ಭೂ ವಿವಾದ, ದರ್ಗಾ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

KannadaprabhaNewsNetwork | Published : Mar 6, 2025 12:30 AM

ಸಾರಾಂಶ

ಚಿಕ್ಕಮಗಳೂರು, ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾ ಮಕಾನ್‌ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ತೀವ್ರ ಸ್ವರೂಪ ಪಡೆದು ಕೊಂಡಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ನಿಷೇಧಾಜ್ಞೆ ಹೊರಡಿಸಿದೆ.

6 ದಿನಗಳವರೆಗೆ ಜಾರಿಯಲ್ಲಿರುವ ಆದೇಶ । 14 ಜನರ ವಿರುದ್ಧ ಪ್ರಕರಣ ದಾಖಲು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾ ಮಕಾನ್‌ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ತೀವ್ರ ಸ್ವರೂಪ ಪಡೆದು ಕೊಂಡಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ನಿಷೇಧಾಜ್ಞೆ ಹೊರಡಿಸಿದೆ.

ತಾಲೂಕು ದಂಡಾಧಿಕಾರಿ ಡಾ. ಸುಮಂತ್‌ ಮಾ. 4ರ ಮಧ್ಯರಾತ್ರಿ 12 ಗಂಟೆಯಿಂದ ಮಾ. 10ರ ಮಧ್ಯರಾತ್ರಿ 12 ಗಂಟೆ ವರೆಗೆ ಅನ್ವಯವಾಗುವಂತೆ ಬಡಾ ಮಕಾನ್‌ ದರ್ಗಾವನ್ನು ಹೊರತುಪಡಿಸಿ ಅದರ ಪಕ್ಕದಲ್ಲಿರುವ ವಿವಾದಿತ ಸ್ಥಳಕ್ಕೆ ಯಾರೂ ಪ್ರವೇಶ ಮಾಡಬಾರದು. ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಕಟ್ಟಡ ತೆರವು, ಪ್ರತಿಭಟನೆ ಹಾಗೂ ಯಾವುದೇ ರೀತಿ ಚಟುವಟಿಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ತಡೆಯಾಜ್ಞೆ: 330- 360 ಅಡಿ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆದರೂ ಕೂಡ ದರ್ಗಾ ಆಡಳಿತ ಮಂಡಳಿ ಕೆಲವು ಪ್ರದೇಶವನ್ನು ಮಂಗಳವಾರ ಜೆಸಿಬಿಯಿಂದ ಸಮತಟ್ಟು ಮಾಡುವ ಜತೆಗೆ ಕೆಲವು ಅಂಗಡಿ ಮಳಿಗೆಗಳನ್ನು ತೆರವು ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಿಳಿಗೊಳಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ನೊಂದ ಮಳಿಗೆ ಮಾಲೀಕರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಮುಸ್ಲಿಂ ಸಮುದಾಯದವರು ಗುಂಪು ಕಟ್ಟಿಕೊಂಡು ಬಂದು ಅಂಗಡಿಗಳಿಗೆ ಹಾನಿ ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಆಗಬೇಕೆಂದು ಆಗ್ರಹಿಸಿದರು.

ಈ ಸಂಬಂಧದಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ್‌ ಪೈ, ಪುಷ್ಪರಾಜ್‌, ಸಂತೋಷ್‌ ಕೋಟ್ಯಾನ್‌, ಯೋಗೀಶ್‌ ರಾಜ್‌ ಅರಸ್‌, ಶ್ಯಾಮ್‌ ವಿ. ಗೌಡ ಹಾಗೂ ನೊಂದ ಜನರು ಇದ್ದರು.

