ಭೂ ಮಾಫಿಯಾ: ನಾನಾ ಪ್ರಕರಣದಲ್ಲಿ 15 ಆರೋಪಿಗಳ ಸೆರೆ

KannadaprabhaNewsNetwork | Published : Jun 28, 2024 12:53 AM
Follow Us

ಸಾರಾಂಶ

ಜಿಲ್ಲೆಯಲ್ಲಿ ಭೂ ಹಗರಣದ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 15ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಭೂ ಹಗರಣದ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 15ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ಮಾಹಿತಿ ನೀಡಿದರು.

ನಗರದಲ್ಲಿ ನಡೆದ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಬ್ಯಾಂಕ್ ಮ್ಯಾನೇಜರ್‌ಗೆ ವಂಚನೆ ಪ್ರಕರಣ, ಬ್ಯಾಂಕ್ ದಾಖಲೆ ಖೊಟ್ಟಿ ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಸಿ ಸಿಕ್ಕಿಬಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಬೇಧಿಸಲು ಪೊಲೀಸರು ಸಫಲರಾಗಿದ್ದಾರೆ ಎಂದರು.

ಖೊಟ್ಟಿ ದಾಖಲೆ ಸೃಷ್ಟಿಸಿದ ಐವರ ಸೆರೆ:

ನಗರದ ಕೆಎಚ್‌ಬಿ ಕಾಲೋನಿ ನಿವಾಸಿ ನಿವೃತ್ತ ಬ್ಯಾಂಕ್ ಮ್ಯಾನೇಜರ್‌ ಮಾರುತಿ ರಾಜಾರಾಮ ನಾರಾಯಣಕರ ಎಂಬುವರಿಗೆ 1.36 ಎಕರ ಜಮೀನು ಖರೀದಿ ಹಾಕಿಕೊಡುವುದಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ₹25 ಲಕ್ಷ ಪಡೆದು ವಂಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, 48 ಗಂಟೆಯೊಳಗಾಗಿ ಚುರುಕಿನ ಕಾರ್ಯಾಚರಣೆ ನಡೆಸಿ ವಂಚನೆ ಮಾಡಿದ್ದ 9 ಜನರ ಪೈಕಿ 5 ಜನರನ್ನು ಬಂಧಿಸಲಾಗಿದೆ. ನಗರದ ಚಾಂದಪೀರ ಮಹಮ್ಮದಗೌಸ್ ಇನಾಮದಾರ (47), ಮಹಿಬೂಬಸಾಬ ನಬಿಸಾಬ ಹಡಗಲಿ (59), ಮೈಬೂಬ ಅಬ್ದುಲಖಾದರ ಡಾಂಗೆ (51), ಸಿಕಂದರ ಕುತುಬಸಾಬ ಗಂಗನಳ್ಳಿ (46), ಮಹಮ್ಮದತಾಹೀರ ಹುಮಾಯತಖಾನ ಪಠಾಣ, ದತ್ತು ಸಾಬು ತಿಕ್ಕುಂಡಿ (29), ಅಲಿಯಾಬಾದ ವಾಗೇಶ ಶಂಕರ ಪೋಳ(28), ಅರಕೇರಿಯ ಸುಭಾಸ ಬಾಬಶ್ ಸುಳ್ಳ, ಅಶೋಕ ದೇವರಾಯ ಪೋಳ(59) ಬಂಧಿತರು. ಇವರು ತೋರವಿ ಗ್ರಾಮದ 1 ಎಕರೆ 36 ಗುಂಟೆ ಜಮೀನನ್ನು ಮೌಲ್ಯಯುತ ಖೊಟ್ಟಿ ಕಬ್ಬಾ ರಹಿತ ಖರೀದಿ ಇಸಾರ ಕರಾರು ಪತ್ರ ಮಾಡಿಕೊಟ್ಟಿದ್ದರು. ಅಲ್ಲದೆ, ಮಾರುತಿ ಅವರಿಂದ ಒಟ್ಟು ₹25 ಲಕ್ಷ ಹಣ ಪಡೆದುಕೊಂಡು ನಂಬಿಸಿ ಮೋಸ ಮಾಡಿದ್ದರು. ಹಣ ಮರಳಿ ಕೇಳಿದಾಗ ಹೆದರಿಸಿ, ಧಮಕಿ ಹಾಕಿದ್ದಾರೆ. ನಂತರ ಪ್ರಕರಣದ ದಾಖಲಾದ 48 ಗಂಟೆಯೊಳಗೆ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡು ವಂಚನೆ ಮಾಡಿದ ₹18,50,000ಗಳನ್ನು ಜಪ್ತಿ ಮಾಡಲಾಯಿತು. ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

₹88,20,000 ವಂಚನೆ, ಆರು ಜನರ ಸೆರೆ:

