ಮಳೆಯಿಂದ ಹಳಿ ಮೇಲೆ ಭೂ ಕುಸಿತ : ಹಾಸನ- ಮಂಗಳೂರು ಮಾರ್ಗದ ಸಂಚಾರ ಬಂದ್‌

KannadaprabhaNewsNetwork |  
Published : Aug 03, 2026, 01:30 AM IST
2ಎಚ್ಎಸ್ಎನ್15 : ಹಾಸನ ರೈಲ್ವೆ ನಿಲ್ದಾಣದಲ್ಲಿ ಬೇರೆ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರು. | Kannada Prabha

ಸಾರಾಂಶ

ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.

ಕನ್ನಡಪ್ರಭ ವಾರ್ತೆ ಹಾಸನ

ಮಲೆನಾಡು ಭಾಗದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡಕುಮರಿ- ಕಡಗರವಳ್ಳಿ ನಡುವಿನ ರೈಲ್ವೆ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ಇದರಿಂದ ಹಾಸನ ಸೇರಿದಂತೆ ಸುತ್ತಮುತ್ತಲ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಭಾನುವಾರದಂದು ಬೆಳಗ್ಗೆ ಪರದಾಡಿದರು.

ಹಳಿ ಮೇಲೆ ಅಪಾರ ಪ್ರಮಾಣದ ಮಣ್ಣು, ಕಲ್ಲು ಹಾಗೂ ಬಂಡೆಗಳು ಬಿದ್ದಿರುವ ಹಿನ್ನೆಲೆ ಬೆಂಗಳೂರು- ಮಂಗಳೂರು ರೈಲು ಮಾರ್ಗದ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಭೂಕುಸಿತದ ನಂತರ ರೈಲ್ವೆ ಇಲಾಖೆ ತುರ್ತು ಕಾರ್ಯಾಚರಣೆ ಆರಂಭಿಸಿದ್ದು, ಹಳಿ ಪುನಃ ಸಂಚಾರಕ್ಕೆ ಯೋಗ್ಯವಾಗಿಸಲು ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸಿದೆ. ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.

ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:

ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.

ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ

ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್‌ಗಳ ಮೊರೆ ಹೋಗಬೇಕಾಯಿತು.

ಹಳಿ ತೆರವಿಗೆ ಯುದ್ಧೋಪಾದಿ ಕಾರ್ಯಾಚರಣೆ:

ಭೂಕುಸಿತದ ಮಾಹಿತಿ ದೊರೆಯುತ್ತಿದ್ದಂತೆಯೇ ರೈಲ್ವೆ ಇಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಜೆಸಿಬಿ ಮತ್ತು ಇತರೆ ಭಾರೀ ಯಂತ್ರಗಳ ನೆರವಿನಿಂದ ಹಳಿ ಮೇಲಿನ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸಂಚಾರ ಪುನರಾರಂಭಕ್ಕೆ ಸಮಯ ಬೇಕು:

ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ, ಮರಗಳ ಮಾರಣ ಹೋಮ
ನೀರಿಲ್ಲದೆ ಬರಿದಾಗಿರುವ ದೊಡ್ಡಕೆರೆ ಕೆಲವರಿಂದ ಒತ್ತುವರಿ