ಮಂಗಳೂರು ಸರ್ಕಾರಿ ಆಸ್ಪತ್ರೆಗೆ ಲಕ್ಷ್ಯ ಪ್ರಮಾಣಪತ್ರ

KannadaprabhaNewsNetwork |  
Published : Nov 17, 2025, 01:30 AM IST
16ಕೆಕೆಆರ್1:ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಆಸ್ಪತ್ರೆ ನೋಟ. | Kannada Prabha

ಸಾರಾಂಶ

ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೇವೆ ನೀಡಿದ ಹಿನ್ನೆಲೆ ಪ್ರಶಸ್ತಿ ಸಂದಿದೆ

ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಹೆರಿಗೆಯ ಗುಣಮಟ್ಟದ ಸೇವೆಗಾಗಿ ಲಕ್ಷ್ಯ ರಾಷ್ಟ್ರಮಟ್ಟದ ಪ್ರಮಾಣಪತ್ರ ಘೋಷಣೆಯಾಗಿದೆ. ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಹೆರಿಗೆ ವಿಭಾಗದಲ್ಲಿ ನೀಡಲಾಗುವ ಸೇವೆಗಳ ಮೌಲ್ಯಮಾಪನದಲ್ಲಿ ಮಂಗಳೂರಿನ ಆಸ್ಪತ್ರೆ ಶೇ. 91 ಅಂಕ‌ ಪಡೆದು ಪ್ರಶಸ್ತಿಗೆ ಭಾಜನವಾಗಿದೆ. ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೇವೆ ನೀಡಿದ ಹಿನ್ನೆಲೆ ಪ್ರಶಸ್ತಿ ಸಂದಿದೆ. ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ರಜೆ ದಿನದಲ್ಲಿ ಹಾಗೂ ತುರ್ತು ವೇಳೆಯಲ್ಲೂ ಉತ್ತಮ ಸೇವೆ ನೀಡಿದ್ದಾರೆ.

ಮಂಗಳೂರು ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಸಿ.ಎಂ. ಹಿರೇಮಠ ಮತ್ತು ಎಲ್ಲ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಸೂತಿ ಮಾತ್ರವಲ್ಲದೇ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳ ಬಗ್ಗೆ ಕಾಳಜಿ ವಹಿಸಿದ ಹಿನ್ನೆಲೆ ಆರೋಗ್ಯ ಇಲಾಖೆ ಮಂಗಳೂರು ಆಸ್ಪತ್ರೆ ಗುರುತಿಸಿ ರಾಷ್ಟ್ರಮಟ್ಟದ ಲಕ್ಷ್ಯ ಪ್ರಮಾಣಪತ್ರ ಘೋಷಣೆ ಮಾಡಿದೆ.

ಲಕ್ಷ್ಯ ಪ್ರಮಾಣಪತ್ರ ಮೌಲ್ಯಮಾಪನದಲ್ಲಿ ಮಂಗಳೂರು ಆಸ್ಪತ್ರೆಯ ಹೆರಿಗೆ ವಿಭಾಗದ ಲೇಬರ್ ರೂಮ್ ಮತ್ತು ಶಸ್ತ್ರಚಿಕಿತ್ಸೆ ವಿಭಾಗಗಳ ಗುಣಮಟ್ಟ ಚಿಕಿತ್ಸೆ ಬಗ್ಗೆ ರಾಷ್ಟ್ರಮಟ್ಟದಿಂದ ಮೌಲ್ಯಮಾಪನ ಇತ್ತು. ಮೌಲ್ಯಮಾಪನದಲ್ಲಿ ಹೆರಿಗೆ ವಿಭಾಗ ಶೇ. 92, ಶಸ್ತ್ರಚಿಕಿತ್ಸೆ ವಿಭಾಗ ಶೇ. 90.67 ಅಂಕ ಗಳಿಸಿದೆ. ರಾಷ್ಟ್ರಮಟ್ಟದ ಗುಣಮಟ್ಟ ಸೇವೆಗಳ ಪ್ರಮಾಣ ಪತ್ರ ಪಡೆದಿದೆ ಎಂದು ಮಂಗಳೂರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಿ.ಎಂ. ಹಿರೇಮಠ ತಿಳಿಸಿದ್ದಾರೆ.

ಮಂಗಳೂರಿನ ಆಸ್ಪತ್ರೆಗೆ ಹೆರಿಗೆಗಾಗಿ ಮಂಗಳೂರು ಸುತ್ತಮುತ್ತಲಿನ ಗ್ರಾಮಗಳು ಮಾತ್ರವಲ್ಲದೇ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿನ ವೈದ್ಯ ಸಿ.ಎಂ. ಹಿರೇಮಠ ಅವರು ಅತ್ಯಂತ ಕಾಳಜಿಯಿಂದ ಹೆರಿಗೆ ಮಾಡಿಸುತ್ತಾರೆ. ವೈದ್ಯರ ಕಾಳಜಿಯಿಂದ ಮಂಗಳೂರು ಆಸ್ಪತ್ರೆ ರಾಷ್ಟ್ರಮಟ್ಟದ ಪ್ರಮಾಣ ಪತ್ರ ಪಡೆದಿದೆ ಎಂದು ಮಂಗಳೂರ ಗ್ರಾಮದ ರವಿ ಆಗೋಲಿ ತಿಳಿಸಿದ್ದಾರೆ.

PREV

Recommended Stories

ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ
ಸಾಲುಮರದ ತಿಮ್ಮಕ್ಕನವರ ಪ್ರಕೃತಿ ಪ್ರೇಮ ಎಲ್ಲರಿಗೂ ಆದರ್ಶ: ಶಾಸಕಿ ಅನ್ನಪೂರ್ಣ