ರೈತರಿಗೆ ಭೂ ಪರಿಹಾರ ವಿತರಿಸುವ ಕಾರ್ಯಕ್ಕೆ ಚಾಲನೆ

KannadaprabhaNewsNetwork |  
Published : Jun 20, 2026, 01:15 AM IST
ಸಂಕೇಶ್ವರ | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗೆ ಪರ ವಿರೋಧ ತೀವ್ರಗೊಂಡ ಬೆನ್ನ ಹಿಂದೆಯೇ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದ್ದ ಗ್ರಾಮಗಳ ರೈತರಿಗೆ ಭೂ ಪರಿಹಾರ ವಿತರಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗೆ ಪರ ವಿರೋಧ ತೀವ್ರಗೊಂಡ ಬೆನ್ನ ಹಿಂದೆಯೇ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದ್ದ ಗ್ರಾಮಗಳ ರೈತರಿಗೆ ಭೂ ಪರಿಹಾರ ವಿತರಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅಂತಿಮ ಅಧಿಸೂಚನೆ ಹೊರಡಿಸಿದ ಕೆಂಪಯ್ಯನಪಾಳ್ಯ ಗ್ರಾಮದಲ್ಲಿ ಸ್ವಾಧೀನ ಪಡಿಸಿಕೊಂಡ 2.9ಎಕರೆ ಜಮೀನಿನ ಭೂ ಮಾಲೀಕರಾದ 7 ರೈತರಿಗೆ 5,23,70,018 ರು. ಪರಿಹಾರವನ್ನು ಸಾಂಕೇತಿಕವಾಗಿ ವಿತರಿಸಿದರು.

ಆನಂತರ ಮಾತನಾಡಿದ ಶಾಸಕ ಬಾಲಕೃಷ್ಣ, ಬಿಡದಿ ಟೌನ್ ಶಿಪ್ ಯೋಜನೆಯ ಭೂಸ್ವಾಧೀನಕ್ಕೆ ಒಪ್ಪಿಗೆ ಪತ್ರ ಕೊಟ್ಟ ಒಂದು ವಾರದಲ್ಲೇ ಅಂತಹ ಭೂಮಾಲೀಕರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಲಾಗುವುದು ಎಂದು ಹೇಳಿದರು.

ಈಗಾಗಲೇ 9 ಗ್ರಾಮಗಳ ಪೈಕಿ 3 ಗ್ರಾಮಗಳ 519 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ನೋಟಿಸ್ ಪಡೆದು ಒಪ್ಪಿಗೆ ನೀಡಿರುವ ರೈತರಿಗೆ ಭೂ ಪರಿಹಾರ ಹಣ ವಿತರಣೆ ಮಾಡಲಾಗುತ್ತಿದೆ. ಭೂಸ್ವಾಧೀನ ಸೇರಿದಂತೆ ಯೋಜನೆಗೆ ಬೇಕಾಗಿರುವ ಅಗತ್ಯ ಆರ್ಥಿಕ ಸಂಪನ್ಮೂಲ ಜಿಬಿಡಿಎ ಬಳಿ ಇಲ್ಲವೆಂಬ ಟೀಕೆಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಈ ಯೋಜನೆಗೆ ಬೇಕಾಗಿರುವ 20 ಸಾವಿರ ಕೋಟಿ ರುಪಾಯಿ ಸಿದ್ದವಿದೆ. ಅಗತ್ಯ ಹಣ ಇಲ್ಲದಿದ್ದರೆ, ಯೋಜನೆ ರೂಪಿಸಲು ಸಾಧ್ಯವೇ ಎಂದರು.

ಭೂ ಮಾಲೀಕರಿಗೆ 5 ಲಕ್ಷ ಇಡಿಗಂಟು:

