ಲಾಲಕೃಷ್ಣರಿಗೆ ರಾಮಲಲ್ಲಾನ ಪೂರ್ಣ ಕೃಪೆಯಾಗಿದೆ: ಪೇಜಾವರ ಶ್ರೀ ಸಂತಸ

KannadaprabhaNewsNetwork |  
Published : Feb 04, 2024, 01:32 AM IST
ಅಡ್ವಾನಿ ಅವರ ಮನೆಯಲ್ಲಿ ಭೇಟಿಯಾದ ಪೇಜಾವರ ಶ್ರೀ | Kannada Prabha

ಸಾರಾಂಶ

ಲಾಲ್‌ಕೃಷ್ಣ ಆಡ್ವಾಣಿಯವರಿಗೆ ಭಾರತ ರತ್ನ ಘೋಷಣೆಯಾಗಿದ್ದು, ಇದಕ್ಕೆ ಪೇಜಾವರ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಮೌಲ್ಯಾಧಾರಿತ ರಾಜಕಾರಣದ ಪ್ರತಿನಿಧಿಯಾಗಿ ದಶಕಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ ಮತ್ತು ಅಯೋಧ್ಯೆ ರಾಮಮಂದಿರ ಆಂದೋಲನದಲ್ಲಿ ಅತ್ಯಂತ ಶ್ರದ್ಧಾಪೂರ್ವಕ ನೇತೃತ್ವ ನೀಡಿದ ಲಾಲಕೃಷ್ಣ ಆಡ್ವಾಣಿಯವರಿಗೆ ದೇಶದ ಪರಮೋಚ್ಛ ಪ್ರಶಸ್ತಿ ಭಾರತ ರತ್ನ ಘೋಷಣೆಯಾಗುವ ಮೂಲಕ ರಾಮಲಲ್ಲಾನ‌ ಪೂರ್ಣ ಕೃಪೆಯಾಗಿದೆ ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ವಾರ್ತಾ ಮಂತ್ರಿ, ಗೃಹಮಂತ್ರಿ, ಉಪಪ್ರಧಾನಿ ಮೊದಲಾಗಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ ಆಡ್ವಾಣಿಯವರು, ಒಂದೊಮ್ಮೆ ತಮ್ಮ ಮೇಲೆ ಹವಾಲಾ ಹಗರಣದ ಆರೋಪ ಬಂದಾಗ ಆರೋಪ ಮುಕ್ತನಾಗುವ ವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಘೋಷಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಉಲ್ಲೇಖನೀಯ. ಇದು ದೇಶದ ಎಲ್ಲ ಸ್ತರದ ರಾಜಕಾರಣಿಗಳಿಗೂ ಮಾದರಿಯಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ರಾಮ ಜನ್ಮಭೂಮಿ ಆಂದೋಲನದಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು, ವಿಶ್ವ ಹಿಂದು ಪರಿಷತ್ತಿನ ನೇತಾರರಾಗಿದ್ದ ಅಶೋಕ್ ಸಿಂಘಲ್, ಮುರಳಿ ಮನೋಹರ ಜೋಶಿ ಮೊದಲಾದವರೊಂದಿಗೆ ಮುಂಚೂಣಿಯಲ್ಲಿದ್ದ ಆಡ್ವಾಣಿ ಅವರು ಈ ಉದ್ದೇಶಕ್ಕಾಗಿ ದೇಶಾದ್ಯಂತ ರಾಮರಥಯಾತ್ರೆ ಮಾಡಿ ಜನರಲ್ಲಿ ಸುಪ್ತವಾಗಿದ್ದ ರಾಮಭಕ್ತಿಯನ್ನು ಜಾಗೃತಗೊಳಿಸಿದ್ದು ಚರಿತ್ರಾರ್ಹ ಎಂದರು.

ನ್ಯಾಯಾಲಯದಿಂದ ಜನ್ಮಭೂಮಿ ಪರ ತೀರ್ಪು ಬಂದ ಹೊತ್ತಲ್ಲಿ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಅಭಿನಂದಿಸಿದ ವೇಳೆ ಅವರು ತೋರಿದ ಗೌರವ, ವಿನಯ, ಇಳಿವಯಸ್ಸಲ್ಲೂ ಅವರು ಬಾಗಿಲ ವರೆಗೆ ಬಂದು ಬೀಳ್ಕೊಟ್ಟ ಸೌಜನ್ಯ ಮರೆಯಲು ಸಾಧ್ಯವಿಲ್ಲ ಎಂದು ಶ್ರೀಗಳು ಆಡ್ವಾಣಿಯವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!