-- ಬಾಕ್ಸ್‌ --

ಸುಮಾರು 200 ಜನರು ಗುಂಪು ಕಟ್ಟಿಕೊಂಡು ಬಂದು ಅಂಗಡಿಗಳನ್ನು ತೆರವು ಗೊಳಿಸಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಅಂಗಡಿ ಕಳೆದುಕೊಂಡಿರುವವರಿಗೆ ಪರಿಹಾರ ನೀಡಬೇಕು.- ದೇವರಾಜ್‌ ಶೆಟ್ಟಿ

- ಜಿಲ್ಲಾಧ್ಯಕ್ಷರು, ಬಿಜೆಪಿ

--

ಜಿಲ್ಲಾ ರಕ್ಷಣಾಧಿಕಾರಿಗಳು ಎರಡು ಸಮುದಾಯಗಳ ಸಭೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ಕೂಡ ಆಗಿದೆ. ಅದರಂತೆ ಪೊಲೀಸ್‌ ಇಲಾಖೆ ಕ್ರಮ ಜರುಗಿಸಲಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.- ಮೀನಾ ನಾಗರಾಜ್‌

ಜಿಲ್ಲಾಧಿಕಾರಿ

-----------------------------ನ್ಯಾಯಾಯದ ಆದೇಶ ಪಾಲನೆಚಿಕ್ಕಮಗಳೂರು: ಹೈಕೋರ್ಟ್ ಆದೇಶದಂತೆ ಬಡಾ ಮಕಾನ್ ಜಾಗದಲ್ಲಿ ಅನಧಿಕೃತವಾಗಿ ನೆಲಸಿದ್ದವರ ಮಳಿಗೆ ತೆರವು ಮಾಡಲಾಗಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧವಿಲ್ಲದ ವ್ಯಕ್ತಿ ನೀಡಿದ ದೂರು ಆಧರಿಸಿ ನಮ್ಮ ಸಮುದಾಯದ 14 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮುದಸಿರ್ ಪಾಷಾ ದೂರಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ ಬಾಡಿಗೆದಾರರಾಗಿದ್ದ ನಿರ್ಮಲ ಪಿ. ಶೆಟ್ಟಿ ಬಾಡಿಗೆಗೆ ಇದ್ದ ಮಳಿಗೆಯನ್ನು ಅವರಿಗೆ ನೊಟೀಸ್ ನೀಡಿ, ಕಾಲಾವಕಾಶ ನೀಡಲಾಗಿತ್ತು. ಮಾ.1 ರಂದು ಮಳಿಗೆ ಖಾಲಿ ಮಾಡುವುದಾಗಿ ತಿಳಿಸಿದ್ದರು. ಆದರೆ ಮಾಡಲಿಲ್ಲ. ಇತ್ತೀಚೆಗೆ ಕಮಿಟಿ ಸದಸ್ಯರ ಸಮ್ಮುಖ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯ ಕೈಗೊಳ್ಳಲಾಯಿತು ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಸೀದಿ ಅಥವಾ ಬಾಡಿಗೆದಾರನಿಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ನೀಡಿರುವ ದೂರು ಆಧರಿಸಿ ಪೊಲೀಸರು ಸಮಿತಿ ಪದಾಧಿಕಾರಿಗಳು ಮತ್ತು ಇತರರು ಸೇರಿ 14 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಊರಲ್ಲೇ ಇಲ್ಲದ ವ್ಯಕ್ತಿಗಳ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಾಮಿಯಾ ಮಸೀದಿ ಸಮಿತಿ ಕಾರ್ಯದರ್ಶಿ ಮುಸ್ತಾಫ್ ಇಮ್ರಾಜ್, ಮೊಹಮದ್ ಅಬ್ರಾರ್, ಅಬ್ದುಲ್‌ ನಾಸಿರ್‌ಖಾನ್, ಅಬ್ದುಲ್ ರೆಹಮಾನ್, ಅಪ್ಸರ್ ಅಹ್ಮದ್, ಮೊಹಮದ್ ಅಬೂಬಕರ್ ಸಿದ್ದಿಕ್ ಇದ್ದರು.

5 ಕೆಸಿಕೆಎಂ 1ಚಿಕ್ಕಮಗಳೂರಿನ ಬಡ ಮಕಾನ್‌ ದರ್ಗಾದ ಬಳಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದವರ ವಿರುದ್ಧ ಕ್ರಮ ಆಗಬೇಕು ಹಾಗೂ ನೊಂದವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

Share this article