ಹರಿಹರ ನಗರ ಹಸಿರಿಗೆ ಲಕ್ಷ ವೃಕ್ಷೋತ್ಸವ ಸಂಕಲ್ಪ

KannadaprabhaNewsNetwork |  
Published : Mar 01, 2024, 02:22 AM IST
ಹರಿಹರ ನಗರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ೨೦೨೪-೨೫ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಮಂಡಿಸಿದರು. | Kannada Prabha

ಸಾರಾಂಶ

ಅಭಿವೃದ್ಧಿ ಪೂರಕ ಬಜೆಟ್ ಇದಾಗಿದ್ದು, ಈ ನಿಟ್ಟಿನಲ್ಲಿ ವಿನೂತನ ಸ್ಪರ್ಶ ನೀಡಿ ಯೋಜನೆ ರೂಪಿಸಲಾಗಿದೆ ಮತ್ತು ಹರಿಹರಕ್ಕೆ ಆಧುನಿಕ ಲೇಪನ, ಪ್ರಕೃತಿ ಸೌಂದರ್ಯಕ್ಕೆ ವಿಶೇಷ ಒತ್ತು, ಪ್ರವಾಸೋದ್ಯಮ, ಭವಿಷ್ಯದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಕನ್ನಡಪ್ರಭ ವಾರ್ತೆ ಹರಿಹರ

ನಗರಸಭೆಯ ೨೦೨೪-೨೫ ನೇ ಸಾಲಿನ ಆಯವ್ಯಯವನ್ನು ರು.೫೬,೭೮,೧೧,೦೦೦ಗಳಿಗೆ ಮಂಡಿಸಿ ₹೪,೭೯,೦೦೦ ಗಳ ಉಳಿತಾಯ, ಅಭಿವೃದ್ಧಿ ಪೂರಕ ಬಜೆಟ್‌ನ್ನು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ.ವೆಂಕಟೇಶ್ ಮಂಡಿಸಿ ಅನುಮೋದನೆ ಪಡೆದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ೨೦೨೪-೨೫ನೇ ಸಾಲಿನ ಆಯವ್ಯಯ ಮಂಡಿಸಿದ ಆಡಳಿತಾಧಿಕಾರಿ, ನಗರಸಭೆಯ ಒಟ್ಟು ಆದಾಯ ಕೇಂದ್ರ, ರಾಜ್ಯ ಸರ್ಕಾರದಿಂದ ಬರುವ ಅನುದಾನ, ನಗರಸಭೆ ಆಸ್ತಿ, ನೀರಿನ ತೆರಿಗೆ, ಬಾಡಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ, ಜಾಹೀರಾತು ಶುಲ್ಕ ಸೇರಿ ಎಲ್ಲಾ ಮೂಲಗಳಿಂದ ರು.೫೬.೭೮ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಈ ಸಾಲಿಗೆ ರು.೫೬,೭೩,೩೨೦೦ ಗಳಿಗೆ ವಿವಿಧ ಯೋಜನೆಗಳು ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಖರ್ಚು ತೋರಿಸಿದ್ದು ೨೦೨೪-೨೫ನೇ ಸಾಲಿಗೆ ₹೪.೭೯ ಲಕ್ಷ ರೂ. ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ.

ಬಜೆಟ್‌ನ ಮುಖ್ಯಾಂಶಗಳು:

