ಶೀಘ್ರವೇ ಲಕ್ಕುಂಡಿ ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆ ಸಾಧ್ಯತೆ: ಸಭಾಪತಿ ಬಸವರಾಜ ಹೊರಟ್ಟಿ

KannadaprabhaNewsNetwork |  
Published : May 03, 2026, 02:15 AM IST
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಶೀಘ್ರವೇ ಲಕ್ಕುಂಡಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳ್ಳುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಶೀಘ್ರವೇ ಲಕ್ಕುಂಡಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳ್ಳುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಲೂಕಿನ ಲಕ್ಕುಂಡಿಯಲ್ಲಿ ಶನಿವಾರ ನಡೆದ ಪ್ರಾಚ್ಯಾವಶೇಷ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಪುರಾತತ್ವ ವಸ್ತುಗಳು ಮತ್ತು ಬಂಗಾರದ ನಾಣ್ಯಗಳ ಘಟನೆ ಬಳಿಕ ಲಕ್ಕುಂಡಿ ರಾಜ್ಯ ಅಷ್ಟೇ ಅಲ್ಲದೆ ದೇಶದ ಗಮನ ಸೆಳೆದಿದೆ. ಈ ಹಿಂದೆ ಕೇವಲ ಹಾದು ಹೋಗುವ ಸ್ಥಳವೆಂದು ಭಾವಿಸಿದ್ದ ಲಕ್ಕುಂಡಿ, ಈಗ ತನ್ನ ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ತಿಳಿಸಿದರು.

ಸಚಿವ ಎಚ್.ಕೆ. ಪಾಟೀಲ ಅವರ ಪ್ರಯತ್ನಗಳಿಂದ ಲಕ್ಕುಂಡಿಯ ಇತಿಹಾಸ ಜನರಿಗೆ ಪರಿಚಿತವಾಗಿದ್ದು, ಈ ಕಾರ್ಯ ಎಲ್ಲರೂ ಹೆಮ್ಮೆ ಪಡುವಂತಹದ್ದು. ಲಕ್ಕುಂಡಿಯ ಶಿಲ್ಪಕಲೆ, ದೇವಾಲಯಗಳು, ಕೆರೆಗಳು ಮತ್ತು ಪ್ರಾಚೀನ ನಿರ್ಮಾಣಗಳು ಅಚ್ಚರಿ ಮೂಡಿಸುವಂತಿವೆ. ಇಂದಿನ ತಂತ್ರಜ್ಞಾನದಲ್ಲಿಯೂ ಸಾಧ್ಯವಿಲ್ಲ ಎನ್ನಿಸುವ ಸೂಕ್ಷ್ಮ ಶಿಲ್ಪಗಳನ್ನು ಆಗಿನ ಕಾಲದಲ್ಲಿ ನಿರ್ಮಿಸಿರುವುದು ಅಚ್ಚರಿಯ ಸಂಗತಿ. ಇದು ನಮ್ಮ ಪೂರ್ವಜರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಲಕ್ಕುಂಡಿಯಂತಹ ಪುರಾತತ್ವ ಸಂಪತ್ತು ಪ್ರದೇಶದ ಅಭಿವೃದ್ಧಿಗೆ ದಾರಿ ತೋರಿಸಬಲ್ಲದು. ಈ ಹಿನ್ನೆಲೆಯಲ್ಲಿ ಲಕ್ಕುಂಡಿಯನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಗುರುತಿಸುವ ಕೆಲಸ ನಡೆಯಬೇಕು. ಗ್ರಾಮಸ್ಥರು ತಮ್ಮ ಬಳಿ ಸಿಗುವ ಪುರಾತತ್ವ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸುತ್ತಿರುವುದು ಅಪೂರ್ವ ಉದಾಹರಣೆ. ಇಂತಹ ಹೃದಯ ಶ್ರೀಮಂತಿಕೆ ಎಲ್ಲೆಡೆ ಕಾಣುವುದಿಲ್ಲ. ಲಕ್ಕುಂಡಿಯ ಕೆರೆಗಳು, ದೇವಾಲಯಗಳು ಹಾಗೂ ಪುರಾತತ್ವ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ದೇಶಕ್ಕೆ ಮಾದರಿಯಾದ ಪುರಾತತ್ವ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಹೇಳಿದರು.

ನಾನು, ಎಚ್‌.ಕೆ. ಪಾಟೀಲರು ಒಮ್ಮೇಲೆ ರಾಜಕೀಯಕ್ಕೆ ಬಂದವರು. ಆದರೆ, ಬೇರೆ ಬೇರೆ ಪಕ್ಷಗಳಿಂದ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗಲೆಲ್ಲ ನಾವಿಬ್ಬರೂ ಒಟ್ಟಾಗಿ ಹೋರಾಟ ಮಾಡಿದ್ದೇವೆ. ಅದಕ್ಕೆ ಕೆಲವರು ಇವರದ್ದು ಮಿಲಾಪಿ ರಾಜಕೀಯ ಎಂದು ಟೀಕಿಸಿದ್ದಾರೆ. ಆದರೆ. ನಮ್ಮ ಮಿಲಾಪಿ ಇದ್ದದ್ದು ಕೇವಲ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಮಾತ್ರ. ಚುನಾವಣೆ ಬಂದಾಗ ನಾವೇ ಬೇರೆ, ಅವರೇ ಬೇರೆ ಎಂದು ತಮ್ಮ ಮತ್ತು ಎಚ್.ಕೆ. ಪಾಟೀಲ ರಾಜಕೀಯ ಒಡನಾಟ ಮತ್ತು ಹೋರಾಟ ಮನೋಭಾವನೆಯನ್ನು ಬಸವರಾಜ ಹೊರಟ್ಟಿ ಸ್ಮರಿಸಿಕೊಂಡರು.ಲಕ್ಕುಂಡಿ ಗ್ರಾಮಸ್ಥರ ಸಹಕಾರ ರಾಷ್ಟ್ರಕ್ಕೆ ಮಾದರಿ

ಗದಗ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಲಕ್ಕುಂಡಿ ಗ್ರಾಮದ ಜನರು ಉತ್ಖನನ ಸೇರಿದಂತೆ ಪುರಾತತ್ವ ಇಲಾಖೆ ನಡೆಸುತ್ತಿರುವ ಪ್ರತಿಯೊಂದು ಕಾರ್ಯಕ್ಕೂ ನೀಡುತ್ತಿರುವ ಸಹಕಾರ, ಸ್ಪಂದನೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಶ್ಲಾಘಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಾಚ್ಯಾವಶೇಷ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ವಿಷಯವಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಶ್ರಮ ಮತ್ತು ಕಲಾತ್ಮಕತೆ ಎಷ್ಟು ಉನ್ನತ ಮಟ್ಟದಲ್ಲಿತ್ತು ಎಂಬುದಕ್ಕೆ ಇಲ್ಲಿ ದೊರೆಯುತ್ತಿರುವ ವಸ್ತುಗಳೇ ಸಾಕ್ಷಿಯಾಗಿವೆ. ಅವುಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಸರ್ಕಾರಕ್ಕೆ ನೀಡುತ್ತಿರುವುದು ಗ್ರಾಮಸ್ಥರ ಬಹು ದೊಡ್ಡ ಗುಣವಾಗಿದೆ. ಇದು ಇಂದು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಇದೇ ರೀತಿ ಗ್ರಾಮಸ್ಥರು ಸಹಕಾರ ನೀಡಿದಲ್ಲಿ ಲಕ್ಕುಂಡಿ ಗ್ರಾಮ ಯುನೆಸ್ಕೋ ಪಟ್ಟಿಗೆ ಸೇರಲಿದೆ. ಹಂಪಿಯಂತೆ ಲಕ್ಕುಂಡಿಯೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಕೈ ಬೇಸಿ ಕರೆಯಲಿದೆ. ಲಕ್ಕುಂಡಿ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತೆಗೆದುಕೊಳ್ಳುತ್ತಿರುವ ಕ್ರಮ ಕೂಡಾ ಶ್ಲಾಘನೀಯ. ಕ್ಷೇತ್ರದ ಶಾಸಕನಾಗಿ ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಂಘದ ಚುನಾವಣೆ: ಗೆಲುವು ಸಾಧಿಸಿದ ಕ್ರಿಯಾ ಸಮಿತಿ
ಅಂಕಗಳ ಜತೆಯಲ್ಲಿ ಕೌಶಲ್ಯಜ್ಞಾನವಿದ್ದರೆ ಯಶಸ್ಸು: ಶಾಸಕ ಪ್ರಕಾಶ ಕೋಳಿವಾಡ