ಕೊಟ್ಟೂರು: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಪ್ರತಿಯೊಬ್ಬ ಪತ್ರಕರ್ತರಿಗೆ ನಿವೇಶನ ಮತ್ತು ಮನೆಗಳನ್ನು ನೀಡಲು ಯೋಜನೆ ರೂಪಿಸಿದ್ದೇನೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಭರವಸೆ ನೀಡಿದರು.ಭಾನುವಾರ ಇಲ್ಲಿನ ಮರುಳಸಿದ್ದೇಶ್ವರ ಕನ್ವೆಷನ್ ಹಾಲ್‌ನಲ್ಲಿ ಕೊಟ್ಟೂರು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಮರಿಯಮ್ಮನಹಳ್ಳಿ ವ್ಯಾಪ್ತಿಯ ಎಲ್ಲ ಪತ್ರಕರ್ತರಿಗೆ ಸೂರು ಒದಗಿಸಿಕೊಡಲು ಮುಂದಾಗಿರುವೆ. ಇದು ಅಕ್ಷರಶಃ ಕಾರ್ಯರೂಪ ಪಡೆಯಲು ಸಿದ್ಧತೆ ಕೈಗೊಂಡಿರುವೆ ಎಂದರು.
ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟಿ ಉಪನ್ಯಾಸ ನೀಡಿ, ಪತ್ರಿಕಾ ಸ್ವಾತಂತ್ರ್ಯ ಕುಸಿತಕ್ಕೆ ಕಾರಣಗಳಾದ ಅಂಶಗಳನ್ನು ಪತ್ರಕರ್ತರು ಮನಗಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ್ ಮಾತನಾಡಿ, ಪತ್ರಿಕೆಗಳು ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಪತ್ರಿಕಾ ರಂಗ ಇರದಿದ್ದರೆ ನಮ್ಮ ರಾಷ್ಟ್ರ ದಿವಾಳಿತನ ಎದುರಿಸಬೇಕಾಗುತ್ತಿತ್ತು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್, ಡಿ.ಎಸ್.ಎಸ್ ಮುಖಂಡ ಬಿ.ಮರಿಸ್ವಾಮಿ, ಮಾತನಾಡಿದರು. ಕಾರ್ಯಕ್ರಮ ಆರಂಭಕ್ಕು ಮುನ್ನ ಹೆಸರಾಂತ ಗಾಯಕ ವಾಗೀಶಯ್ಯ ಸ್ವಾಮಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಟ್ಟೂರು ತಾಲೂಕು ಕಾರ್ಯನಿರತ ಸಂಘದ ಅಧ್ಯಕ್ಷ ಸುರೇಶ್ ದೇವರಮನಿ ವಹಿಸಿದ್ದರು. ಪತ್ರಕರ್ತ ಉಜ್ಜಯಿನಿ ರುದ್ರಪ್ಪ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.