ಭೂಸ್ವಾಧೀನಕ್ಕೆ ಗುರುತಿಸಲಾಗಿರುವ ಭೂಮಿಯ ಮಾಲೀಕರಿಗೆ ಗರಿಷ್ಠ ರೀತಿಯಲ್ಲಿ ಅನುಕೂಲ ಮಾಡಿಕೊಡುವುದು ರಾಜ್ಯಸರ್ಕಾರದ ಉದ್ದೇಶ. ಹೀಗಾಗಿ ಇಡಿಗಂಟು ನಿರ್ಧಾರಕ್ಕೆ ಬರಲಾಗಿದೆ. ಭೂ ಸ್ವಾಧೀನಕ್ಕೆ ನಿಗದಿಯಾಗಿರುವ ದರಗಳ ಜೊತೆಗೆ ಭೂಮಿಯ ಪ್ರಮಾಣವನ್ನು ಲೆಕಕ್ಕೆ ತೆಗೆದುಕೊಳ್ಳದೆ ಎಲ್ಲ ಮಾಲೀಕರಿಗೂ ಇಡಿಗಂಟು ಮೊತ್ತ 5 ಲಕ್ಷ ರುಪಾಯಿ ಹೆಚ್ಚುವರಿಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಭೂಸ್ವಾಧೀನವಾಗುವ 1 ಗುಂಟೆ, 1 ಎಕರೆ ಹೀಗೆ ಎಷ್ಟೇ ಪ್ರಮಾಣದ ಜಮೀನು ಸ್ವಾಧೀನಕ್ಕೆ ಒಳಪಟ್ಟರೆ ಅಂತಹ ಮಾಲೀಕರಿಗೆ ಇಡಿಗಂಟು ಮೊತ್ತ 5 ಲಕ್ಷ ರುಪಾಯಿ ಸಿಗಲಿದೆ. ಹೋರಾಟಗಳಿಗೆ ಹೆದರಿ ಇಡಿಗಂಟು ಮೊತ್ತವನ್ನು ನಿಗದಿ ಪಡಿಸಿಲ್ಲ. ಕಾನೂನು ಪ್ರಕಾರವೇ ನಿರ್ಧರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭೂಮಾಲೀಕರು ತಮ್ಮ ಭವಿಷ್ಯದ ದೃಷ್ಠಿಯಿಂದ ಭೂಸ್ವಾಧೀನದ ವಿಚಾರದಲ್ಲಿ ಶೇರಿಂಗ್ ಆಧಾರದಲ್ಲಿ ಒಪ್ಪಿಗೆ ಸೂಚಿಸುವುದು ಒಳ್ಳೆಯದು. ಈ ಟೌನ್ ಶಿಪ್ ಗೆ ನೈಸ್ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಇಡೀ ವಿಶ್ವವೇ ಗಮನಿಸುವಂತಹ ನಗರ ಇಲ್ಲಿ ಸೃಷ್ಟಿಯಾಗಲಿದೆ. ಹೀಗಾಗಿ ಭವಿಷ್ಯದ ದೃಷ್ಠಿಯಿಂದ ಶೇರಿಂಗ್ ಪದ್ದತಿಗೆ ಒಪ್ಪಿಗೆ ಕೊಡಿ ಎಂದು ಬಾಲಕೃಷ್ಣ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ನಿರ್ದೇಶಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್ ................

ಮರಮಾಲಿಕೆಗಳಿಗೆ ದುಪ್ಪಟ್ಟು ಪರಿಹಾರ:

ಒಂದು ಎಕರೆಗೆ 2,30,07,000 ರು.ಪರಿಹಾರ ಹಣ ನೀಡಲಾಗುವುದು. ಜಮೀನಿನಲ್ಲಿ ಬೆಳೆದ ಬೆಳೆಗೂ ಪರಿಹಾರದ ಹಣ ನಿಗದಿಪಡಿಸಲಾಗಿದೆ. 1 ತೆಂಗಿನ‌ ಮರಕ್ಕೆ 40,446 ರು., ಮಾವಿನ ಗಿಡ 62 ಸಾವಿರ ರು., ಅಡಿಕೆ ಮರಕ್ಕೆ 7,440 ರು., ಬಾಳೆ ಎಕರೆಗೆ 10.86 ಲಕ್ಷ ರು., ಪ್ರತಿ ಎಕರೆ ರೇಷ್ಮೆಗೆ 14 ಲಕ್ಷ , ಹಲಸು ಎಕರೆಗೆ 42,750 ರು., ಹುಣಸೆ ಎಕರೆಗೆ 53,310 ರು., ಸೀಬೆ ಎಕರೆಗೆ 3,940 ರು., ಸಪೋಟ ಎಕರೆಗೆ 43,166 ರು. ಹಣ ನಿಗದಿ ಮಾಡಲಾಗಿದೆ. ಅಲ್ಲದೆ, 20 ರಿಂದ 30 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ನಿವೇಶನ ಕೂಡ ನೀಡಲು ಉದ್ದೇಶಿಸಲಾಗಿದೆ.

