ಕನ್ನಡಪ್ರಭ ವಾರ್ತೆ ವಿಜಯಪುರ
ಸಾಮಾನ್ಯ ಸಭೆಯಲ್ಲಿ ಮಾರ್ಧ್ವನಿಸಿದ ಬೀದಿ ದೀಪಗಳ ವಿಚಾರ..! ಸಂಡೆ ಬಜಾರ್ ಶುಲ್ಕ ವಸೂಲಾತಿ..! ಭಾರತದ ವಿರುದ್ಧ ಮಾತನಾಡಿದವರ ಮೇಲೆ ಕ್ರಮಕ್ಕೆ ಆಗ್ರಹ..! ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರಗಳದ್ದೇ ಬಿಸಿಬಿಸಿ ಚರ್ಚೆಯಾಯಿತು.ಮಹಾಪೌರರಾದ ಮೆಹಜಬಿನ್ ಹೊರ್ತಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಆರಂಭವಾದ ಮಹಾನಗರ ಪಾಲಿಕೆ 3ನೇ ಸಭೆಯಲ್ಲಿ ಮಾತನಾಡಿದ ಸದಸ್ಯ ರಾಜು ಚವ್ಹಾಣ ಬೀದಿ ದೀಪಗಳ ನಿರ್ವಹಣೆ ಏಜನ್ಸಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಗರದಾದ್ಯಂತ ಗುತ್ತಿಗೆ ಪಡೆದಿರುವ ಏಜನ್ಸಿಗಳಾದ ಆರ್ ಕೆ ಏಜನ್ಸಿ ಹಾಗೂ ಚೈತನ್ಯ ಏಜನ್ಸಿಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ಅವರನ್ನು ಬದಲಾಯಿಸಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ್ ಗಡಗಿ, ಸುಮಿತ್ರಾ ಜಾಧವ್, ಕಿರಣ ಪಾಟೀಲ್ ಧ್ವನಿಗೂಡಿಸಿದರು. ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ಸರಿಯಾಗಿ ಕಾರ್ಯ ನಿರ್ವಹಿಸದ ಏಜನ್ಸಿಗೆ ಈಗಾಗಲೇ ದಂಡ ಹಾಕಲಾಗಿದ್ದು, ನೊಟೀಸ್ ಕೊಡಲಾಗಿದೆ. ಮುಂದೆ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸದಂತೆ ನೋಡಿಕೊಳ್ಳಲಾಗುವುದು ಎಂದರು.ಈ ವೇಳೆ ಮಾತನಾಡಿದ ಸದಸ್ಯ ಪ್ರೇಮಾನಂದ ಬಿರಾದಾರ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದರ್ಪದಿಂದ ಸಂಡೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಅವರಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಕಲ್ಪಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಇತರೆ ಸದಸ್ಯರು ಬಡವರ ಮೇಲೆ ಟೆಂಡರದಾರರು ದೌರ್ಜನ್ಯ ಮಾಡಬಾರದು, ಅವರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.ಬಾಕ್ಸ್
