- ಮಳೆ ಸುರಿಯುತ್ತಿದ್ದರೂ, ನಿಂತರೂ ಕುಸಿತ ಮಾತ್ರ ನಿರಂತರ । ಜನರ ಬದುಕಿನ ಮೇಲೆ ಬರೆ
ಕನ್ನಡಪ್ರಭವಾರ್ತೆ, ಶೃಂಗೇರಿ
ಕೇರಳದ ವಯನಾಡು, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಚಾರ್ಮಡಿ ಘಾಟ್, ಆಗುಂಬೆ ಘಾಟ್, ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ, ಗುಡ್ಡಕುಸಿತದ ಘಟನೆಗಳು ನಡೆದಿದೆ. ಆದರೆ ಮಲೆನಾಡಿನಲ್ಲಿಯೂ ಕಳೆದ ವರ್ಷದಿಂದ ಭಾರೀ ಮಳೆಗೆ ಅಲ್ಲಲ್ಲಿ ರಸ್ತೆ ಕುಸಿತ, ಭೂಕುಸಿತಗಳು ಆರಂಭಗೊಂಡಿದ್ದು ರಸ್ತೆ, ಮನೆ, ಸೇತುವೆಗಳು ಅಪಾಯದಂಚಿಗೆ ಸಿಲುಕಿ ಸ್ಥಳಿಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.ಮಲೆನಾಡಿನಲ್ಲಿ ಹಿಂದಿನಿಂದಲೂ ಮಳೆ ಗಾಳಿ ಅಬ್ಬರ ಮಾಮೂಲು. ನೆರೆ ಪ್ರವಾಹಗಳು ಸಹಜ ಲಕ್ಷಣ. ಆದರೀಗ ಭೂಕುಸಿತ ,ಹಾಗೂ ಬದುಕಿಗೆ ಬರೆ ಎಳೆಯುತ್ತಿದೆ.
ಕಳೆದೆರೆಡು ವರ್ಷಗಳ ಹಿಂದೆ ಶೃಂಗೇರಿ, ಆಗುಂಬೆ, ಉಡುಪಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ನೇರಳಕೊಡಿಗೆ ಬಳಿ ಭೂಮಿ ಕುಸಿದು ರಸ್ತೆ ಸಂಪರ್ಕ ಬಂದ್ ಆಗಿತ್ತು. ರಸ್ತೆಯೇ ಕುಸಿದು ಕಂದಕ ಉಂಟಾಗಿತ್ತು. ರಾತ್ರೋ ರಾತ್ರಿ ನಡೆದ ಬೃಹತ್ ಭೂ ಕುಸಿತದ ಸದ್ದಿಗೆ ಸುತ್ತಮುತ್ತಲ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಕೊಪ್ಪ ಶೃಂಗೇರಿ ಸಂಪರ್ಕ ಕಲ್ಪಿಸುವ ಆನೆಗುಂದ ರಾಷ್ಟ್ರೀಯ ಹೆದ್ದಾರಿ ಬಳಿಯೂ ಕಳೆದ ವರ್ಷ ಭಾರೀ ಮಳೆಗೆ ಗುಡ್ಡಕುಸಿದು ರಸ್ತೆಯ ಮೇಲೆ ಬೀಳುತ್ತಿದ್ದರಿಂದ ಕೆಲ ಮನೆಗಳು ಸೇರಿದಂತೆ ಇಡೀ ಗುಡ್ಡವೇ ಅಪಾಯದಂಚಿಗೆ ಸಿಲುಕಿತ್ತು. ಈಗಲೂ ಉಳುವೆ, ಆನೆಗುಂದ ಪ್ರದೇಶಗಳಲ್ಲಿ ಗುಡ್ಡಕುಸಿತ ಮುಂದುವರೆದಿದೆ.