ಬಾಕ್ಸ್ ..............

ಕುಮಾರಸ್ವಾಮಿ ರೆಡ್ ಜೋನ್ ಪಿತಾಮಹ: ಬಾಲಕೃಷ್ಣ ಟೀಕೆ

ರಾಮನಗರ: ಬಿಡದಿ ಹೋಬಳಿ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಡದಿ ಟೌನ್ ಶಿಪ್ ನಿರ್ಮಿಸುವ ಯೋಜನೆ ರೂಪಿಸುವುದು ಎಚ್.ಡಿ.ಕುಮಾರಸ್ವಾಮಿರವರ ಕನಸಿನ ಕೂಸು. ಹೀಗಾಗಿಯೇ

ಇಲ್ಲಿರುವ ಭೂಮಿಯನ್ನು ರೆಡ್ ಜೋನ್‌ಗೆ ಪರಿವರ್ತಿಸಿದ್ದರು. ಕುಮಾರಸ್ವಾಮಿರವರು ರೆಡ್ ಜೋನ್ ಪಿತಾಮಹ ಶಾಸಕ ಎಚ್.ಸಿ.ಬಾಲಕೃಷ್ಣ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿರವರು ಎರಡು ಬಾರಿ ಮುಖ್ಯಮಂತ್ರಿಯಾದರು ಈ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ. ಜೊತೆಗೆ ರೆಡ್ ಜೋನ್ ಅನ್ನು ತೆರವುಗೊಳಿಸುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ದೂರಿದರು.

ರೆಡ್ ಜೋನ್ ಆಗಿದ್ದರಿಂದ ಈ ಭಾಗದ ಭೂಮಾಲೀಕರು ಭೂಮಿಯನ್ನು ಅಭಿವೃದ್ಧಿ ಪಡಿಸಲಾಗದೆ, ಭೂಮಿಯನ್ನು ಮಾರಲಾಗದೆ ತೊಂದರೆ ಅನುಭವಿಸುತ್ತಿದ್ದರು. ಕೆಲವರು ಮದುವೆ ಮುಂತಾದ ಕಾರ್ಯಗಳಿಗಾಗಿ 30 ರಿಂದ 70 ಲಕ್ಷ ರು.ಗಳಿಗೆ ಭೂಮಿಯನ್ನು ಪರಭಾರೆ ಮಾಡಿದ್ದಾರೆ.

ದಶಕಗಳಿಂದ ತೊಳಲಾಡುತ್ತಿದ್ದ ಭೂಮಾಲೀಕರು ನಮ್ಮ ಬಳಿ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದ್ದರಿಂದಲೇ ಇಲ್ಲಿ ಟೌನ್ ಶಿಪ್ ನಿರ್ಮಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೆಡ್‌ ಜೋನ್ ತೆರವಾಗಿದ್ದರೆ ಬಹುಶಃ ಈ ಹಿಂದೆಯೇ ಈ ಭೂಮಿಯೆಲ್ಲ ಬಡಾವಣೆಗಳಾಗಿ ಪರಿವರ್ತನೆಯಾಗುತ್ತಿದ್ದವು. ಈ ಯೋಜನೆಗೆ ಭೂಮಿಯೇ ಸಿಗುತ್ತಿರಲಿಲ್ಲ ಎಂದು ಬಾಲಕೃಷ್ಣ ಹೇಳಿದರು.

19ಕೆಆರ್ ಎಂಎನ್ 4.ಜೆಪಿಜಿ

ಶಾಸಕ ಬಾಲಕೃಷ್ಣ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ ರೈತನಿಗೆ ಪರಿಹಾರ ಚೆಕ್ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ಗೆ ಭರದ ಸಿದ್ಧತೆ, ಜೂನ್‌ 30 ರಿಂದ ಮನೆ-ಮನೆ ಭೇಟಿ
ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಜೀವನಕ್ಕೆ ಶಿಸ್ತು: ಎಚ್‌.ಡಿ.ತಮ್ಮಯ್ಯ