ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಂಜನಗೂಡು ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣ- ಕರ್ನಾಟಕದ ಸಾಂಸ್ಕೃತಿಕ ನಾಯಕ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನ ಸಾಹಿತ್ಯ ರಚನೆಯಾಗಲಿಲ್ಲ ಎಂದರೇ ಕನ್ನಡ ಸಾಹಿತ್ಯ ಬರಡಾಗುತ್ತಿತ್ತು. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗಲು ವಚನ ಸಾಹಿತ್ಯವೇ ಕಾರಣ ಎಂದರು.
ಅನುಭವ ಮಂಟಪ ಸ್ಥಾಪಿಸಿ, ಇಲ್ಲಿ ಇವ ನಮ್ಮವ, ಇವ ನಮ್ಮವ.. ಎಂದು ಎಲ್ಲರಿಗೂ ಜಾಗ ನೀಡಿದ, ಕಸ ಗುಡಿಸುವವನಿಂದ ಹಿಡಿದು ಮಹಾರಾಜರವರೆಗೆ ಎಲ್ಲರಿಗೂ ಸಮಾನವಾಗಿ ಕಂಡ ಬಸವಣ್ಣನವರು ವಿಶ್ವಗುರುವಾಗಲು, ಸಾಂಸ್ಕೃತಿಕ ನಾಯಕರಾಗಲು ಅರ್ಹರು. ಆದರೆ ಎಷ್ಟೋ ಮಂದಿ ಇವತ್ತಿಗೂ ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದ ಅವರು ವಿಷಾದಿಸಿದರು.ಬಸವಣ್ಣನವರ ಪಾರದರ್ಶಕತೆ ರಾಜ್ಯಕ್ಕೆ ಭೇಟಿ ನೀಡಿದ್ದ ಮಹಾತ್ಮಗಾಂಧಿ ಅವರ ಮೇಲೆ ಪರಿಣಾಮ ಬೀರಿತ್ತು. ಅಂಬೇಡ್ಕರ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಬಸವಣ್ಣವರ ಸಾಹಿತ್ಯ ಕೃತಿಗಳನ್ನು ಕೇಳಿದ್ದರು. ಏಕೆಂದರೆ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಪಾಲಕ ಮೂರ್ತಿಯಾಗಿದ್ದರು ಎಂದರು.
ರಾಜೇಂದ್ರ ಶ್ರೀಗಳ ಸ್ಮರಣೆ
ಅದೇ ರೀತಿ ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ರಾಜೇಂದ್ರ ಶ್ರೀಗಳ ಮಾರ್ಗದಲ್ಲಿ ಸಾಗಿ ಲಕ್ಷಾಂತರ ಮಂದಿಯ ವಿದ್ಯಾರ್ಜನೆಗೆ ಕಾರಣಕರ್ತರಾಗಿದ್ದಾರೆ. ಐವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ, ಅವರ ಕುಟುಂಬ ಬೆಳಗುವಂತೆ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅವರನ್ನು ಕೇವಲ ಒಂದು ವರ್ಗದ ಧಾರ್ಮಿಕ ನಾಯಕ ಎಂದು ಬಿಂಬಿಸುವುದರಿಂದ ವಿಮೋಚನೆ ದೊರೆತಿದೆ. ಆದ್ದರಿಂದ ಈ ಬಾರಿಯ ಬಸವ ಜಯಂತಿಗೂ ಮುನ್ನಾ ಬಿರುದಾಂಕಿತವಾಗಿ ಬಸವಣ್ಣನವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ಹಳ್ಳಿ ಹಳ್ಳಿಗಳಲ್ಲಿ ಯಾತ್ರೆ ನಡೆಸಬೇಕು ಎಂದು ಸಲಹೆ ಮಾಡಿದರು.
ಸರಣಿ ಉಪನ್ಯಾಸ ಮಾಲಿಕೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್ ಆಶಯ ಭಾಷಣ ಮಾಡಿದರು.
ವಿದ್ಯಾರ್ಥಿನಿ ಡಿ. ನಮಿತಾ ಪ್ರಾರ್ಥಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಎನ್. ಜಯಶೀಲಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗೂಳಪ್ಪ ಸ್ವಾಮಿ ವಂದಿಸಿದರು.