ಹಾವೇರಿ: ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಛಾಯಾಗ್ರಹಕರ ಸಂಘದ ನಿವೇಶನ ಬೇಡಿಕೆ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ವಾರದೊಳಗೆ ನಿಗದಿತ ಶುಲ್ಕ ಪಾವತಿಸಿದರೆ ಪ್ರಾಧಿಕಾರದಿಂದ ಆದೇಶ ಪ್ರತಿ ಕೊಡುವುದಾಗಿ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ವ್ಯಕ್ತಿಯ ಭಾವನೆ, ಕಾಲವನ್ನು, ಇತಿಹಾಸವನ್ನು ಅತ್ಯಂತ ಯಶಸ್ವಿಯಾಗಿ ದಾಖಲೀಕರಣ ಮಾಡುವುದು ಛಾಯಾಗ್ರಾಹಕ ವೃತ್ತಿಯಿಂದ ಮಾತ್ರ ಸಾಧ್ಯ. ಒಳಗಣ್ಣಿನಲ್ಲಿರುವ ಸೂಕ್ಷ್ಮತೆ ಅರಿತುಕೊಂಡು ಚಿತ್ರ ಸೆರೆ ಹಿಡಿಯುವ ಕಲೆ ಬೆಳೆಸಿಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಬಹುದು. ಬರುವ ದಿನಗಳಲ್ಲಿ ವೃತ್ತಿನಿರತ ಛಾಯಾಗ್ರಾಹಕರಿಗೆ ಬಹಳಷ್ಟು ಸವಾಲುಗಳು ಬರುತ್ತವೆ. ಯಾವುದೇ ಸಂದರ್ಭದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಬದ್ಧತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳೋಣ. ಹೆಚ್ಚಿನ ನೈಪುಣ್ಯತೆ ಹಾಗೂ ಕ್ರಿಯಾತ್ಮಕ ಮಾದರಿಯಲ್ಲಿ ಚಿತ್ರ ಸೆರೆ ಹಿಡಿದುಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ತಾಲೂಕು ಗೌರವಾಧ್ಯಕ್ಷ ಸಿದ್ಧಲಿಂಗಪ್ಪ ಹಳ್ಳಿಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ಉಪಾಧ್ಯಕ್ಷ ಬಸವರಾಜ ಚಾವಡಿ, ರಟ್ಟಿಹಳ್ಳಿ ತಾಲೂಕಾಧ್ಯಕ್ಷ ಬಿ.ಎಂ. ಪವಾರ ಇದ್ದರು.
ನಾಗೇಶ ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು. ಶಿವಬಸು ಬಣಕಾರ ಪ್ರಾರ್ಥಿಸಿದರು. ಮಾಲತೇಶ ಇಚ್ಚಂಗಿ ಸ್ವಾಗತಿಸಿದರು. ಅಶೋಕ ಬ್ಯಾಡಗಿ ವಂದಿಸಿದರು.ಒಗ್ಗಟ್ಟಿನಲ್ಲಿ ಬಲವಿದೆ, ಈ ದೆಸೆಯಿಂದ ವೃತ್ತಿನಿರತ ಛಾಯಾಗ್ರಾಹಕರು ಒಗ್ಗಟ್ಟಾಗಿರಬೇಕು. ಬರುವ ದಿನಗಳಲ್ಲಿ ಸೊಸೈಟಿ ರಚನೆ ಮಾಡಿ ಅಭಿವೃದ್ಧಿ ಪಡಿಸೋಣ. ನೊಂದು ಬೆಂದವರಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಪರಿಹಾರ ನಿಧಿಯನ್ನು ಸಹ ಕೊಡಲಿಕ್ಕೆ ಅನುಕೂಲ ಆಗಲಿದೆ ಎಂದು ಬ್ಯಾಡಗಿ ತಾಲೂಕು ಅಧ್ಯಕ್ಷ ಶಿವಾನಂದ ಕಾಶಂಬಿ ಹೇಳಿದರು.ಛಾಯಾಗ್ರಾಹಕರ ಭವನ ನಿರ್ಮಾಣ ಆಗಬೇಕೆಂಬುದು ಬಹಳ ದಿನದ ಕನಸು. ಪ್ರಾಧಿಕಾರದ ನಿಯಮಾವಳಿಗೆ ಬದ್ಧವಾಗಿ ನಿವೇಶನ ತೆಗೆದುಕೊಳ್ಳಬೇಕಿದೆ. ಸಂಘದ ಬೆಳ್ಳಿ ಮಹೋತ್ಸವವನ್ನು ಸಂಘದ ಕಚೇರಿಯಲ್ಲಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇವೆ. ಅದರ ಏಳಿಗೆಗೆ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಹಾವೇರಿ ತಾಲೂಕಾಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ ಹೇಳಿದರು.