ಶೃಂಗೇರಿಯಲ್ಲಿ ಭೂಕುಸಿತ, ರಸ್ತೆಗೆ ಉರುಳುತ್ತಿರುವ ಮರಗಳು

KannadaprabhaNewsNetwork | Published : Jul 15, 2024 1:47 AM

ಸಾರಾಂಶ

ಶೃಂಗೇರಿ, ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಸಮೀಪ ಭೂಕುಸಿತ ಉಂಟಾಗಿ ಗುಡ್ಡವೂ ಕುಸಿಯುತ್ತಿರುವುದರಿಂದ ಬೃಹತ್ ಮರಗಳು ಕೂಡ ರಸ್ತೆಗುರುಳಿ ಬೀಳುತ್ತಿವೆ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಸಮೀಪ ಭೂಕುಸಿತ ಉಂಟಾಗಿ ಗುಡ್ಡವೂ ಕುಸಿಯುತ್ತಿರುವುದರಿಂದ ಬೃಹತ್ ಮರಗಳು ಕೂಡ ರಸ್ತೆಗುರುಳಿ ಬೀಳುತ್ತಿವೆ.

ಶೃಂಗೇರಿಯಿಂದ ನೆಮ್ಮಾರಿನವರೆಗೆ ಕಳೆದ ಒಂದು ವರ್ಷದಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿತ್ತು. ತ್ಯಾವಣ ಬಳಿ ಗುಡ್ಡ ಕೊರೆದು ರಸ್ತೆ ಅಗಲೀಕರಣ ಮಾಡಲಾಗಿತ್ತು. ಈ ವೇಳೆಯಲ್ಲಿ ಅಲ್ಲಿದ್ದ ಬೃಹತ್ ಮರಗಳ ಬುಡದವರೆಗೂ ಮಣ್ಣು ತೆಗೆದು ಹಾಗೆಯೇ ಬಿಡಲಾಗಿತ್ತು. ಆದರೆ ಇದೀಗ ಭಾರಿ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಹಂತಹಂತವಾಗಿ ಕುಸಿದು ಮಣ್ಣು ರಸ್ತೆಯ ಮೇಲೆ ರಾಶಿ ರಾಶಿಯಾಗಿ ಬೀಳುತ್ತಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಕೆಲದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ರಸ್ತೆಯ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡು ಸಂಚಾರಕ್ಕೆ ಅಡಚಣೆಯಾಗಿತ್ತು. ವಾಹನಗಳ ಸಂಚಾರವಿಲ್ಲದ ವೇಳೆಯಲ್ಲಿ ಮರಗಳು ಉರುಳಿ ಬಿದ್ದರೂ ಅನಾಹುತ ಗಳು ಸಂಭವಿಸಿಲ್ಲ. ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮತ್ತೆ ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಮರಗಳು ರಸ್ತೆಗುರುಳಿ ಬಿದ್ದಿವೆ.

ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ನಿರ್ಲಕ್ಷ್ಯ ದಿಂದ ಮರಗಳು ರಸ್ತೆಗುರುಳಿ ಬೀಳುತ್ತಿವೆ. ರಸ್ತೆ ಸಂಚಾರಿಗಳ ಪಾಲಿಗೆ ಅಪಾಯಕಾರಿ ವಲಯವಾಗಿ ಪರಿಣಮಿಸಿದೆ. ಪ್ರಯಾಣಿಕರ ಸುರಕ್ಷತೆ, ಅನಾಹುತ ಉಂಟಾಗುವ ಮೊದಲೇ ಅರಣ್ಯ ಇಲಾಖೆ, ಹೆದ್ದಾರಿ ಇಲಾಖೆಯವರು ರಸ್ತೆಗುರುಳಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ತುರ್ತು ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಕೆಲದಿನಗಳ ಹಿಂದೆ ಶೃಂಗೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲೂ ಶಾಸಕರ, ಅರಣ್ಯ ಇಲಾಖೆ ಅಧಿಕಾರಿಗಳ, ತಹಸೀಲ್ದಾರರ ಗಮನಕ್ಕೆ ತರಲಾಗಿತ್ತು.

ಮಳೆಯಿಂದ ನಿರಂತರವಾಗಿ ಗುಡ್ಡಕುಸಿದು, ಮರಗಳು ರಸ್ತೆಗುರುಳುತ್ತಿದ್ದರೂ ಅರಣ್ಯ ಇಲಾಖೆಯಾಗಲೀ, ಹೆದ್ದಾರಿ ಇಲಾಖೆಯಾಗಲೀ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿಂದೆ ಮಳೆಗಾಳಿಯಲ್ಲಿ ಮಡಿಕೇರಿ, ಬಾಳೆಹೊನ್ನೂರಿನಲ್ಲಿ ಬೃಹತ್ ಮರಗಳು ರಸ್ತೆಗುರುಳಿ ಸಂಭವಿಸಿದ ದಾರುಣಘಟನೆಗಳು ಇಲ್ಲಿಯೂ ಮರುಕಳಿಸದಂತೆ ಕೂಡಲೇ ಗಂಭೀರವಾಗಿ ಪರಿಗಣಿಸಿ ತುರ್ತುಕ್ರಮ ಕೈಗೊಂಡು ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕಿದೆ.

Share this article