ ಕೆರೆ ಏರಿ ಭದ್ರಪಡಿಸಿದ್ದಾರೆ. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಿದ್ದಾರೆ. ಆ ಮೂಲಕ ಅಂತರ್ಜಲ ಹೆಚ್ಚಿಸುವ ಸತ್ಕಾರ್ಯ ಮಾಡಿದ್ದಾರೆ. ಇನ್ನು ಮುಂದೆ ಕೆರೆಯ ನೀರನ್ನು ಶುಚಿಯಾಗಿಟ್ಟುಕೊಂಡು ಕೆರೆಯನ್ನು ರಕ್ಷಣೆ ಮಾಡುವುದು ಗ್ರಾಮಸ್ಥರ ಜವಾಬ್ದಾರಿ ಎಂದರು.ಶಿರಸಿ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಗ್ರಾಮ ಪಂಚಾಯತಿ ಮತ್ತು ಕೆರೆ ಸಮಿತಿ ಸದಸ್ಯರಿಗೆ ಕೆರೆ ರಕ್ಷಣೆ ಜವಾಬ್ದಾರಿ ಹಸ್ತಾಂತರ ಬಳಿಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯಗಳು ಮನೆ ಮನೆಗೂ ತಲುಪಿದ್ದಲ್ಲದೇ ಆರ್ಥಿಕ ಸಬಲೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.ತಾಲೂಕಿನಲ್ಲಿ ಅ ಹೆಚ್ಚು ಕೆರೆಗಳಿದ್ದು, ಈ ಪೈಕಿ 9 ಕೆರೆಗಳನ್ನು ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಬಸವನಕಟ್ಟೆ ಕೆರೆಯೂ ಒಂದಾಗಿದೆ. ಕೇವಲ ಸಂಸ್ಥೆಯಿಂದ ಮಾತ್ರ ಈ ಕಾರ್ಯ ನಡೆಯಲು ಸಾಧ್ಯವಿಲ್ಲ. ಗ್ರಾಮದ ಜನತೆ ಸಹಕಾರದಿಂದ ಯೋಜನೆ ಸಫಲವಾಗಲು ಸಾಧ್ಯವಿದೆ. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದಂತೆ ಯಾವುದೇ ಕಾರ್ಯಗಳನ್ನು ಮಾಡುವಾಗ ಅದನ್ನು ಪೂರ್ಣಗೊಳಿಸುವುದೇ ಮನುಷ್ಯ ಹಾಗೂ ಸಮಾಜದ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ ಸೂರಣಗಿ ಕೆರೆ ಅಭಿವೃದ್ಧಿ ಸಂಸ್ಥೆಯ ಹೆಮ್ಮೆಯಾಗಿದೆ ಎಂದರು. ತಾಪಂ ಇಒ ಡಾ. ಎನ್.ಆರ್. ಪ್ರದೀಪ್‌ಕುಮಾರ್ ಮಾತನಾಡಿ, ಧರ್ಮಸ್ಥಳ ಯೋಜನೆಯು ಗ್ರಾಮೀಣ ಮಟ್ಟದ ಜನರ ಜೀವನ ಪದ್ಧತಿಯಲ್ಲಿ ಪರಿವರ್ತನೆ ತರುವುದರೊಂದಿಗೆ ನಾವು, ನಮ್ಮ ಊರು, ನಮ್ಮ ಸಮಾಜ, ನಮ್ಮ ಕೆರೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದರೊಂದಿಗೆ ಸಾರ್ವಜನಿಕ ಆಸ್ತಿಗಳ ರಕ್ಷಣೆ ಮಾಡುತ್ತಿದೆ. ತಾಲೂಕಿನಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲ ಕಡೆಗಳಲ್ಲೂ ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
ಆರ್.ಮೃತ್ಯುಂಜಯಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಎಸ್. ಪರಶುರಾಮ, ಪಿ.ಕಾಳಿಂಗರಾಜ್, ಯೋಜನಾಧಿಕಾರಿ ಸುಬ್ರಾಯ್ ನಾಯ್ಕ್, ಕೃಷಿ ಮೇಲ್ವಿಚಾರಕ ಡಿ. ಲೋಕೇಶ್, ಮೇಲ್ವಿಚಾರಕ ರಾಜಪ್ಪ, ತಲಗುಂದ ಗ್ರಾ.ಪಂ. ಸದಸ್ಯರಾದ ಎಸ್. ಕಲಾವತಿ, ಊರಿನ ಮುಖಂಡರು, ಗ್ರಾಮಸ್ಥರು, ಕೆರೆ ಸಮಿತಿ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.- - - -13ಕೆಪಿಸೊರಬ02:
ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 577ನೇ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಲ್ಲಿ ಪುನಃಶ್ಚೇತನಗೊಂಡ ಬಸವನಕಟ್ಟೆ ಕೆರೆಗೆ ಬಾಗಿನ ಅರ್ಪಿಸಲಾಯಿತು.