ಎಸ್.ಜಿ. ತೆಗ್ಗಿನಮನಿನರಗುಂದ: ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಿದ ರೈತ ಬಂಡಾಯ ನಡೆದು 4 ದಶಕವಾದರೂ ನರಗುಂದದ 290 ರೈತರ ಜಮೀನು ಇನ್ನೂ "ಸರ್ಕಾರ "ದ ಹೆಸರಿನಲ್ಲಿವೆ!ತಾಲೂಕಿನ ವಿವಿಧ ಹಳ್ಳಿಗಳ ಸುಮಾರು 290 ರೈತರ ಜಮೀನಿನ ಉತಾರದ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದು ನಮೂದಾಗಿದ್ದು, ಇದರಿಂದ ಈ ರೈತರು ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಬೆಳೆವಿಮೆ, ಬೆಳೆಹಾನಿ ಪರಿಹಾರ, ಕಿಸಾನ್ ಸಮ್ಮಾನ, ರಿಯಾಯ್ತಿ ದರದಲ್ಲಿ ಕೃಷಿ ಯಂತ್ರೋಪಕರಣ ಖರೀದಿ ಸೇರಿದಂತೆ ಯಾವುದೇ ಸಾಲ ಮತ್ತು ಸೌಲಭ್ಯ ಈ ರೈತರಿಗೆ ಸಿಗುತ್ತಿಲ್ಲ.
ಆದರೆ ರೈತರು ಜಮೀನುಗಳಿಗೆ ವರ್ಷಪೂರ್ತಿ ಕಾಲುವೆಗಳಿಗೆ ನೀರು ಪೂರೈಕೆ ಮಾಡಿದರೆ ಮಾತ್ರ ನಾವು ನೀರಿನ ಕರ ಕಟ್ಟುತ್ತೇವೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದು ರೈತರು- ಸರ್ಕಾರದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಯಿತು. ಈ ತಿಕ್ಕಾಟ ಜೋರಾದ ನಂತರ ರೈತ ನೀರಿನ ಕರ ಕಟ್ಟದ್ದಕ್ಕೆ ಸರ್ಕಾರ ರೈತನ ಜಮೀನಿನ ಉತಾರದ 9ನೇ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದು ನಮೂದು ಮಾಡಿದೆ.
ಮುಂದೆ ರೈತರ ಉತಾರದಲ್ಲಿ ಸರ್ಕಾರ ಎಂದು ನಮೂದಾದ ಮೇಲೆ ಈ ಭಾಗದ ನೂರಾರು ರೈತರು ಸರ್ಕಾರ ಎಲ್ಲ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದರು.ನರಗುಂದ ರೈತ ಬಂಡಾಯ: ಇದನ್ನು ವಿರೋಧಿಸಿ ಹಲವಾರು ಹಂತದ ಹೋರಾಟ ನಡೆಯಿತು. ರೈತ ಹೋರಾಟ ತೀವ್ರಗೊಂಡು 1980ರ ಜು. 21ರಂದು ಟ್ರ್ಯಾಕ್ಟರ್‌ಗಳ ಮೂಲಕ ನರಗುಂದಕ್ಕೆ ಆಗಮಿಸಿದ ರೈತರು ಅಂದಿನ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಹೋರಾಟ ನಡೆಸಿದರು.
ಅದು ನರಗುಂದ ರೈತ ಬಂಡಾಯವೆಂದು ಹೆಸರಾಯಿತು. ರೈತ ಹೋರಾಟ ತೀವ್ರವಾಗಿ ಗೋಳಿಬಾರ್ ನಡೆಯಿತು. ಉಗ್ರ ಘರ್ಷಣೆಯೇ ನಡೆದು ರೈತರಿಬ್ಬರು ಮೃತರಾದರು. ರೈತ ಚಳವಳಿಯ ತಾಪಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಸರ್ಕಾರ ಪತನವಾಯಿತು.ನೀರಿನ ಕರ ಬಗ್ಗೆ ಚರ್ಚೆ: 1980ರ ನಂತರ ರೈತಪರ ಸರ್ಕಾರ ಬಂದು ಹಂತ ಹಂತವಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿನ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದಿದ್ದ ಹೆಸರನ್ನು ಕಡಿಮೆ ಮಾಡಿತು. ಆದರೆ ಕೆಲವು ರೈತರ ಜಮೀನುಗಳಲ್ಲಿ ಕಾರಣಾಂತರದಿಂದ ಸರ್ಕಾರ ಎಂದು ಇಂದಿಗೂ ಹಾಗೆಯೇ ಉಳಿದಿದೆ. ಹಾಗಾಗಿ ಕಳೆದ ನಾಲ್ಕು ದಶಕಗಳಿಂದ ಈ ರೈತರು ಸರ್ಕಾರಿ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ.ರೈತರ ಅಲೆದಾಟ: ತಾಲೂಕಿನ ಹದಲಿ, ಭೈರನಹಟ್ಟಿ, ಗಂಗಾಪುರ, ಖಾನಾಪುರ, ರಡ್ಡೇರ- ನಾಗನೂರ ಈ ಗ್ರಾಮಗಳ ಸುಮಾರು 290 ರೈತರ ಜಮೀನಿನ ಉತಾರದ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದಿದೆ.ನೀರಿನ ಕರ ಮತ್ತು ಜಲಾಶಯ ಅಭಿವೃದ್ಧಿ ಫೀ ತುಂಬಿದ ನಮಗೆ ಕಬ್ಜಾ ಕಾಲಂನಿಂದ ಸರ್ಕಾರ ತೆಗೆಯಬೇಕೆಂದು ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಮಸ್ಯೆ ನಿವಾರಣೆ ಮಾಡಿಕೊಡಬೇಕೆಂದು ಅಂಗಲಾಚಿದರೂ ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ರೈತರು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದರೂ ಉಪಯೋಗವಾಗಿಲ್ಲ ಎಂದು ಹದಲಿ ಗ್ರಾಮದ ರೈತ ಕುಮಾರಸ್ವಾಮಿ ಹಿರೇಮಠ ತಮ್ಮ ಅಳಲು ತೋಡಿಕೊಂಡರು.
ಹೋರಾಟಕ್ಕೆ ಸಿದ್ಧ: ಸರ್ಕಾರಕ್ಕೆ ಇದೊಂದು ಸಣ್ಣ ಕೆಲಸ. ರೈತರು ಶುಲ್ಕ ತುಂಬಿದರೂ ಉತಾರದಲ್ಲಿ ಸರ್ಕಾರ ಹೆಸರು ಕಡಿಮೆ ಮಾಡುತ್ತಿಲ್ಲ. ಈ ಸಮಸ್ಯೆಗೆ ಶೀಘ್ರ ಸ್ಪಂದಿಸದಿದ್ದರೆ ಹೋರಾಟಕ್ಕೆ ಸಿದ್ಧರಾಗುತ್ತೇವೆ ಎಂದು ರಾಜ್ಯ ರೈತಸೇನಾ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.ಸರ್ಕಾರಕ್ಕೆ ರವಾನೆ: ರೈತರು ಉತಾರದಲ್ಲಿನ ಸರ್ಕಾರ ಎಂದು ನಮೂದು ಆಗಿರುವುದನ್ನು ಕಡಿಮೆ ಮಾಡಬೇಕೆಂದು ಮನವಿ ಪತ್ರವನ್ನು ನೀಡಿದ್ದಾರೆ. ಇದನ್ನು ಸರ್ಕಾರಕ್ಕೆ ರವಾನೆ ಮಾಡಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿರು.