ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ನಾವು ಭೂಮಿ ಕೊಡುವುದಿಲ್ಲ, ಕೈಗಾರಿಕೆ ಸ್ಥಾಪನೆಗೆ ಜಿಲ್ಲಾಡಳಿತ ಗುರುತಿಸಿರುವ ಭೂಮಿ ಖಾಲಿ ಜಾಗವಲ್ಲ, ಕೃಷಿ ಭೂಮಿ ಕಳೆದುಕೊಂಡರೆ ನಮ್ಮ ಬದುಕಿಗೆ ಆಧಾರವೇ ಇರುವುದಿಲ್ಲ. ರಾಜಕಾರಣಿಗಳು ವಾಸ್ತವ ಅರಿಯದೆ ಮಾತನಾಡುವುದನ್ನು ನಿಲ್ಲಿಸಬೇಕು. ಪ್ರಾಣವನ್ನಾದರೂ ನೀಡುತ್ತೇವೆ, ಆದರೆ, ಜೀವನಾಧಾರವಾದ ಜಮೀನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
- ಕೈಗಾರಿಕೆ ಸ್ಥಾಪನೆಗೆ ಜಿಲ್ಲಾಡಳಿತ ಗುರುತಿಸಿರುವ ಭೂಮಿ ಖಾಲಿ ಜಾಗವಲ್ಲ
- ಮುದ್ದನಘಟ್ಟ-ಹೆಗ್ಗಡತಿಹಳ್ಳಿ ರೈತರ ಆಕ್ರೋಶ, ಟೈರ್ಗೆ ಬೆಂಕಿ ಹೆಚ್ಚಿ ಪ್ರತಿಭಟನೆ
- ಕೃಷಿ ಭೂಮಿ ಉಳಿಸಿಕೊಡುವಂತೆ ಗ್ರಾಮಸ್ಥರ ಪಟ್ಟು,
- ವಿಷದ ಬಾಟಲಿ ಹಿಡಿದು ಶಾಸಕ ರವಿಕುಮಾರ್ ವಿರುದ್ಧ ಕಿಡಿ
ಕನ್ನಡಪ್ರಭ ವಾರ್ತೆ ಮಂಡ್ಯ
ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ನಾವು ಭೂಮಿ ಕೊಡುವುದಿಲ್ಲ, ಕೈಗಾರಿಕೆ ಸ್ಥಾಪನೆಗೆ ಜಿಲ್ಲಾಡಳಿತ ಗುರುತಿಸಿರುವ ಭೂಮಿ ಖಾಲಿ ಜಾಗವಲ್ಲ, ಕೃಷಿ ಭೂಮಿ ಕಳೆದುಕೊಂಡರೆ ನಮ್ಮ ಬದುಕಿಗೆ ಆಧಾರವೇ ಇರುವುದಿಲ್ಲ. ರಾಜಕಾರಣಿಗಳು ವಾಸ್ತವ ಅರಿಯದೆ ಮಾತನಾಡುವುದನ್ನು ನಿಲ್ಲಿಸಬೇಕು. ಪ್ರಾಣವನ್ನಾದರೂ ನೀಡುತ್ತೇವೆ, ಆದರೆ, ಜೀವನಾಧಾರವಾದ ಜಮೀನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
ಇದು ಮಂಡ್ಯ ತಾಲೂಕು ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮಸ್ಥರ ಎಚ್ಚರಿಕೆ ಮಾತುಗಳು.
ಗ್ರಾಮಕ್ಕೆ ಬರದೆ, ವಾಸ್ತವಾಂಶವನ್ನು ಪರಿಶೀಲಿಸದೆ, ರೈತರ ಅಭಿಪ್ರಾಯವನ್ನು ಸಂಗ್ರಹಿಸದೆ, ಎಲ್ಲೋ ಕುಳಿತು ಅಧಿಕಾರಿಗಳು ಕೊಟ್ಟ ಮಾಹಿತಿ, ಸ್ಕೆಚ್ನ್ನು ಹಿಡಿದು ಮಾತನಾಡುವುದಲ್ಲ. ಕೈಗಾರಿಕೆಗೆ ಗುರುತಿಸಿರುವ ಪ್ರದೇಶದ ಸ್ಥಿತಿ ಹೇಗಿದೆ. ಖಾಲಿ ಗೋಮಾಳವೆಂದು ಹೇಳುತ್ತಿರುವ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದೆಯೇ, ಮನೆಗಳಿವೆಯೇ, ಮರ-ಗಿಡಗಳು ಬೆಳೆದು ನಿಂತಿವೆಯೇ, ಅಲ್ಲಿನ ಜನರ ಜೀವನ ಪರಿಸ್ಥಿತಿ ಹೇಗಿದೆ ಎನ್ನುವುದನ್ನೇ ಗಣನೆಗೆ ತೆಗೆದುಕೊಳ್ಳದೆ ಕೈಗಾರಿಕೆಗೆ ನೀಡುವುದಾಗಿ ಏಕಾಏಕಿ ನಿರ್ಧರಿಸಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು.