ತಿಕೋಟಾ ತಾಲೂಕಿನ ಬರಟಗಿ ಗ್ರಾಮದ ಖೊಟ್ಟಿ ದಾಖಲೆ ಸೃಷ್ಟಿಸಿ ₹88,20,000 ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಅರುಣಕುಮಾರ ಹಣಮಂತ ಮಾಚಪ್ಪನವರ ನೀಡಿದ ದೂರಿನನ್ವಯ ತಿಕೋಟಾ ತಾಲೂಕಿನ ಬರಟಗಿ ಗ್ರಾಮದ 7 ಎಕರೆ 35 ಗುಂಟೆ ಜಮೀನ ಪ್ರಕರಣ ಸಂಬಂಧಿಸಿದಂತೆ ರೇವಣ ಸಿದ್ದಪ್ಪ ಕೋರಿ ಹೆಸರಿನಲ್ಲಿ ಒಬ್ಬ ವ್ಯಕ್ತಿಯನ್ನು ಕೂಡಿಸಿ ಖೊಟ್ಟಿ ದಾಖಲೆ ಸೃಷ್ಟಿ ಮಾಡಿದ್ದಾರೆ. ನಂತರ ಅರುಣಕುಮಾರಗೆ ಖರೀದಿ ಹಾಕಿಸಿ ಅವರ ಕಡೆಯಿಂದ ಚೆಕ್‌ಗಳ ಮುಖಾಂತರ ₹88,20,000 ಪಡೆದು ಮೋಸ ಮಾಡಿದ್ದಾರೆ.

ಅಕ್ಷರಅಲಿ ಅಬ್ದುಲಜಬ್ಬಾರ ಜುಮನಾಳ, ಅಶೋಕ ಗೊಪಿಚಂದ ರಾಠೋಡ, ಸಂತೋಷ ಮಡಿವಾಳಪ್ಪ ದಳಪತಿ, ಮಹಮ್ಮದ ರಫೀಕ ತುರ್ಕಿ, ಪ್ರಕಾಶ ಪೋಮು ಚವ್ಹಾಣ, ಮೋಹನ ಶೇಟ್ಟಿಪ್ಪ ಹೆಗಡೆ ಬಂಧಿತರು.

---

₹5 ಲಕ್ಷ ವಂಚನೆ, ಹಲವರ ಬಂಧನ:

ವಿಜಯಪುರ ತಾಲೂಕಿನ ಕಸಬಾದಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಶಂಕರ ರೇವು ಚವಾಣ್, ಭೀಮರಾಯ ಚಾಯಪ್ಪ ಕಟ್ಟಿಮನಿ, ನಾಗಪ್ಪ ವಿಠಲ ಕೋಲಕಾರ ಬಂಧಿತರು.

ದಿವಟಗೇರಿ ಗಲ್ಲಿಯ ನೀಲವ್ವ ಸದಪ್ಪ ನಿರ್ವಾಣಶೆಟ್ಟಿ ಅವರ ದೂರಿನನ್ವಯ ತಾಲೂಕು ಕಸಬಾ ವಿಜಯಪುರದಲ್ಲಿ ಬರುವ ಜಮೀನು 10 ಗುಂಟೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ₹5,00,000ಗಳಿಗೆ ಭೂತನಾಳದ ಶಂಕರ ರೇವೂ ಚವ್ಹಾಣಗೆ ಮಾರಾಟ ಮಾಡಲಾಗಿದೆ.

-----

ಸಿಪಿಐ ರಮೇಶ ಅವಜಿ ಕಾರ್ಯಕ್ಕೆ ಶ್ಲಾಘನೆ

ಸಿಇಎನ್ ಠಾಣೆಯ ಸಿಪಿಐ ರಮೇಶ ಅವಜಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ನೇತೃತ್ವದಲ್ಲಿಯೇ ವಿಶೇಷ ತಂಡ

ರಚಿಸಲಾಗಿತ್ತು. ತಂಡದಲ್ಲಿ ಪಿಎಸ್‌ಐ ಐ.ಎಂ. ದುಂಡಸಿ, ಸಿಎಚ್‌ಡಿ ವೈ.ಪಿ.ಕಬಾಡೆ, ಐ.ಎಂ. ಪೆಂಡಾರಿ, ವಿಪಿ ಆನಂದಯ್ಯ ಪೂಜಾರಿ, ಆರ್.ಎಸ್. ಮರೇಗುದ್ದಿ, ಜೆ.ಎಸ್. ವನಂಜೆಕರ, ಐ.ವೈ.ಸೊಡ್ಡಿ ಅವರು ಈ ಪ್ರಕರಣದಲ್ಲಿ ಸಿಪಿಐ ಮಲ್ಲಯ್ಯ ಮಠಪತಿ ಅವರ ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಅವರ ಪರಿಶ್ರಮ ಈ ಪ್ರಕರಣದ ಹಿಂದಿದೆ ಎಂದು ಎಸ್‌ಪಿ ಶ್ಲಾಘಿಸಿದರು.

----