ಕನ್ನಡಪ್ರಭ ವಾರ್ತೆ ಚೇಳೂರು
ರೈತರ ಜಮೀನು ಹಾಗೂ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿಯಿಂದ ಅಕ್ರಮವಾಗಿ ಲೇ ಔಟ್ ನಿರ್ಮಾಣದ ದೂರಿನ ಆರೋಪದ ಮೇರೆಗೆ ತಹಸೀಲ್ದಾರ್ ಮನಿಷಾರವರು ಸ್ಥಳ ಪರಿಶೀಲನೆ ನಡೆಸಿ, ಸ್ಥಳದಲ್ಲಿದ್ದ ಜೆಸಿಬಿ, ಬುಲ್ಡೋಜರ್ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.ಚೇಳೂರು ತಾಲೂಕಿನ ಪೆಮ್ಮಯ್ಯಗಾರಿಪಲ್ಲಿ ಸರ್ವೇ ನಂಬರ್ ೩೨ರಲ್ಲಿ ಸುಮಾರು ೨೮ ಎಕರೆ ವಿಸ್ತೀರ್ಣದಲ್ಲಿ ಮೂನ್ ಸ್ಟಾರ್ ಎಂಬ ಹೆಸರಿನೊಂದಿಗೆ ಖಾಸಗಿ ವ್ಯಕ್ತಿಗಳು ಲೇ ಔಟ್ ನಿರ್ಮಾಣ ಮಾಡುತ್ತಿದ್ದು, ಇಲ್ಲಿನ ಸುತ್ತಮುತ್ತಲಿನ ರೈತರ ಜಮೀನು ಹಾಗೂ ಸರ್ಕಾರಿ ಜಮೀನನ್ನು ಅಕ್ರಮ ಮಾಡಿಕೊಂಡಿದ್ದಾರೆ ಎಂಬ ಸ್ಥಳೀಯ ರೈತರು ನೀಡಿರುವ ದೂರಿನನ್ವಯ ಸ್ಥಳ ಪರಿಶೀಲಿಸಿ ಮಾತನಾಡಿ, ಪೆಮ್ಮಯ್ಯಗಾರಿಪಲ್ಲಿಯ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡು ಆರ್ಚ್ ಕಟ್ಟಿರುವುದು ಹಾಗೂ ಶೇರ್ ಖಾನ್ ಕೋಟೆ ಕೆರೆಗೆ ನೀರು ಹರಿಯುವ ಮುಖ್ಯ ನೀರಿನ ಮೂಲವಾದ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ, ಅಲ್ಲದೇ ಅಕ್ಕ- ಪಕ್ಕದ ರೈತರ ಜಮೀನನ್ನು ಸಹ ಒತ್ತುವರಿ ಮಾಡಿಕೊಂಡಿರುವುದು ದಿಶಾಂಕದ ಮೂಲಕ ಕಂಡು ಬಂದಿದೆ, ಈ ಕುರಿತು ಸುತ್ತಮುತ್ತಲಿನ ರೈತರು ಸಹ ದೂರು ನೀಡಿದ್ದಾರೆ. ಈ ಕೂಡಲೇ ಈ ಕೆಲಸವನ್ನು ನಿಲ್ಲಿಸಬೇಕು ಹಾಗೂ ಲೇ ಔಟ್ ನಿರ್ಮಾಣದ ಅನುಮತಿ ನೀಡಿರುವ ದಾಖಲೆಗಳನ್ನು ಕಚೇರಿಗೆ ಸಲ್ಲಿಸಬೇಕು ಎಂದು ಮಾಲೀಕರಿಗೆ ತಿಳಿಸಲಾಗಿದೆ ಎಂದರು.
ಕರವೇ ಅಧ್ಯಕ್ಷ ಕೆ.ಜಿ. ವೆಂಕಟರಮಣಪ್ಪ ಮಾತನಾಡಿ, ಚೇಳೂರು ಗ್ರಾಮ ಪಂಚಾಯಿತಿಗೆ ನೀರಿನ ಮೂಲವಾದ ಶೇರ್ ಖಾನ್ ಕೋಟೆ ಕೆರೆಗೆ ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳಿಂದ ಹರಿದು ನೀರು ಹೋಗುವ ಕಾಲುವೆಯನ್ನು ಮುಚ್ಚಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಲೇ ಔಟ್ ನಿರ್ಮಾಣ ಮಾಡುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕೆರೆಗೆ ನೀರಿನ ಅಭಾವ ಉಂಟಾಗಲಿದೆ. ಆದ್ದರಿಂದ ಕಾಲುವೆಗಳ ಒತ್ತುವರಿ ತೆರವುಗೊಳಿಸಿ, ರೈತರ ಜಮೀನು ಒತ್ತುವರಿಯಾಗಿರುವ ಕುರಿತು ದೂರುಗಳು ಬಂದಿದ್ದು ಸರ್ವೇ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.ಮುಖಂಡ ಸಹದೇವ ರೆಡ್ಡಿ ಮಾತನಾಡಿ, ಲೇ ಔಟ್ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ಹೋಗಲು ಮೊದಲಿಂದಲೂ ರಸ್ತೆಯಿದೆ. ಆದರೆ ಈಗ ರಸ್ತೆಯನ್ನು ಮುಚ್ಚಿಸಿ ಲೇ ಔಟ್ ನ ಆರ್ಚ್ ನಿರ್ಮಾಣ ಮಾಡುತ್ತಿದ್ದು, ಈ ಕೂಡಲೇ ತೆರವುಗೊಳಿಸಿ ರೈತರ ಜಮೀನುಗಳಿಗೆ ಹೋಗುವ ದಾರಿ ಗುರುತಿಸಿಕೊಡಬೇಕು ಎಂದರು.
ಜಾಲರಿ ಜೆ. ಎನ್. ರಮೇಶ್ ರೆಡ್ಡಿ, ಸುರೇಂದ್ರ, ಎಸ್. ವಿ. ವೆಂಕಟರಮಣಪ್ಪ, ರಮೇಶ್ ರೆಡ್ಡಿ, ಬಿ. ವಿ. ವೆಂಕಟರಮಣಪ್ಪ, ಸುಬ್ಬಿರೆಡ್ಡಿ, ಸಾಹುಕಾರ ಸೀನ ಸೇರಿ ಸುತ್ತಮುತ್ತಲಿನ ರೈತರು ಇದ್ದರು.