ಎಆರ್ಎಐ ಘಟಕ ಸ್ಥಾಪನೆಗೆ ಒಂದಿಂಚೂ ಭೂಮಿಯನ್ನು ನೀಡುವುದಿಲ್ಲವೆಂದು ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮಗಳ ರೈತರು, ಮಹಿಳೆಯರು ಮಂಗಳವಾರ ಕೈಗಾರಿಕೆ ಸ್ಥಾಪನೆಗೆ ಗುರುತಿಸಿರುವ ಭೂಮಿಯಲ್ಲಿ ಹೋರಾಟ ಆರಂಭಿಸಿದರು. ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೈಯ್ಯಲ್ಲಿ ವಿಷದ ಬಾಟಲಿ ಹಿಡಿದು ಶಾಸಕ ಪಿ.ರವಿಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಮುದ್ದನಘಟ್ಟ ಗ್ರಾಮದ ಸರ್ವೇ ನಂ.೪೮ ಮತ್ತು ಹೆಗ್ಗಡತಿಹಳ್ಳಿ ಗ್ರಾಮದ ಸರ್ವೇ ನಂ.೩೫ರಲ್ಲಿ ಗುರುತಿಸಿರುವ ಭೂಮಿ ಖಾಲಿ ಗೋಮಾಳವಲ್ಲ. ಹಲವು ದಶಕಗಳಿಂದ ರೈತರು ಇಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ. ರಾಗಿ, ಭತ್ತ, ತೆಂಗು ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ಆರ್ಟಿಸಿ, ಸಾಗುವಳಿ ಚೀಟಿ, ಪೋಡಿ ಮಾಡಿರುವು ಸೇರಿದಂತೆ ಅಗತ್ಯ ದಾಖಲೆಗಳಿವೆ. ಇದಾವುದನ್ನೂ ಪರಿಗಣಿಸದೆ ಸ್ಯಾಟಲೈಟ್ ಸರ್ವೆ ಮಾಡಿದೆ ಎಂದು ಹೇಳಲಾದ ಸುಳ್ಳು ಸರ್ವೆ ಸ್ಕೆಚ್ನ್ನು ನಂಬಬೇಕೆ. ಎಆರ್ಎಐಗೆ ಭೂಮಿ ಗುರುತಿಸಿದ ನಂತರದಲ್ಲಿ ಮುದ್ದನಘಟ್ಟ ಸರ್ವೆ ನಂ. ೪೮ ಮತ್ತು ಹೆಗ್ಗಡತಿಹಳ್ಳಿ ಸರ್ವೆ ನಂ.೩೫ನ್ನು ಸಂಪೂರ್ಣ ಬ್ಲಾಕ್ ಮಾಡಿ ಆರ್ಟಿಸಿ ಬಾರದಂತೆ ಮಾಡಿರುವುದೇಕೆ ಎಂದು ಪ್ರಶ್ನಿಸಿದರು.
ಕೃಷಿಯನ್ನೇ ನಂಬಿ ನಾವು ಬದುಕನ್ನು ಕಟ್ಟಿಕೊಂಡಿದ್ದೇವೆ. ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳುವುದಕ್ಕೆ ಮುಂದಾದರೆ ನಾವು ಸುಮ್ಮನಿರುವುದಿಲ್ಲ. ಯಾವುದೇ ಕಾರಣಕ್ಕೂ ನಾವು ನಮ್ಮ ಜಮೀನು ಬಿಟ್ಟುಕೊಡುವುದಿಲ್ಲ. ಕೈಗಾರಿಕೆ ಸ್ಥಾಪನೆಗೆ ಬೇರೆ ಎಲ್ಲಾದರೂ ಬರಡು ಭೂಮಿಯನ್ನು ಹುಡುಕಿಕೊಳ್ಳಿ. ನಮ್ಮ ಬದುಕನ್ನು ಏಕೆ ಬಲಿಕೊಡುತ್ತಿದ್ದೀರಿ. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸ್ತವಾಂಶ ಪರಿಶೀಲನೆ ಮಾಡದಿರುವುದು ಖಂಡನೀಯ. ವಿನಾಕಾರಣ ಎರಡೂ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವುದರ ವಿರುದ್ಧ ಕಿಡಿಕಾರಿದರು.
