ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಲೋಕಾಯುಕ್ತ ನ್ಯಾಯಾಧೀಶರ ಆದೇಶದ ಮೇರೆಗೆ ಕಾರ್ಯಾಚರಣೆ ಕೈಗೊಂಡಿರುವ ತಹಸೀಲ್ದಾರ್ ಚೇತನ ಯಾದವ್, ಕಾವೇರಿ ನೀರಾವರಿ ನಿಗಮದ ಇಇ ಜಯಂತ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಹಾಗೂ ಡಿವೈಎಸ್ಪಿ ಶಾಂತ ಮಲ್ಲಪ್ಪ ನೇತೃತ್ವದ ಅಧಿಕಾರಿಗಳ ತಂಡ ಬೆಳಗ್ಗೆಯೇ ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಬಳಿಯ ಕಾವೇರಿ ನದಿ ತೀರ ಪ್ರದೇಶದಿಂದ ಕಾರ್ಯಾಚರಣೆ ನಡೆಸಿತು.
ಕಾವೇರಿ ನದಿ ತೀರದ ಕರಾಬು ಹಾಗೂ ಬಫರ್ ಝೋನ್ ಪ್ರದೇಶಗಳಲ್ಲಿ ಅಕ್ರಮವಾಗಿ ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳು ತಲೆಯೆತ್ತಿದ್ದು, ಮೊದಲ ಹಂತವಾಗಿ ಕರಾಬು ಜಮೀನನ್ನು ಗುರುತಿಸಿ ಮುಂದಿನ ಕ್ರಮಕ್ಕಾಗಿ ತಾಲೂಕು ಆಡಳಿತಕ್ಕೆ ನೀಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಇಇ ಜಯಂತ್ ತಿಳಿಸಿದರು.ತಹಸೀಲ್ದಾರ್ ಚೇತನ ಯಾದವ್ ಮಾತನಾಡಿ, ಕಾವೇರಿ ನದಿ ತೀರದ ಕರಾಬನ್ನು ಗುರುತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಫರ್ ಝೋನ್‌ಗಳಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ರೇವಣ್ಣ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಹಾಜರಿದ್ದರು. ಡಿವೈಎಸ್ಪಿ ಶಾಂತ ಮಲ್ಲಪ್ಪ, ಟೌನ್ ಠಾಣೆಯ ಸಿಪಿಐ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಪೋಲೀಸ್ ಬಿಗಿ ಬಂದೋಬಸ್ತ್ ಮೂಲಕ ಕಾವೇರಿ ನದಿ ತೀರದ ಕರಾಬಿನಲ್ಲಿ ನಿರ್ಮಾಣಗೊಂಡಿದ್ದ ಕಾಮಗಾರಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.