ಪ್ರಮುಖ ವಿಷಯಗಳ ಚರ್ಚೆಹಿಂದಿನ ಸಭೆಯ ನಡಾವಳಿಗಳ ದೃಢೀಕರಿಸುವುದು.ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೃತ್ತ ನಿರ್ಮಿಸುವುದು.ಲೀಸ್ ಅವಧಿ ಮುಗಿದಿರುವ ಸಾಮಿಲ್ ಗಳ ಕುರಿತು ಚರ್ಚೆ.ಸಂಡೆ ಬಜಾರ್ ಸಂತೆ ಕರ ಹರಾಜಿನ ದರ ಮಂಜೂರಿಸುವುದು.24-25ನೇ ಸಾಲಿನ ಬೀದಿ ದೀಪಗಳ ನಿರ್ವಹಣೆ, ದುರಸ್ತಿ ಟೆಂಡರ್ಮೋಡಕಾ ಬಜಾರ್ ಮೊದಲ ಅಂತಸ್ತಿನ ಅಂಗಡಿಗಳ ಹರಾಜುಬಬಲೇಶ್ವರ ನಾಕಾದಲ್ಲಿ ನಿರ್ಮಿಸಿದ ಹೊಸ ಮಳಿಗೆಗಳ ಹರಾಜುಬಾಕ್ಸ್
ಘೋಷಣೆಗೆ ಸಭೆಯಲ್ಲಿ ಖಂಡನೆಸಭೆ ಆರಂಭವಾಗುತ್ತಿದ್ದಂತೆ ವಿಧಾನಸೌಧದಲ್ಲಿ ಭಾರತದ ವಿರುದ್ಧ ಘೋಷಣೆ ಕೂಗಿದ್ದವರ ವಿರುದ್ಧ ಕ್ರಮ ಆಗಬೇಕು, ಘಟನೆಯನ್ನು ಖಂಡಿಸಬೇಕು ಎಂದು ಸದಸ್ಯ ಶಿವರುದ್ರ ಬಾಗಲಕೋಟ ಆಗ್ರಹಿಸಿದರು. ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಆರತಿ ಶಹಾಪುರ ಅವರು ಘೋಷನೆ ಕೂಗಿದ್ದು ಇನ್ನೂ ಖಚಿತವಾಗಿಲ್ಲ, ಅಂತಿಮವಾದ ಮೇಲೆ ಈ ವಿಷಯ ಚರ್ಚಿಸಬೇಕು ಎಂದರು. ಈ ವೇಳೆ ಮಹಾಪೌರರು ಹಾಗೂ ಉಪಮಹಾಪೌರರು ದೇಶ ವಿರೋಧಿಗಳಿಗೆ ಯಾವಾಗಲೂ ಖಂಡನೆ ಇದ್ದೇ ಇದೆ ಎಂದರು.
ಬಾಕ್ಸ್ಟಾಂಗಾ ಏರಿ ಗಮನ ಸೆಳೆದ ಮೇಯರ್
ಇಂದಿನ ಪಾಲಿಕೆಯ ಸಾಮಾನ್ಯ ಸಭೆಗೆ ಮೇಯರ್ ಟಾಂಗಾದಲ್ಲಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು. ಪಾಲಿಕೆ ಸಾಮಾನ್ಯ ಸಭೆಗೆ ಟಾಂಗಾದಲ್ಲಿ ಬಂದ ಮಹಾಪೌರರು ನನಗೆ ವಾಹನ ನೀಡಿಲ್ಲ, ಹಾಗಾಗಿ ಸಭೆಗೆ ಬರುವುದು ತಡವಾಯಿತು ಎಂದರು. ಬಳಿಕ, ಈ ವಿಚಾರ ಸಭೆಯಲ್ಲೂ ಚರ್ಚೆಗೆ ಕಾರಣವಾಯಿತು. ಹೊಸ ಮಂಡಳಿ ರಚನೆಯಾಗಿ ಎರಡು ತಿಂಗಳಾಗಿದೆ, ಇದುವರೆಗೂ ಪ್ರಥಮ ಪ್ರಜೆಗೆ ವಾಹನ ನೀಡದೆ ಅವಮಾನಿಸಲಾಗಿದೆ ಎಂದು ಸದಸ್ಯ ಪ್ರೇಮಾನಂದ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು. ಇತರೇ ಸದಸ್ಯರು ಸಹ ಪಾಲಿಕೆಯ ಅಧಿಕಾರಿಗಳ ಈ ವರ್ತನೆ ಸರಿಯಲ್ಲ ಎಂದು ಎಚ್ಚರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು ಮಹಾಪೌರರಿಗೆ ವಾಹನ ನೀಡಲಾಗಿದೆ, ಆದ್ರೆ ಇವತ್ತು ಏನು ಸಮಸ್ಯೆ ಆಗಿದೆ ಎಂಬುದನ್ನು ಪರಿಶೀಲಿಸಿ ಮುಂದೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.ಸಭೆಯಲ್ಲಿ ಮಹಾಪೌರರಾದ ಮೆಹಜಬಿನ್ ಹೊರ್ತಿ, ಉಪ ಮಹಾಪೌರ ದಿನೇಶ ಹಳ್ಳಿ, ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪಾಲಿಕೆ ಸದಸ್ಯರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.