ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮ ರಾಷ್ಟ್ರ ಮಟ್ಟದಲ್ಲಿಯೇ ಅಗ್ರವಾದ ಪುರಾತತ್ವ ಕೇಂದ್ರವಾಗುವ ಅರ್ಹತೆ ಹೊಂದಿದ್ದು, ಅದನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಲಕ್ಕುಂಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈಗಾಗಲೇ ಪಂಚ ದೇವಾಲಯ ಮತ್ತು ಪಂಚಬಾವಿಗಳ ಅನಾವರಣ ಯಶಸ್ವಿಯಾಗಿ ನಡೆದಿದೆ. ಇದೀಗ 10 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. ಈ ಮೂಲಕ ಪುರಾತತ್ವ ಸ್ಮಾರಕಗಳ ಸಂಖ್ಯೆ 70ರ ಗಡಿ ದಾಟಿದೆ. ಲಕ್ಕುಂಡಿಯ ಅನೇಕ ದೇವಾಲಯಗಳು ಮತ್ತು ಬಾವಿಗಳು ಕಾಲಕ್ರಮೇಣ ನಿರ್ಲಕ್ಷ್ಯದಿಂದ ತಮ್ಮ ಗುರುತನ್ನು ಕಳೆದುಕೊಂಡಿದ್ದವು. ಅವುಗಳನ್ನು ಪತ್ತೆ ಹಚ್ಚಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಪುನರ್ ನಿರ್ಮಾಣ ಕೈಗೊಳ್ಳಲಾಗಿದೆ. 2026ರೊಳಗೆ ಕನಿಷ್ಠ 50 ಬಾವಿ ಮತ್ತು 50 ದೇವಾಲಯಗಳನ್ನು ಅನಾವರಣಗೊಳಿಸಿ 100ರ ಗಡಿಯನ್ನು ದಾಟುವ ಗುರಿ ಹೊಂದಲಾಗಿದೆ. ಇದಕ್ಕೆ ಲಕ್ಕುಂಡಿ ಜನರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
ಸ್ಮಾರಕಗಳ ಅಭಿವೃದ್ಧಿಗೆ ಪ್ರಸ್ತುತ ₹10.16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಲಗುಂಡಿಯಲ್ಲಿ ಬಸವೇಶ್ವರ ದೇವಾಲಯಕ್ಕೆ ₹1.58 ಕೋಟಿ, ಕನ್ನೇರ ಬಾವಿಗೆ ₹1.70 ಕೋಟಿ, ಮಲ್ಲಿಕಾರ್ಜುನ ದೇವಾಲಯಕ್ಕೆ ₹1.67 ಕೋಟಿ, ವಿರೂಪಾಕ್ಷೇಶ್ವರ ದೇವಾಲಯಕ್ಕೆ ₹1.81 ಕೋಟಿ, ಚಂದ್ರಮೌಳೇಶ್ವರ ದೇವಾಲಯಕ್ಕೆ ₹1.80 ಕೋಟಿ, ಕಲ್ಮಠ ದ್ವಾರಬಾಗಿಲು ಮತ್ತು ಬಾವಿಗೆ ₹1.50 ಕೋಟಿ ಮಂಜೂರಾಗಿದೆ. ಲಕ್ಕುಂಡಿಯಲ್ಲಿ ದೇಶದಲ್ಲೇ ಅತ್ಯುತ್ತಮ ಬಯಲು ವಸ್ತು ಸಂಗ್ರಹಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 1200ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳಿಗೆ ಸಂಖ್ಯೆ ನೀಡಲಾಗಿದೆ. ಶೀಘ್ರದಲ್ಲೇ ಈ ಸಂಖ್ಯೆ 2000 ದಾಟುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್., ಎಸ್ಪಿ ರೋಹನ್ ಜಗದೀಶ, ಪುರಾತತ್ತ್ವ ಇಲಾಖೆ ಆಯುಕ್ತ ಎ. ದೇವರಾಜು, ಲಕ್ಕುಂಡಿ ಪ್ರಾಧಿಕಾರ ಆಯುಕ್ತ ಶರಣು ಗೊಗೇರಿ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ ವಿಭೂತಿ, ಸಲಹಾ ಸಮಿತಿ ಸದಸ್ಯರಾದ ಜಿ.ಸಿ. ಬೆಟಸೂರುಮಠ, ಸಿದ್ದು ಪಾಟೀಲ, ಗೀತಾಂಜಲಿ ರಾವ, ಇಒ ಎಚ್.ಎಸ್. ಜಿನಗಾ, ಪಿಡಿಒ ಅಮೀರ ನಾಯಕ ಇತರರು ಇದ್ದರು.
ಬಂಗಾರದ ನಾಣ್ಯಗಳಂತಹ ಅಮೂಲ್ಯ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸುತ್ತಿರುವ ಲಕ್ಕುಂಡಿ ಜನರ ಪ್ರಾಮಾಣಿಕತೆ ಅಪರೂಪ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಪತ್ತೆಯಾದ ಬಂಗಾರದ ಮೌಲ್ಯವನ್ನು ತಜ್ಞರು ₹8 ಕೋಟಿ ಎಂದು ಅಂದಾಜಿಸಿದ್ದಾರೆ. ಲಕ್ಕುಂಡಿ, ಗದಗ, ಕಪ್ಪತಗುಡ್ಡ ಪ್ರವಾಸಿ ವಲಯ ರೂಪುಗೊಂಡಿದೆ. ಮುಖ್ಯಮಂತ್ರಿಗಳ ಬೆಂಬಲದೊಂದಿಗೆ ಲಕ್ಕುಂಡಿಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಪ್ರಸ್ತಾವನೆಗಳನ್ನು ಮಂಜೂರು ಮಾಡಲಾಗುವುದು. ಲಕ್ಕುಂಡಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದ ಸಚಿವರು ಲಕ್ಕುಂಡಿ ಜನರ ಸಹಾಯ ಸಹಕಾರವನ್ನು ಶ್ಲಾಘಿಸಿದರು.