ನಮ್ಮ ತಾತನ ಕಾಲದಿಂದಲೂ ನಾವಿಲ್ಲಿ ವಾಸ ಮಾಡುತ್ತಿದ್ದೇವೆ. ಇಲ್ಲಿರುವ ಭೂಮಿಯನ್ನು ಬದುಕಿನ ಆಧಾರವಾಗಿಸಿಕೊಂಡಿದ್ದೇವೆ. ನಿರಂತರವಾಗಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಈ ಜಮೀನು ಬಿಟ್ಟರೆ ನಮಗೆ ಬೇರಾವುದೇ ಜಮೀನು ಇಲ್ಲ. ನಮ್ಮ ಸ್ವಂತ ದುಡಿಮೆಯಿಂದ ಮರಗಳನ್ನು ಬೆಳೆಸಿದ್ದೇವೆ.ಯಾವುದೇ ಕಾರಣಕ್ಕೂ ನಮ್ಮ ಜಮೀನನ್ನು ಕೈಗಾರಿಕೆ ಸ್ಥಾಪನೆಗೆ ಬಿಟ್ಟುಕೊಡುವುದಿಲ್ಲ. ನಮ್ಮ ಜಮೀನಿನ ಹಕ್ಕನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಹೋರಾಟ ಮಾಡುತ್ತೇವೆ. ನಮ್ಮಿಂದ ಶಾಸಕರಾದವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸದೆ ಬೀದಿಗೆ ತಳ್ಳುವ ಮಾತನಾಡುತ್ತಿದ್ದಾರೆ.
- ಪುಟ್ಟಮ್ಮ, ರೈತ ಮಹಿಳೆನಮಗೆ ಕಾರ್ಖಾನೆಯೇ ಬೇಡ
ಶಾಸಕ ರವಿಕುಮಾರ್ ಅವರು ನಿಮ್ಮ ಮನೆ ಮಗನಾಗಿ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿ ಮತ ಪಡೆದುಕೊಂಡಿದ್ದಾರೆ. ಆದರೆ ಇಂದು ನಮ್ಮ ಬದುಕಿಗೆ ಆಧಾರವಾಗಿರುವ ಜಮೀನನ್ನೇ ಕಸಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೂ ಬೂಟಾಟಿಕೆಯ ಮಾತುಗಳನ್ನಾಡುವುದು ಬೇಡ. ನಮಗೆ ಯಾವುದೇ ಕಾರ್ಖಾನೆಯೂ ಬೇಡ, ಉದ್ಯೋಗದ ಭರವಸೆಯೂ ಬೇಡ. ಬೆಳಗ್ಗೆ ಎದ್ದ ತಕ್ಷಣ ನಮ್ಮ ದನಕರು, ಕುರಿಗಳನ್ನು ಮೇಯಿಸಲು ಜಾಗವಿಲ್ಲದಂತಾಗಿದೆ. ನಮ್ಮ ಮಕ್ಕಳು ಸೇರಿದಂತೆ ಕುಟುಂಬದ ಜೀವನ ಕೃಷಿಯನ್ನೇ ಅವಲಂಬಿಸಿದೆ. ಇಷ್ಟು ವರ್ಷ ಕಷ್ಟಪಟ್ಟು ಉಳಿಸಿಕೊಂಡಿರುವ ನಮ್ಮ ಜಮೀನು ನಮಗೇ ಇರಲಿ.
ಸರ್ಕಾರ ನಾವು ಬಡವರ ಪರ, ಬಡವರಿಗೆ ಆದ್ಯತೆ ಎನ್ನುತ್ತದೆ. ಬಡವರಿಗಾಗಿ ಸರ್ಕಾರ ಮಾಡಿರುವುದೇನು. ಕೈ ಬರವಣಿಗೆ ಆರ್ಟಿಸಿ ಇದೆ, ಸ್ಕೆಚ್ ಇದೆ. ನಮಗೆ ಜೀವನ ನಡೆಸುವುದಕ್ಕೆ ಭೂಮಿ ಬೇಕು. ರಾಗಿ, ಹುರುಳಿ ಬೆಳೆದಿದ್ದೇವೆ. ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಇವೆ. ನಾವ್ಯಾಕೆ ಜಮೀನು ಬಿಟ್ಟುಕೊಡಬೇಕು. ಬಡವರ ಪರಿಸ್ಥಿತಿ ಅಧಿಕಾರ ನಡೆಸುವವರಿಗೆ ಅರ್ಥವಾಗುವುದಿಲ್ಲ. ಅವರಿಗೆ ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಮನಸ್ಸೂ ಇಲ್ಲ, ಆಸಕ್ತಿಯೂ ಇಲ್ಲ. ಅಂತಹವರಿಗೆ ನಾವು ಏನು ಹೇಳಿಯೂ ಪ್ರಯೋಜನವಿಲ್ಲ. ಒಟ್ಟಾರೆ ನಾವು ಯಾರಿಗೂ ಭೂಮಿ ಕೊಡುವುದಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.