ಚನ್ನಪಟ್ಟಣ ಸರ್ಕಾರಿ ಕಾಲೇಜು ಆವರಣದಲ್ಲಿ ಭೂಕುಸಿತ

KannadaprabhaNewsNetwork | Published : Jul 27, 2024 12:46 AM

ಸಾರಾಂಶ

ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭೂಕುಸಿತ ಕ್ರೀಡಾಪಟುಗಳಲ್ಲಿ ಆತಂಕ ಮೂಡಿಸಿದೆ. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಆಟ ಆಡುತ್ತಿದ್ದ ವೇಳೆ ಕ್ರೀಡಾಪಟು ನಿಂತಿದ್ದ ಜಾಗ ಏಕಾಏಕಿ 8 ಅಡಿ ಆಳದಷ್ಟು ಭೂಮಿ ಕುಸಿದಿದ್ದು ಗುಂಡಿ ಬಿದ್ದಿದೆ.

-ಏಕಾಏಕಿ 8 ಅಡಿಯಷ್ಟು ಕುಸಿದ ಭೂಮಿ । ತಹಸೀಲ್ದಾರ್ ಭೇಟಿ, ಪರಿಶೀಲನೆ । ರಾಗಿ ಗುಳಿ ಎಂದ ಪುರಾತತ್ವಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭೂಕುಸಿತ ಕ್ರೀಡಾಪಟುಗಳಲ್ಲಿ ಆತಂಕ ಮೂಡಿಸಿದೆ.

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಆಟ ಆಡುತ್ತಿದ್ದ ವೇಳೆ ಕ್ರೀಡಾಪಟು ನಿಂತಿದ್ದ ಜಾಗ ಏಕಾಏಕಿ 8 ಅಡಿ ಆಳದಷ್ಟು ಭೂಮಿ ಕುಸಿದಿದ್ದು ಗುಂಡಿ ಬಿದ್ದಿದೆ. ಆಟಗಾರ ಗುಂಡಿ ಒಳಕ್ಕೆ ಬಿದ್ದಿದ್ದು, ತಕ್ಷಣ ಆತನನ್ನು ಉಳಿದ ಕ್ರೀಡಾಪಟುಗಳು ಮೇಲೆತ್ತಿ, ಕುಸಿದ ಜಾಗದಲ್ಲಿ ಕಲ್ಲು ಚಪ್ಪಡಿ ಹಾಕಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಕ್ರೀಡಾಂಗಣ ಹಾಗೂ ವಾಕಿಂಗ್ ಪಾತ್ ಇಲ್ಲ. ಇದೇ ಮೈದಾನದಲ್ಲಿ ಪ್ರತಿನಿತ್ಯ ನೂರಾರು ಮಂದಿ ವಾಕಿಂಗ್ ಮಾಡುತ್ತಾರೆ. ಕ್ರೀಡಾಪಟುಗಳು ಇದೇ ಮೈದಾನದಲ್ಲಿ ಅಭ್ಯಾಸ ಮಾಡಿದರೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಇದೇ ಆಟದ ಮೈದಾನವಾಗಿದೆ. ಪ್ರತಿನಿತ್ಯ ಸಹಸ್ರಾರು ಜನ ಕ್ರೀಡಾಭ್ಯಾಸ ಮಾಡುತ್ತಾರೆ. ಇಂತಹ ಜಾಗದಲ್ಲಿ ಏಕಾಏಕಿ ಭೂಕುಸಿದಿರುವುದು ಆತಂಕ ಮೂಡಿಸಿದೆ ಎಂದು ಕ್ರೀಡಾಪಟುಗಳು ಹೇಳಿದ್ದಾರೆ.

ಕಾಲೇಜು ಮೈದಾನದಲ್ಲಿ ಆಗಾಗ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಬೃಹತ್ ವೇದಿಕೆ ನಿರ್ಮಾಣಕ್ಕೆ ಹೈಡ್ರಾಲಿಕ್ ಸ್ಟ್ಯಾಂಡ್‌ಗಳನ್ನು ಬಳಸಲಾಗುತ್ತಿದೆ. ಈ ಕಾರಣಕ್ಕೆ ಮೈದಾನದಲ್ಲಿ ಭೂಕುಸಿತಗೊಂಡಿದೆ ಎಂಬುದು ಕ್ರೀಡಾಪಟುಗಳ ಆರೋಪವಾಗಿದೆ.

ರಾಗಿ ಗುಳಿ:

ಕಾಲೇಜು ಮೈದಾನದಲ್ಲಿ ಭೂಕುಸಿತಗೊಂಡ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್ ನರಸಿಂಹಮೂರ್ತಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪುರಾತತ್ವ ಇಲಾಖೆಗೆ ಗುಂಡಿಯ ಚಿತ್ರಗಳನ್ನು ಕಳುಹಿಸಿದ್ದು, ಅದು ಹಿಂದಿನ ಕಾಲದಲ್ಲಿ ನಿರ್ಮಿಸುತ್ತಿದ್ದ ರಾಗಿ ಗುಳಿ ಎಂಬುದು ದೃಡಪಟ್ಟಿದೆ.

ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ 8 ಅಡಿಗಳಷ್ಟು ಭೂಮಿ ಕುಸಿತಗೊಂಡಿದ್ದು, ಈ ಕುರಿತು ಪುರಾತತ್ವ ಇಲಾಖೆಯನ್ನು ಸಂಪರ್ಕಿಸಲಾಗಿತ್ತು. ಅದು ಹಿಂದಿನ ಕಾಲದಲ್ಲಿ ನಿರ್ಮಿಸುತ್ತಿದ್ದ ರಾಗಿ ಗುಳಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಗುಂಡಿಯನ್ನು ಮುಚ್ಚಲಾಗುವುದು.

-ನರಸಿಂಹಮೂರ್ತಿ, ತಹಸೀಲ್ದಾರ್, ಚನ್ನಪಟ್ಟಣ

Share this article