ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಎನ್. ನಿಡಗೋಡು ಗ್ರಾಮದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ ಚುನಾವಣೆಯನ್ನು ಅತ್ಯಂತ ಉತ್ಸಾಹ ಹಾಗೂ ಶಿಸ್ತುಬದ್ಧವಾಗಿ ನಡೆಸಿದ ಸಂದರ್ಭದಲ್ಲಿ ಎಚ್.ಎಂ. ದಿನೇಶ್ ಮಾತನಾಡಿ, ಶಾಲಾ ಸಂಸತ್ ಚುನಾವಣೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಅರಿಯಲು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಇಂದಿನ ಮಕ್ಕಳೇ ಮುಂದಿನ ದೇಶದ ನಾಯಕರು. ಶಿಕ್ಷಣದ ಜೊತೆಗೆ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗುವ ಪ್ರಜೆಗಳಾಗಿ ಬೆಳೆಯಬೇಕು. ಸಮಾಜದಲ್ಲಿನ ಅನ್ಯಾಯವನ್ನು ವಿರೋಧಿಸಿ, ಸತ್ಯ ಮತ್ತು ನ್ಯಾಯದ ಪರ ನಿಲ್ಲುವ ನಾಯಕರಾಗಬೇಕು ಎಂದರು.
ಶಾಲೆಯ ಖಜಾಂಚಿ ಸಿ.ಎಚ್. ಲೋಕೇಶ್ ಮಾತನಾಡಿ, ಶಾಲಾ ಹಂತದಲ್ಲೇ ಚುನಾವಣೆಯ ಅನುಭವ ದೊರೆಯುವುದು ವಿದ್ಯಾರ್ಥಿಗಳ ಭವಿಷ್ಯದ ನಾಯಕತ್ವಕ್ಕೆ ಭದ್ರ ಅಡಿಪಾಯವಾಗಿದೆ. ವಿಧಾನಸಭೆ ಚುನಾವಣೆಯ ಮಾದರಿಯಲ್ಲೇ ಇ.ವಿ.ಎಂ. ಮೂಲಕ ಒಂದು ಮತವೂ ಪೋಲಾಗದಂತೆ ಚುನಾವಣೆ ನಡೆಸಿರುವುದು ಶ್ಲಾಘನೀಯ. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಸಹಪಾಠಿಗಳ ಮುಂದೆ ಪರಿಚಯ ಮಾಡಿಕೊಂಡು ಮತಯಾಚನೆ ನಡೆಸಿದರು. ಬಳಿಕ ಚುನಾವಣಾ ನಿಯಮಾನುಸಾರ ಇ.ವಿ.ಎಂ. (ಎಲೆಕ್ಟ್ರಾನಿಕ್ ಮತಯಂತ್ರ) ಮೂಲಕ ಮತದಾನ ಪ್ರಕ್ರಿಯೆ ನಡೆಯಿತು. 4 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ದೀಪಾ ಎಂ.ಎನ್. ಮಮತಾಶ್ರೀ, ಪ್ರೀತಿ ಎಚ್.ಎಂ., ಅಸ್ಮಾ, ಕಾವ್ಯ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.