ರಾಗಿ ಹೊಸಳ್ಳಿ ಸಮೀಪ ಮತ್ತೆ ಮಣ್ಣು ಕುಸಿತ

KannadaprabhaNewsNetwork |  
Published : Jul 20, 2024, 12:47 AM IST
೧೯ಎಸ್.ಆರ್.ಎಸ್೧ಪೊಟೋ೧ (ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿರುವುದು.)೧೯ಎಸ್.ಆರ್.ಎಸ್೧ಪೊಟೋ೨ (ರಾಗಿಹೊಸಳ್ಳಿ ಸಮೀಪ ತೋಟಗಳು ಮುಳುಗಿರುವುದು.) | Kannada Prabha

ಸಾರಾಂಶ

ಸಂಪಖಂಡದಿಂದ ದೇವಿಮನೆ ಘಟ್ಟ ಪ್ರದೇಶದವರೆಗೂ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದು, ಮಣ್ಣು ಹೆದ್ದಾರಿಯಲ್ಲಿ ಹರಡಿಕೊಂಡಿದೆ. ಚಿಕ್ಕಡಿ ಬಳಿ ಬೃಹತ್ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದರೆ ಮೊಸಳೆಗುಂಡಿ ಸಮೀಪವೂ ಭರ್ಜರಿ ಮಣ್ಣು ಕುಸಿದಿದೆ.

ಶಿರಸಿ: ಕರಾವಳಿ- ಮಲೆನಾಡು- ಬಯಲುಸೀಮೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಹಲವಾರು ಕಡೆ ಭೂ ಕುಸಿತ ಉಂಟಾಗಿ ಮಣ್ಣು ಹಾಗೂ ಮರಗಳು ಹೆದ್ದಾರಿ ಆವರಿಸಿಕೊಂಡಿದೆ. ತಾಲೂಕಿನ ರಾಗಿಹೊಸಳ್ಳಿ ಸಮೀಪವೇ ಮತ್ತೆ ಗುಡ್ಡ ಕುಸಿದಿದ್ದು, ತೆರವುಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡ ಬೆನ್ನಲ್ಲೇ ಮತ್ತೆ ಗುಡ್ಡ ಕುಸಿತವಾಗಿದೆ.

ಶುಕ್ರವಾರ ಬೆಳಗಿನಿಂದಲೂ ಎಡಬಿಡದೇ ಸುರಿದ ಮಳೆ, ಗಾಳಿಗೆ ಅನಾಹುತ ಸೃಷ್ಟಿಸಿದೆ. ಕಳೆದ ಐದು ದಿನಗಳ ಹಿಂದೆ ಮಣ್ಣು ಕುಸಿದ ಪ್ರಮಾಣದಲ್ಲೇ ಈಗ ಮತ್ತೆ ರಸ್ತೆಯ ಮೇಲೆ ಮಣ್ಣು ಕುಸಿತವಾಗಿದೆ. ಸಂಪಖಂಡದಿಂದ ದೇವಿಮನೆ ಘಟ್ಟ ಪ್ರದೇಶದವರೆಗೂ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದು, ಮಣ್ಣು ಹೆದ್ದಾರಿಯಲ್ಲಿ ಹರಡಿಕೊಂಡಿದೆ. ಚಿಕ್ಕಡಿ ಬಳಿ ಬೃಹತ್ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದರೆ ಮೊಸಳೆಗುಂಡಿ ಸಮೀಪವೂ ಭರ್ಜರಿ ಮಣ್ಣು ಕುಸಿದಿದೆ.

ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಮರಗಳು ಧರಗೆ ಉರುಳಿ ಬಿದ್ದಿದ್ದು, ಈಗ ಈ ರಸ್ತೆಯಲ್ಲಿ ಓಡಾಡಲು ಸ್ಥಳೀಯರೂ ಭಯಪಡುವ ಸ್ಥಿತಿ ಉಂಟಾಗಿದೆ. ಶಿರಸಿ- ಕುಮಟಾ ರಸ್ತೆಯಲ್ಲಿ ಕುಸಿದ ಗುಡ್ಡಗಳನ್ನೆಲ್ಲ ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಲು ಇನ್ನೂ ಮೂರು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಮಳೆ ಇದೇ ರೀತಿ ಮುಂದುವರಿದಲ್ಲಿ ತೆರವು ಕಾರ್ಯಾಚರಣೆಗೆ ತಡೆ ಉಂಟಾಗುವ ಜತೆಗೆ ಇನ್ನಷ್ಟು ಕಡೆ ಮಣ್ಣು ಕುಸಿಯುವ ಸಾಧ್ಯತೆಯೂ ದಟ್ಟವಾಗಿದೆ.

ರಸ್ತೆ ವಿಸ್ತರಣೆಗೆ ಮಣ್ಣು ತೆಗೆದ ಬಹುತೇಕ ಕಡೆ ಗುಡ್ಡ ಕುಸಿತವಾಗಿದೆ. ಬೆಟ್ಟದ ಮೇಲಿನಿಂದ ಹರಿದುಬರುವ ಬೃಹತ್ ಪ್ರಮಾಣದ ನೀರು ಹಾಗೂ ಗುಡ್ಡಗಳ ಒಳಗಿನಿಂದ ಹರಿಯುವ ಜಲದಿಂದಾಗಿ ಮಣ್ಣು ಕುಸಿತಗೊಂಡಿದೆ. ರಸ್ತೆ ವಿಸ್ತರಣೆಯ ವೇಳೆ ಅರ್ಧ ಬೇರು ಹರಿದ ಸ್ಥಿತಿಯಲ್ಲಿರುವ ಬೃಹತ್ ಮರಗಳು ಗಾಳಿಯ ಅಬ್ಬರದಿಂದಾಗಿ ರಸ್ತೆಗೆ ಉರುಳುತ್ತಿವೆ.

ಅಘನಾಶಿನಿ ನದಿ ತುಂಬಿ ಹರಿಯುತ್ತಿದೆ. ಇಲ್ಲಿಯ ಶಿರಸಿ- ಸಿದ್ದಾಪುರ ಗಡಿ ಪ್ರದೇಶದ ಸರ್ಕುಳಿಯಲ್ಲಿ ಶುಕ್ರವಾರ ಬೆಳಗ್ಗೆ ೧೦ ಗಂಟೆಯಿಂದ ಸೇತುವೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿದು ಶಿರಸಿ- ಗೋಳಿಮಕ್ಕಿ ಮಾರ್ಗ ಸಂಚಾರ ಸ್ಥಗಿತಗೊಂಡಿತ್ತು. ಬನವಾಸಿ ರಸ್ತೆಯ ಗುಡ್ನಾಪುರದಲ್ಲಿ ಕೆರೆಯ ನೀರು ಉಕ್ಕಿ ಹರಿದು ಬಂಗಾರೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಇದರಿಂದ ಈ ರಸ್ತೆಯಲ್ಲಿ ಜನಸಂಚಾರವನ್ನು ತಾಲೂಕಾಡಳಿತ ನಿಷೇಧಿಸಿದೆ.

ತಾಲೂಕಿನ ಜಾನ್ಮೆನ ಬಳಿ ಸುಸಾನ್ ಅವರ ಮನೆಯೊಳಗೆ ನೀರು ನುಗ್ಗಿ ಆತಂಕ ಉಂಟಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಶೌರ್ಯ ತಂಡ ಸ್ಥಳಕ್ಕೆ ತೆರಳಿ ನೀರಿನ ಪ್ರವಾಹದ ದಿಕ್ಕು ಬದಲಿಸಿ ಸಮಸ್ಯೆ ತಪ್ಪಿಸಿದೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