ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ : ಲೋಕಾಗೆ ದೂರು

KannadaprabhaNewsNetwork |  
Published : Sep 28, 2024, 01:16 AM ISTUpdated : Sep 28, 2024, 07:21 AM IST
District President NR Ramesh

ಸಾರಾಂಶ

ತಮ್ಮ ಪ್ರಭಾವ ಬಳಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಅಮೂಲ್ಯವಾದ ಸರ್ಕಾರಿ ಸ್ವತ್ತುಗಳನ್ನು ಕಬಳಿಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

 ಬೆಂಗಳೂರು : ತಮ್ಮ ಪ್ರಭಾವ ಬಳಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಅಮೂಲ್ಯವಾದ ಸರ್ಕಾರಿ ಸ್ವತ್ತುಗಳನ್ನು ಕಬಳಿಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಶುಕ್ರವಾರ ಲೋಕಾಯುಕ್ತ ಪೊಲೀಸ್‌‍ ಮಹಾನಿರ್ದೇಶಕ ಸುಬ್ರಮಣ್ಯೇಶ್ವರ ರಾವ್‌ ಅವರನ್ನು ಭೇಟಿಯಾಗಿ ದೂರು ನೀಡಿ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಭೂಮಿ ಕಬಳಿಕೆಗೆ ಸಂಚು ಮತ್ತು ಸರ್ಕಾರಿ ಭೂಮಿ ಕಬಳಿಕೆಗೆ ಸಹಕಾರ ಪ್ರಕರಣವನ್ನು ದಾಖಲಿಸಿದ್ದಾರೆ.

ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಎನ್‌.ಆರ್‌.ರಮೇಶ್‌ ಈ ಕುರಿತು 394 ಪುಟಗಳ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, 2014ರಲ್ಲಿ ಬಿಟಿಎಂ 4ನೇ ಹಂತದಲ್ಲಿ 8,002 ಚ.ಮೀ. ವಿಸ್ತೀರ್ಣದ ಸಿ.ಎ. ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಸಿದ್ಧಾರ್ಥ ವಿಹಾರ ಟ್ರಸ್ಟ್‌ ಸಂಸ್ಥೆಯು ಬಿಡಿಎಯಿಂದ 30 ವರ್ಷಗಳ ಗುತ್ತಿಗೆಗೆ ಪಡೆದುಕೊಂಡಿತು. ಈ ವಿಷಯವನ್ನು ಮರೆಮಾಚಿ ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಯಲಹಂಕ ಬಳಿಯ ಬಾಗಲೂರಿನ ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌‍ ಪಾರ್ಕ್‌ನ ಹಾರ್ಡ್‌ವೇರ್‌ ಪಾರ್ಕ್‌ ನಲ್ಲಿ ಐದು ಎಕರೆ ವಿಸ್ತೀರ್ಣದ ಸಿ.ಎ. ನಿವೇಶನವನ್ನು ಮಂಜೂರು ಮಾಡಿಸಿಕೊಳ್ಳುವ ಮೂಲಕ ಕಾನೂನು ಬಾಹಿರ ಕಾರ್ಯವನ್ನು ಎಸಗಲಾಗಿದೆ ಎಂದು ದೂರಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದವರು ಸಂವಿಧಾನದ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದ್ದರೂ ಸಹ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮದೇ ಸಿದ್ದಾರ್ಥ ವಿಹಾರ ಟ್ರಸ್ಟ್‌ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. 130 ಕೋಟಿ ರು.ಗಿಂತ ಅಧಿಕ ಬೆಲೆಯ ಬಿಟಿಎಂ 4ನೇ ಹಂತದ ನಿವೇಶನವನ್ನು ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ ಹಂಚಿಕೆ ಪತ್ರ ನೀಡಿದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದರು. 10 ವರ್ಷಗಳ ಹಿಂದೆಯೇ ನಿವೇಶನ ಹಂಚಿಕೆಯಾಗಿರುವ ಮಾಹಿತಿಯನ್ನು ಖರ್ಗೆ ಕುಟುಂಬಸ್ಥರು ಮರೆಮಾಚಿದ್ದಾರೆ. ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್‌ ಎಂ. ಖರ್ಗೆ ಅವರು ಕೆಐಎಡಿಬಿಗೆ ಅರ್ಜಿ ಸಲ್ಲಿಸಿ ಜಾಗ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ ಖರ್ಗೆ, ಅವರ ಮಕ್ಕಳಾದ ಸಚಿವ ಪ್ರಿಯಾಂಕ್‌ ಖರ್ಗೆ, ರಾಹುಲ್ ಖರ್ಗೆ, ಮತ್ತವರ ಅಳಿಯ ಹಾಗೂ ಸಂಸದ ರಾಧಾಕೃಷ್ಣ, ಖರ್ಗೆಯವರ ಪತ್ನಿ ರಾಧಾಬಾಯಿ ಮತ್ತು ಖರ್ಗೆಯವರ ಅತ್ಯಾಪ್ತರಾದ ಮಾರುತಿ ರಾವ್ ಡಿ. ಮಾಲೆ ಹಾಗೂ ಶಾಂತಪ್ಪರವರು ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಟ್ರಸ್ಟಿಗಳಾಗಿದ್ದಾರೆ. ಟ್ರಸ್ಟ್ ಹೆಸರಿಗೆ ಈ ಹಿಂದೆಯೇ ಬಿಡಿಎಯಿಂದ ಸಿ.ಎ. ನಿವೇಶನ ಹಂಚಿಕೆಯಾಗಿರುವ ಮಾಹಿತಿಯನ್ನು ಮುಚ್ಚಿಟ್ಟು, ಎರಡನೇ ಬಾರಿಗೆ ಕೆಐಎಡಿಬಿಯಿಂದ ಐದು ಎಕರೆ ವಿಸ್ತೀರ್ಣದ ಮತ್ತೊಂದು ಸಿ.ಎ. ನಿವೇಶನವನ್ನು ಮಂಜೂರು ಮಾಡಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಹೇಳಿದರು.

ಒಂದೇ ಸಂಸ್ಥೆಯ ಹೆಸರಿಗೆ ಒಟ್ಟು 240 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಎರಡು ಸಿ.ಎ. ನಿವೇಶನಗಳನ್ನು ಬಿಡಿಎ ಮತ್ತು ಕೆಐಎಡಿಬಿ ಸರ್ಕಾರಿ ಸಂಸ್ಥೆಗಳಿಂದ ಹಂಚಿಕೆ ಮಾಡಿಸಿಕೊಳ್ಳುವ ಮೂಲಕ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ಅಲ್ಲದೇ, ರಾಜ್ಯಪಾಲರಿಗೂ ಸಂಪೂರ್ಣ ದಾಖಲೆ ನೀಡಲಾಗಿದೆ ಎಂದು ತಿಳಿಸಿದರು.

PREV

Recommended Stories

ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ
‘ಕನ್ನಡ ಸಂಘ ಬಹರೈನ್‌’ಗೆ ಸರ್ಕಾರದಿಂದ ₹1 ಕೋಟಿ