ಅಭಿವೃದ್ಧಿ ಪೂರಕ ಬಜೆಟ್ ಇದಾಗಿದ್ದು, ಈ ನಿಟ್ಟಿನಲ್ಲಿ ವಿನೂತನ ಸ್ಪರ್ಶ ನೀಡಿ ಯೋಜನೆ ರೂಪಿಸಲಾಗಿದೆ ಮತ್ತು ಹರಿಹರಕ್ಕೆ ಆಧುನಿಕ ಲೇಪನ, ಪ್ರಕೃತಿ ಸೌಂದರ್ಯಕ್ಕೆ ವಿಶೇಷ ಒತ್ತು, ಪ್ರವಾಸೋದ್ಯಮ, ಭವಿಷ್ಯದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಿದ್ದು ಇದಕ್ಕಾಗಿ ನಗರದಲ್ಲಿನ ರಸ್ತೆ, ಬಡಾವಣೆಗಳಲ್ಲಿ ಹಾಗೂ ಪಾರ್ಕ್ ಅಭಿವೃದ್ಧಿಪಡಿಸಿ ಗಿಡಗಳ ನೆಟ್ಟು ನಗರದ ಸೌಂದರ್ಯ ಹೆಚ್ಚಿಸುವುದು, ಅಂತರ್ಜಲ ಹೆಚ್ಚಳಕ್ಕೆ ಅಮೃತ ಸರೋವರ ನಿರ್ಮಾಣ ಮಾಡಿ ಅಂತರ್ಜಲ ಮಟ್ಟ ಕಾಯ್ದು ಬರಗಾಲದಲ್ಲಿಯೂ ಜನರಿಗೆ ನೀರಿನ ಕೊರತೆಯಾಗದಂತೆ ಮತ್ತು ನಗರದ ಜನರಿಗೆ ಬೇಸಿಗೆಯಲ್ಲಿ ನಿರಂತರ ಕುಡಿಯುವ ನೀರು ಒದಗಿಸಲು ರಾಜನಹಳ್ಳಿ ಸಮೀಪ ಎರಡು ಎಕರೆ ಜಮೀನಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ಕುಡಿಯುವ ನೀರು ಸಂಗ್ರಹಕ್ಕಾಗಿ ಭವಿಷ್ಯದ ಯೋಜನೆ ರೂಪಿಸಲಾಗಿದೆ.

ಅಭಿವೃದ್ಧಿ ಪೂರಕ ಬಜೆಟ್‌:

ಬಜೆಟ್ ಮಂಡನೆಯಲ್ಲಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇದೊಂದು ಅಭಿವೃದ್ಧಿ ಪೂರಕ ಭವಿಷ್ಯದ ಬಜೆಟ್ ಆಗಿದ್ದು ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್, ಪೌರಾಯುಕ್ತ ಬಸವರಾಜ ಐಗೂರು ಮತ್ತು ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಪ್ರವಾಸೋದ್ಯಮಕ್ಕೆ ಉತ್ತೇಜನ, ಫುಡ್ ಕೋರ್ಟ್ ನಿರ್ಮಾಣ

ನಗರದ ೧೦ ಅಂಗನವಾಡಿಗಳ ಸ್ಮಾರ್ಟ್ ಕೇಂದ್ರಗಳಾಗಿ ನಿರ್ಮಿಸಿ ಕಲಿಕೆಯಲ್ಲಿ ಆಧುನಿಕತೆ ಸ್ಪರ್ಶ ನೀಡಲಾಗುತ್ತದೆ. ಎಲ್ಲಾ ವಸ್ತುಗಳು ಒಂದೆಡೆ ಸಿಗುವಂತೆ ಮಾಡಲು ಅಮೃತ ಸ್ಟೋರ್ ಮತ್ತು ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನ ಹಾಗೂ ತುಂಗಭದ್ರಾ ನದಿಯ ತೀರ ಅಭಿವೃದ್ಧಿ ಮೂಲಕ ಪ್ರವಾಸೋದ್ಯಮ ಉತ್ತೇಜನಕ್ಕೆ ಆಯವ್ಯಯದಲ್ಲಿ ಯೋಜಿಸಲಾಗಿದೆ. ಜೊತೆಗೆ ಹರಿಹರ ಸಂಪರ್ಕ ಕೇಂದ್ರ ಸ್ಥಳವಾಗಿದ್ದು ಶಿವಮೊಗ್ಗ, ಹೊಸಪೇಟೆ, ಕಲಬುರಗಿ, ಧಾರವಾಡ, ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ಮತ್ತು ಪ್ರವಾಸಿಗರ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಒಂದೇ ಸೂರಿನಡಿ ತರೇಹವಾರಿ ತಿನಿಸುಗಳು ಲಭ್ಯವಾಗಬೇಕೆಂದು ಫುಡ್ ಕೋರ್ಟ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು