ಒಂದೇ ಸ್ಥಳದಲ್ಲಿ ಉತ್ಖನನಕ್ಕೆ ಲಕ್ಕುಂಡಿ ಗ್ರಾಮಸ್ಥರ ವಿರೋಧ

KannadaprabhaNewsNetwork |  
Published : Jan 31, 2026, 02:15 AM IST
 | Kannada Prabha

ಸಾರಾಂಶ

ಕಳೆದ 12 ದಿನಗಳಿಂದ ಸತತವಾಗಿ ಉತ್ಖನನ ನಡೆಸಲಾಗುತ್ತಿದೆ. ಅಂದಾಜು 12 ಅಡಿ ಆಳಕ್ಕೆ ಭೂಮಿಯನ್ನು ಅಗೆದಿದ್ದರೂ ಯಾವುದೇ ಮಹತ್ವದ ಐತಿಹಾಸಿಕ ಕುರುಹುಗಳು ಲಭ್ಯವಾಗಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

​ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ಪುರಾತತ್ವ ಇಲಾಖೆ ಕೈಗೊಂಡಿರುವ ಉತ್ಖನನ ಕಾರ್ಯ ಶುಕ್ರವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳೀಯರ ತೀವ್ರ ಅಪಸ್ವರ ಹಾಗೂ ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಯಿತು.

ಕಳೆದ 12 ದಿನಗಳಿಂದ ಸತತವಾಗಿ ಉತ್ಖನನ ನಡೆಸಲಾಗುತ್ತಿದೆ. ಅಂದಾಜು 12 ಅಡಿ ಆಳಕ್ಕೆ ಭೂಮಿಯನ್ನು ಅಗೆದಿದ್ದರೂ ಯಾವುದೇ ಮಹತ್ವದ ಐತಿಹಾಸಿಕ ಕುರುಹುಗಳು ಲಭ್ಯವಾಗಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಯುವಕ ಸಂಘದ ವತಿಯಿಂದ ದೇವಸ್ಥಾನದಿಂದ ಪುಷ್ಕರಣಿಗೆ ಪೈಪ್‌ಲೈನ್ ಅಳವಡಿಸುವಾಗಲೂ ಯಾವುದೇ ಅವಶೇಷಗಳು ಸಿಕ್ಕಿರಲಿಲ್ಲ. ಈಗ ಸಿಗುತ್ತಿರುವ ಸಣ್ಣಪುಟ್ಟ ಕಲ್ಲುಗಳು ಗ್ರಾಮದ ಎಲ್ಲೆಡೆ ಲಭ್ಯವಿವೆ. ಸುಮ್ಮನೆ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡದೇ ಇಲ್ಲಿನ ಕೆಲಸ ನಿಲ್ಲಿಸಿ ಬೇರೆಡೆ ಉತ್ಖನನ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಉತ್ಖನನ ಜಾಗದಲ್ಲಿ ಉತ್ಖನನ ಪ್ರಾಂಭವಾಗುವ ಕೆಲ‌ ಸಮಯದ ಮುಂಚೆ ಬೃಹತ್ ನಾಗರಹಾವೊಂದು ಪ್ರತ್ಯಕ್ಷವಾಗಿರುವುದು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. 3 ಅಡಿಗೂ ಹೆಚ್ಚು ಉದ್ದವಿದ್ದ ಹಾವು ಕಂಡು ಜನರು ಭಯಪಟ್ಟಿದ್ದಾರೆ. ಸ್ಥಳೀಯ ನಿವಾಸಿ ಗೂಳಪ್ಪ ಕೋಳಿವಾಡ ಅವರು ಮೊದಲು ಹಾವನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಹೊರಬಿಟ್ಟಿದ್ದಾರೆ.

​ಉತ್ಖನನ ಸ್ಥಳದಲ್ಲಿಯೇ ಹಾವು ಕಂಡುಬಂದ ಹಿನ್ನೆಲೆ ಸ್ಥಳೀಯರಾದ ಅಶೋಕ ಬೂದಿಹಾಳ ಮಾತನಾಡಿ, ಈ ಭಾಗದಲ್ಲಿ ಹಿರಿಯರು ದೊಡ್ಡ ಹಾವನ್ನು ನೋಡಿದ್ದಾರೆ. ಹಾವು ಇದ್ದಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಮಾತಾಗಿದೆ. ಅದು ಶುಕ್ರವಾರದ ಘಟನೆಯಿಂದ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ ಎನ್ನುತ್ತಾರೆ.

​ಒಂದೆಡೆ ಇತಿಹಾಸದ ಶೋಧಕ್ಕಾಗಿ ಇಲಾಖೆ ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಯಾವುದೇ ಪ್ರಯೋಜನವಿಲ್ಲದ ಕಡೆ ಅಗೆಯಲಾಗುತ್ತಿದೆ ಎಂಬುದು ಗ್ರಾಮಸ್ಥರ ವಾದವಾಗಿದೆ. ಸ್ಥಳೀಯರ ವಿರೋಧದ ನಡುವೆ ಉತ್ಖನನ ಮುಂದಕ್ಕೆ ಸಾಗುವುದೇ ಅಥವಾ ಸ್ಥಳ ಬದಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ. ಟಿ.ಎಂ. ಕೇಶವ್ ನಿಧನ

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿದ್ದ ಉತ್ಖನನ ಕಾರ್ಯದ ನಿರ್ದೇಶಕರಾಗಿದ್ದ ಪುರಾತತ್ವ ತಜ್ಞ, ಕೇಂದ್ರ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಟಿ.ಎಂ. ಕೇಶವ್(77) ಅವರು ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಡಾ. ಟಿ.ಎಂ. ಕೇಶವ್ ಅವರ ನೇತೃತ್ವದಲ್ಲೇ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದ್ದು. ಲಕ್ಕುಂಡಿಯ ಪುರಾತತ್ವ ಮಹತ್ವವನ್ನು ಹೊರತರುವಲ್ಲಿ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿತ್ತು. ಡಾ. ಕೇಶವ್ ಹಾಗೂ ಶೈಜೇಶ್ವರ ಅವರ ಹೆಸರಿನಲ್ಲಿ ಲಕ್ಕುಂಡಿ ಉತ್ಖನನಕ್ಕೆ ಅಧಿಕೃತ ಪರವಾನಗಿಯನ್ನೂ ಪಡೆಯಲಾಗಿತ್ತು.ಡಾ. ಕೇಶವ್ ಅವರ ನಿಧನದಿಂದ ಪುರಾತತ್ವ ವಲಯಕ್ಕೆ ಮಾತ್ರವಲ್ಲ, ಲಕ್ಕುಂಡಿಯ ಇತಿಹಾಸ ಸಂಶೋಧನೆಗೆ ದೊಡ್ಡ ನಷ್ಟವಾಗಿದೆ ಎಂದು ಉತ್ಖನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು