ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಬೆಳಕಿನ ಹಬ್ಬ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ 5 ದಿನಗಳ ಲಕ್ಷದೀಪೋತ್ಸವ ಸಂಭ್ರಮ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಚಟುವಟಿಕೆಗಳ ಮೂಲಕ ಶನಿವಾರ ಪ್ರಾರಂಭವಾಗಲಿದೆ.
ಸಂಜೆ 6 ಗಂಟೆಯಿಂದ ಶ್ರೀ ಸರ್ವೇಶ ದೇವಸ್ಥಳಿ ಉಜಿರೆ ಮತ್ತು ಸಹ ಕಲಾವಿದರಿಂದ ಭಕ್ತಿ ರಸಾಂಜಲಿ, 7 ರಿಂದ ಬೆಂಗಳೂರಿನ ಮೇಘನಾ ವರದರಾಜು ಅವರಿಂದ ನೃತ್ಯ ನಿವೇದನಮ್, 8 ಗಂಟೆಯಿಂದ ಕಿನ್ನಿಗೋಳಿಯ ಲೋಲಾಕ್ಷ ಮತ್ತು ಬಳಗದವರಿಂದ ಜಾದೂ ಪ್ರದರ್ಶನ, 8.50 ಕ್ಕೆ ಕಾರ್ಕಳದ ಶ್ರೀ ನೃತ್ಯಾಲಯದ ವಿದ್ವಾನ್ ಸುಬ್ರಹ್ಮಣ್ಯ ನಾವಡ ಇವರಿಂದ ನೃತ್ಯರೂಪಕ, ಬಳಿಕ ಕೊನೆಯಲ್ಲಿ ಎಸ್.ಡಿ.ಎಂ.ಕಾಲೇಜು ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪಾದಯಾತ್ರೆ:
ಶಿವಪಂಚಾಕ್ಷರಿ ಜಪ ಹಾಗೂ ಭಕ್ತಿ ಭಜನೆಯ ಮೂಲಕ ಉಜಿರೆ ಶ್ರೀ ಜನಾರ್ದನ ಸ್ವಾಮೀ ದೇವಳದಿಂದ ಧರ್ಮಸ್ಥಳದವರೆಗೆ ಸಾವಿರಾರು ಭಕ್ತ ಸಂದೋಹವು ಶನಿವಾರ ಸಂಜೆ 3 ಗಂಟೆಯಿಂದ 13 ನೇ ವರ್ಷದ ಪಾದಯಾತ್ರೆ ನಡೆಸಲಿದೆ. ಉಜಿರೆ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ 10 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಜೆ 6 ಗಂಟೆಯ ಸುಮಾರಿಗೆ ಪಾದಯಾತ್ರೆಯು ಧರ್ಮಸ್ಥಳ ಪ್ರವೇಶಿಸಲಿದೆ. ಬಳಿಕ ಯಾತ್ರಿಕರು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಶೀರ್ವಾದ ಪಡೆಯಲಿದೆ.ವಸ್ತು ಪ್ರದರ್ಶನ ಮಂಟಪದಲ್ಲಿ ನಾಳೆ
ಸಂಜೆ 6 ಗಂಟೆಯಿಂದ ಧಾರವಾಡದ ಡಾ. ವಿಜಯ ಕುಮಾರ್ ಪಾಟೀಲ್ ಇವರಿಂದ ಭಜನ್ ಸಂಧ್ಯಾ, 7 ಗಂಟೆಯಿಂದ ವಿದುಷಿ ನಿಶಾ ಪ್ರಸಾದ್ ಮಣೂರು ಇವರಿಂದ ನೃತ್ಯಾಂಜಲಿ, 8 ಗಂಟೆಯಿಂದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಸಹೋದರಿಯರಿಂದ ಯುಗಳ ನೃತ್ಯ, 9 ಗಂಟೆಯಿಂದ ಬೆಂಗಳೂರು ಮಹಿಮಾ ಎನ್. ಮರಾಠೆ ಇವರಿಂದ ಶಾಸ್ತ್ರೀಯ ಸಮೂಹ ನೃತ್ಯ ಬಳಿ, ವಿದುಷಿ ವಿದ್ಯಾ ಮನೋಜ್ ಕಲಾನಿಕೇತನ ಕಲ್ಲಡ್ಕ ಇವರಿಂದ ನೃತ್ಯ ವಲ್ಲರಿ ಇರಲಿದೆ.