ಕೊಟ್ಟೂರು:ಪೌರಕಾರ್ಮಿಕರ ಅಗತ್ಯ ಬೇಡಿಕೆ ಇರುವ ನಿವೇಶನ ಕಟ್ಟಿಕೊಳ್ಳಲು ಈಗಾಗಲೇ ಖಾಲಿ 2 ಎಕರೆ 93 ಸೆಂಟ್ಸ್ ಜಾಗ ಕಾಯ್ದಿರಿಸಿದೆ. ಮುಂದಿನ ವಾರದೊಳಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಯೋಜನಾ ನಿರ್ದೇಶಕ ಜಿಲ್ಲಾ ನಗರ ಅಭಿವೃದ್ಧಿ ಕೋಶ ಅಧಿಕಾರಿ ಮನೋಹರ್ ತಿಳಿಸಿದರು.
ಪಪಂ ಮುಖ್ಯಧಿಕಾರಿ ನಸರುಲ್ಲಾ ಮಾತನಾಡಿ, ಬೆಳಗ್ಗೆ ಸೂರ್ಯ ಉದಯವಾಗುವ ಮುನ್ನವೆ ಪೌರಕಾರ್ಮಿಕರು ಪಟ್ಟಣ ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಇವರ ಈ ಪ್ರಾಮಾಣಿಕ ಸೇವೆ ಸುಂದರ ಪರಿಸರ ನಿರ್ಮಾಣ ಮಾಡುವುದರಲ್ಲಿ ಆರೋಗ್ಯಕರ ದೇಶ ಸೃಷ್ಟಿ ಮಾಡುವುದರಲ್ಲಿ ಉತ್ತಮ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಪೌರ ಕಾರ್ಮಿಕ ರಾಜ್ಯಾಧ್ಯಕ್ಷ ಪ್ರಭಾಕರ್ ಮಾತನಾಡಿ, ವರ್ಷದ 324 ದಿನಗಳ ನಿರಂತರ ಸಾರ್ವಜನಿಕರ ಸೇವೆ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ದೊಡ್ಡದು, ಕೋವಿಡ್ ಸಂದರ್ಭದಲ್ಲಿ ಅನಾಥ ಶವ ತಮ್ಮ ಸಂಬಂಧಿಕರ ಶವಗಳಂತೆ ಶವಸಂಸ್ಕಾರ ಮಾಡಿ ಸೇವೆಯ ಸಾರ್ಥಕತೆ ಮೆರೆದಿದ್ದಾರೆ. ಸರ್ಕಾರ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯ ನೀಡುವಂತೆ ನಾವು ಒತ್ತಡ ತರುತ್ತಿದ್ದೇವೆ ಎಂದರು.ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಮಾತನಾಡಿ, ಎಲ್ಲ ಸರ್ಕಾರಿ ಕೆಲಸಗಳಲ್ಲಿ ಪೌರಕಾರ್ಮಿಕರ ಕೆಲಸವು ಅತ್ಯಂತ ಮಹತ್ವವಾದದ್ದು, ಇವರ ಸೇವೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಪಾತ್ರ ಹೊಂದಿದೆ ಇವರಿಗೆ ಸರ್ಕಾರವು ಉನ್ನತ ಮಟ್ಟದಲ್ಲಿ ಸೌಲಭ್ಯ ಮತ್ತು ಗೌರವ ಸಿಗುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕಿ ಅನುಷಾ, ಪರುಸಪ್ಪ, ಹೇಮನಗೌಡ್ರು, ವಿಜಯ ಕುಮಾರ್, ಮುತ್ತಣ್ಣ, ಮಂಜಣ್ಣ, ಕೇಶವ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.