ಕಳೆದ ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಗೆ ನೆಮ್ಮಾರು ಸಾಲ್ಮರ ಬಳಿ ಬೃಹತ್ ಗುಡ್ಡ ಕುಸಿದು ರಸ್ತೆಯ ಮೇಲೆಯೇ ಜಾರುತ್ತಿದೆ. ಕೆಲದಿನಗಳ ಹಿಂದೆ ರಾತ್ರಿ ಗುಡ್ಡ ಜಾರಿ ಮಂಗಳೂರು ಶೃಂಗೇರಿ ಸಂಪರ್ಕ ಕಡಿತಗೊಂಡಿತ್ತು. ಮಳೆ ನಿಂತರೂ, ಸುರಿಯುತ್ತಿದ್ದರೂ ಗುಡ್ಡ ಕುಸಿತ, ಭೂಕುಸಿತ ಮಾತ್ರ ನಿರಂತರವಾಗಿದೆ. ಪದೇ ಪದೇ ಗುಡ್ಡ ಕುಸಿಯುತ್ತಿದ್ದರಿಂದ ಮಂಗಳೂರು ಶೃಂಗೇರಿ ಮಾರ್ಗದಲ್ಲಿ ನಾಲ್ಕೈದು ದಿನಗಳ ಕಾಲ ರಾತ್ರಿಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೀಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯಲಾರಂಬಿಸಿ ಅಪಾಯದ ಗಂಟೆ ಬಾರಿಸುತ್ತಿದೆ.
ಉಳುವೆ, ಆನೆಗುಂದ, ನೇರಳಕೊಡಿಗೆ, ಸಾಲ್ಮರ ತನಿಕೋಡುಗಲು ಅಪಾಯಕಾರಿ ವಲಯಗಳಾಗಿದ್ದು, ಪದೇ ಪದೇ ಭೂಮಿ ಕುಸಿತ ಸಂಭವಿಸುತ್ತಿವೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಈಗಾಗಲೇ ಉತ್ತರ ಕನ್ನಡ, ಕೊಡಗು ಇತರೆ ಪ್ರದೇಶಗಳಲ್ಲಿ ಉಂಟಾದ ಅನಾಹುತಗಳು ಈ ಪ್ರದೇಶಗಳಲ್ಲೂ ಸಂಭವಿಸುವುದರಲ್ಲಿ ಸಂಶಯವಿಲ್ಲ. ಅವ್ಯಾಹತವಾಗಿ ಮಣ್ಣು ತೆಗೆಯುತ್ತಿರುವುದು, ಅವೈಜ್ಞಾನಿಕ ಕಾಮಗಾರಿಗಳೇ ಗುಡ್ಡಕುಸಿತ, ಭೂಮಿ ಕುಸಿತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ಅವೈಜ್ಞಾನಿಕ ಕಾಮಗಾರಿ ಬಿಟ್ಟು ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಹಿಡಿದು ಕೊಡಗು, ಉತ್ತರ ಕನ್ನಡಗಳಲ್ಲಿ ಜಿಲ್ಲೆಗಳಲ್ಲಿ ನಡೆದ ಅವಗಡಗಳು ಎಲ್ಲಿಯೂ ಪುನರಾವರ್ತನೆ ಗೊಳ್ಳದಂತೆ ಜನರ ಸುರಕ್ಷತೆ ದೃಷ್ಠಿಯಿಂದ ಮುಂಜಾಗ್ರತೆ ಕ್ರಮ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಮೇಲಿದೆ.
ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ಮಂಗಳೂರು ಶೃಂಗೇರಿ ಸಂಪರ್ಕ ಸಾಲ್ಮರ ಸಮೀಪ ಗುಡ್ಡ ಕುಸಿಯುವ ಹಂತ ದಲ್ಲಿರುವುದು, ಸಮೀಪದಲ್ಲಿ ತುಂಗಾ ನದಿ ಹರಿಯುತ್ತಿರುವುದು.
ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಮಂಗಳೂರು ಶೃಂಗೇರಿ ಸಂಪರ್ಕ ಸಾಲ್ಮರ ಬಳಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿರುವುದು.