ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಇಂತಹ ಧೈರ್ಯಶಾಲಿ ಕಥಾವಸ್ತುವನ್ನು ಆಯ್ದುಕೊಂಡು ಸಿನಿಮಾ ನಿರ್ಮಿಸಿರುವ ನಿರ್ದೇಶಕ ಹಾಗೂ ಇಡೀ ತಂಡದ ಸಾಹಸ ಮತ್ತು ಬದ್ಧತೆಯನ್ನು ಮೆಚ್ಚಲೇಬೇಕೆಂದು ಅಭಿಪ್ರಾಯಪಟ್ಟರು. ಈ ಚಿತ್ರವನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ, ಸಮಾಜದಲ್ಲಿನ ಎಲ್ಲಾ ಶೋಷಿತ ವರ್ಗಗಳ ಬದುಕಿನ ಪ್ರತಿನಿಧಿಯಾಗಿ ರೂಪಿಸಲಾಗಿದೆ. ಶತಮಾನಗಳ ಹಿಂಸೆ, ದೌರ್ಜನ್ಯ, ಅನ್ಯಾಯಗಳನ್ನು ಅನುಭವಿಸುತ್ತಾ ಬಂದ ತಳ ಸಮುದಾಯಗಳ ನೋವುಗಳನ್ನು ಸಂವೇದನಾಶೀಲವಾಗಿ ಚಿತ್ರಿಸಿರುವ ಈ ಚಲನಚಿತ್ರವು ಪ್ರಜ್ಞಾವಂತ ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ ಎಂದರು. ಸ್ವಾತಂತ್ರ್ಯ ದೊರೆತು ೭೯ ವರ್ಷಗಳು, ಸಂವಿಧಾನ ಜಾರಿಯಾಗಿ ೭೬ ವರ್ಷಗಳು ಪೂರ್ತಿಯಾದರೂ ಸಹ, ತಳ ಸಮುದಾಯಗಳ ಬದುಕು ಇನ್ನೂ ಅಸಹನೀಯವಾಗಿಯೇ ಮುಂದುವರಿದಿದೆ. ಜಾತಿ ಆಧಾರಿತ ಹಲ್ಲೆ, ದೌರ್ಜನ್ಯ ಹಾಗೂ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಘಟನೆ ಜಾತಿಯ ಕ್ರೌರ್ಯ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಇಂತಹ ವ್ಯವಸ್ಥೆಯ ವಿರುದ್ಧ ಶೋಷಿತ ಸಮುದಾಯಗಳು ಅಹಿಂಸಾತ್ಮಕ ಪ್ರತಿರೋಧವನ್ನು ತೋರಬೇಕೆಂಬ ಸಂದೇಶವನ್ನು ‘ಲ್ಯಾಂಡ್ ಲಾರ್ಡ್’ ಪರಿಣಾಮಕಾರಿಯಾಗಿ ಸಾರುತ್ತದೆ ಎಂದು ಹೇಳಿದರು.
ಚಲನಚಿತ್ರವು ಹಿಂಸೆಯಿಂದ ಅಹಿಂಸೆಯ ಕಡೆಗೆ ಸಮಾಜವನ್ನು ಕರೆದೊಯ್ಯುವ ಸಂದೇಶವನ್ನು ಹೊತ್ತುಕೊಂಡಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಸಮಾನ ಹಕ್ಕು ಮತ್ತು ಅವಕಾಶಗಳು ಎಲ್ಲರಿಗೂ ದೊರಕಬೇಕೆಂದು ಬಲವಾಗಿ ಪ್ರತಿಪಾದಿಸುತ್ತದೆ. ಜೊತೆಗೆ, ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರಿಗೆ ಇನ್ನೂ ಸಮಾನ ಹಕ್ಕುಗಳು ಸಿಗದಿರುವ ವಾಸ್ತವವನ್ನು ತೆರೆದಿಟ್ಟಿದೆ. ಮಹಿಳೆಯರ ಸಬಲೀಕರಣ ಹಾಗೂ ಶೋಷಿತ ವರ್ಗಗಳ ವಿಮೋಚನೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣವೇ ಏಕೈಕ ದಾರಿ ಎಂಬ ಸಂದೇಶವನ್ನು ವಿಭಿನ್ನ ಹಾಗೂ ಪ್ರಭಾವಶಾಲಿ ರೀತಿಯಲ್ಲಿ ಚಿತ್ರಿಸಲಾಗಿದೆ.ರಾಚಯ್ಯನ ಪಾತ್ರದಲ್ಲಿ ನಾಯಕ ನಟ ದುನಿಯಾ ವಿಜಯ್ ಅವರ ಮನೋಜ್ಞ ಅಭಿನಯ, ಖಳನಟನಾಗಿ ನಟಿಸಿರುವ ಪ್ರತಿಭಾವಂತ ಕಲಾವಿದ ರಾಜ್ ಬಿ. ಶೆಟ್ಟಿ ಅವರ ಗಂಭೀರ ಪಾತ್ರ ನಿರ್ವಹಣೆ, ಉಮಾಶ್ರೀ ಅವರ ಮಾಂತ್ರಿಕ ಅಭಿನಯ, ನಿರ್ದೇಶಕ ಜಡೇಶ್ ಕೆ. ಹಂಪಿ ಅವರ ದೃಷ್ಟಿಕೋನ ಹಾಗೂ ಚಲನಚಿತ್ರದಲ್ಲಿನ ಎಲ್ಲಾ ಪಾತ್ರಧಾರಿಗಳ ಸಹಜ ಅಭಿನಯ ಚಿತ್ರಕ್ಕೆ ಜೀವ ತುಂಬಿದೆ ಎಂದು ಪ್ರಶಂಸಿಸಿದರು.
ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಶಕ್ತಿಯುಳ್ಳ ಈ ಚಲನಚಿತ್ರವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ವೀಕ್ಷಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾಕ್ಕೆ ಶೇ.೧೦೦ರಷ್ಟು ತೆರಿಗೆ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುವುದಾಗಿ ಹೇಳಿದರು.ಇದಲ್ಲದೆ, ಈ ಚಿತ್ರದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾದ್ಯಂತ ಶೀಘ್ರದಲ್ಲೇ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸಣ್ಣೇಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ಜಾಗೃತ ಅಲೆಮಾರಿ ಸಮುದಾಯಗಳ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ವಿ. ಗೋವಿಂದರಾಜು, ಗ್ರಾಪಂ ಮಾಜಿ ಸದಸ್ಯ ಗುಡ್ಡೇನಹಳ್ಳಿ ರಂಗಸ್ವಾಮಿ, ಪೌರಕಾರ್ಮಿಕ ಮುಖಂಡ ನಲ್ಲಪ್ಪ ಇತರರು ಉಪಸ್ಥಿತರಿದ್ದರು.