ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾರಥೋತ್ಸವ ಸಂಪನ್ನ

KannadaprabhaNewsNetwork |  
Published : Jul 07, 2025, 11:48 PM IST
ಲಕ್ಷ್ಮಿ ಗೋವಿಂದರಾಜ ಸ್ವಾಮಿ | Kannada Prabha

ಸಾರಾಂಶ

ಅಲಂಕಾರ ಪ್ರಿಯನಾದ ವೆಂಕಟರಮಣ ಸ್ವಾಮಿಯು ತನ್ನ ಪತ್ನಿಯರಾದ ಶ್ರೀದೇವಿ- ಭೂದೇವಿ ಸಮೇತ ವಿವಿಧ ಚಿನ್ನಾಭರಣಗಳ ಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ಕರುಣಿಸಿದ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರ ಸಮೀಪದ ಮಾಲೇಕಲ್ ತಿರುಪತಿ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವವು ವೈಖಾನಸಾಗಮ ಸಂಪ್ರದಾಯದಂತೆ ಮುಗಿಲು ಮುಟ್ಟಿದ ಗೋವಿಂದ ನಾಮಸ್ಮರಣೆಯೊಂದಿಗೆ ರಾಜ್ಯದ ಸಾವಿರಾರು ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ಸೋಮವಾರ ಮಧ್ಯಾಹ್ನ 12.30ಕ್ಕೆ ವಿಜೃಂಭಣೆಯಿಂದ ಜರುಗಿತು.

ದ್ವಾದಶಿಯಂದು ಜರುಗಿದ ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ತಂಡೋಪತಂಡವಾಗಿ ದೇವಾಲಯಕ್ಕೆ ಆಗಮಿಸಿದ ಸಹಸ್ರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ಬೆಟ್ಟದ ತಪ್ಪಲಿನಲ್ಲಿರುವ ಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಿದರು.

ಮಹಾರಥೋತ್ಸವ ನೆರವೇರುವ ವೇಳೆಯಲ್ಲಿ ಸಹಸ್ರಾರು ಮಂದಿ ಭಕ್ತ ಸಮೂಹ ಗೋವಿಂದನ ನಾಮಸ್ಮರಣೆ ಮಾಡುತ್ತಾ ಬಾಳೇಹಣ್ಣು, ದವನ- ಪುಷ್ಪಗಳನ್ನು ಮಹಾರಥದ ಮೇಲೆ ಎಸೆದು ತಮ್ಮ ಭಕ್ತಿ ಭಾವನೆಗಳನ್ನು ಅರ್ಪಿಸಿದರು. ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು, ಮಳೆರಾಯನೂ ಸಹ ತನ್ನ ಕಾರ್ಯಕ್ಕೆ ವಿರಾಮ ನೀಡಿದ ಕಾರಣ ಮುಂಜಾನೆಯಿಂದಲೇ ಸಾವಿರಾರು ಜನರು ಎಲ್ಲೆಡೆಯಿಂದ ಸಾಗರೋಪಾದಿಯಲ್ಲಿ ಮಾಲೇಕಲ್ ತಿರುಪತಿಯ ದೇವರ ಸನ್ನಿಧಿಗೆ ಹರಿದು ಬಂದರು.

ಬೆಟ್ಟದ ತಪ್ಪಲಿನಲ್ಲಿ ನಡೆಯುವ ಜಾತ್ರೆಗೆ ಆಗಮಿಸಿದ್ದ ಸಾವಿರಾರು ನವದಂಪತಿಗಳು ಸೇರಿದಂತೆ ಭಕ್ತರು ಬೆಳಗ್ಗೆ ೫ ಗಂಟೆಯಿಂದಲೇ ೧೨೬೦ ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮ ನವರ ದರ್ಶನ ಭಾಗ್ಯವನ್ನು ಪಡೆದರೆ, ಬೆಟ್ಟ ಹತ್ತಲಾರದ ಭಕ್ತವೃಂದ ತಪ್ಪಲಿನಲ್ಲಿರುವ ಶ್ರೀಗೋವಿಂದರಾಯಸ್ವಾಮಿ ಮತ್ತು ಶ್ರೀಲಕ್ಷ್ಮೀದೇವಿ ಅಮ್ಮನವರ ದರ್ಶನವನ್ನು ಗಂಟೆ ಗಟ್ಟಲೆ ಸಮಯ ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.

ರಥೋತ್ಸವ ಸಂದರ್ಭದಲ್ಲಿ ರಾಜ್ಯ ಗೃಹಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಜರಾಯಿ ಇಲಾಖೆ ಅಧಿಕಾರಿಯೂ ಆದ ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಎಂ. ಸಮಿಉಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಶ್ರೀದೇವಿ- ಭೂದೇವಿ ಸಮೇತನಾದ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ಅಲಂಕೃತ ರಥದ ಮೇಲೆ ಬಾಳೆಹಣ್ಣು ಎಸೆದರೆ ಮನದ ಇಷ್ಟಾರ್ಥಗಳು ಈಡೇರಲಿವೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ಹೆಚ್ಚಾಗಿ ನೂತನ ವಧು ವರರು ರಥೋತ್ಸವ ವೇಳೆ ತೇರಿಗೆ ಬಾಳೆಹಣ್ಣು ಎಸೆದು ಅಂದುಕೊಂಡಿದ್ದನ್ನು ಈಡೇರಿಸು ದೇವ ಎಂದು ಬೇಡುವ ದೃಶ್ಯ ಸಾಮಾನ್ಯವಾಗಿತ್ತು.

ಜಾತ್ರೆ ಅಂಗವಾಗಿ ಲಕ್ಷ್ಮೀ ಹಾಗೂ ಗೋವಿಂದರಾಜಸ್ವಾಮಿಗೆ ಹಾಗೂ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತ ಕಣ್ಮನ ಸೆಳೆಯಿತು.

ಜಾತ್ರೋತ್ಸವ ಹಿನ್ನೆಲೆ ಬೆಟ್ಟದ ಮೇಲಿನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ತಪ್ಪಲಿನಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯಗಳನ್ನು ಸುಣ್ಣ ಬಣ್ಣಗಳಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದ ಆವರಣದ ಉದ್ದಗಲಕ್ಕೂ ಕಟ್ಟಿರುವ ತಳಿರು ತೋರಣ ಭಕ್ತರನ್ನು ಸ್ವಾಗತಿಸಿದವು.

ಅಲಂಕಾರ ಪ್ರಿಯನಾದ ವೆಂಕಟರಮಣ ಸ್ವಾಮಿಯು ತನ್ನ ಪತ್ನಿಯರಾದ ಶ್ರೀದೇವಿ- ಭೂದೇವಿ ಸಮೇತ ವಿವಿಧ ಚಿನ್ನಾಭರಣಗಳ ಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ಕರುಣಿಸಿದ.

ರಥೋತ್ಸವದ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸತೀಶ್, ಉಪ ತಹಸೀಲ್ದಾರ್ ಶಿವಶಂಕರ್, ದೇವಾಲಯದ ಅಭಿವೃದ್ಧಿ ಸಮಿತಿಯ ನಾಗರಾಜು, ತಿರುಪತಿ ಚಂದ್ರು, ಎಸ್‌ವಿಟಿ ಬಾಬು, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ ಮೊದಲಾದವರಿದ್ದರು.

PREV