ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ಕೆರೆ ಅಚ್ಚುಕಟ್ಟು ಭಾಗದಲ್ಲಿ ನಡೆಯುತ್ತಿರುವ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆಗೆ ಶಾಸಕ ಕೆ.ಎಂ.ಉದಯ್ ವೀಕ್ಷಣೆ ಮಾಡಿದರು.ಮದ್ದೂರು ಕೆರೆಯಿಂದ 22 ಕಿ.ಮೀ. ಉದ್ದದ ಸುಮಾರು 13 ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಮೇರೆಗೆ ಬಿಡುಗಡೆಯಾದ 90 ಕೋಟಿ ರು. ಅನುದಾನದ ಯೋಜನೆಗೆ ಕಳೆದ ಜೂನ್ ತಿಂಗಳಲ್ಲಿ ಪೂಜೆ ನೆರವೇರಿಸಲಾಗಿತ್ತು.
ಪಟ್ಟಣ ಸೇರಿದಂತೆ ಎಚ್.ಕೆ.ವಿ. ನಗರ, ಚನ್ನಸಂದ್ರ, ನಗರಕೆರೆ, ಸೋಂಪುರ, ಉಪ್ಪಾರದೊಡ್ಡಿ, ಮಾಲಗಾರನಹಳ್ಳಿ ಹಾಗೂ ಅಜ್ಜಹಳ್ಳಿ ಮಾರ್ಗವಾಗಿ ಹಾದುಹೋಗಿರುವ 22 ಕಿ.ಮೀ ಉದ್ದದ ನಾಲೆಯನ್ನು ಆಧುನೀಕರಣ ಮತ್ತು ಎರಡು ಬದಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿತ್ತು.ಶೀಘ್ರ ಕಾಮಗಾರಿ ಮುಗಿಸಲು ತಾಕೀತು:
ಕಾಮಗಾರಿ ವೀಕ್ಷಿಸಿದ ಬಳಿಕ ಶಾಸಕ ಕೆ.ಎಂ.ಉದಯ್ ಮಾತನಾಡಿ, ಕಾಮಗಾರಿಗೆ ಒಂದು ವರ್ಷ ಆರು ತಿಂಗಳು ಕಾಲಾವಕಾಶ ನಿಗಧಿಯಾಗಿತ್ತಾದರೂ ರೈತರ ಹಿತದೃಷ್ಟಿಯಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿರುವುದಾಗಿ ಹೇಳಿದರು.ಮುಂದಿನ ಆರು ತಿಂಗಳಲ್ಲಿ ಆಧುನೀಕರಣ ಕಾಮಗಾರಿ ಮುಕ್ತಾಗೊಳಿಸಲೇಬೇಕೆಂಬ ಕುರಿತು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಗುಣಮಟ್ಟದ ಕಾಮಗಾರಿ ಸಂಬಂಧ ನಿರಂತರವಾಗಿ ಭೇಟಿ ನೀಡುವ ಕುರಿತು ವಿವರಿಸಿದರು.
180 ಸಣ್ಣಪುಟ್ಟ ಕಾಮಗಾರಿಗಳು ಸೇರಿದಂತೆ 22 ಸಣ್ಣ ಸೇತುವೆಗಳು, 17 ಪ್ರಮುಖ ಸೇತುವೆಗಳು, ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿ ಕವರ್‌ಡಕ್ ಸೇರಿದಂತೆ ಎರಡು ಬದಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಗ್ರಾಮೀಣ ಭಾಗದಲ್ಲಿ ಸೇವಾ ರಸ್ತೆಯೊಡನೆ ಬಂಡಿಜಾಡು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿರುವುದಾಗಿ ವಿವರಿಸಿದರು.ಪ್ರಮುಖ ಸ್ಥಳಗಳು ಸೇರಿದಂತೆ ಪುರಸಭೆ ಮತ್ತು ಹಳ್ಳಿಗಳಲ್ಲಿ ಕಾಲುವೆ ಬದಿ ಅಗತ್ಯವಿರುವೆಡೆ ಸೋಪಾನಕಟ್ಟೆ, ಜಾನುವಾರುಗಳಿಗೆ ನೀರು ಕುಡಿಸಲು ವ್ಯವಸ್ಥೆ ಸಂಬಂಧ ಕಾಲುವೆಗೆ ಬಂದು ಹೋಗಲು ಅಗತ್ಯ ಜಾಗ ಮೀಸಲಿರಿಸಿರುವುದಾಗಿ ಹೇಳಿದರು.
ಪ್ರಸಕ್ತ ಸಾಲಿನ ಮುಂಗಾರು ಬೆಳೆ ಹಾಕಲು ರೈತರಿಗೆ ತೊಡಕುಂಟಾಗಿದ್ದು, ಆರಂಭವಾಗಿರುವ ಕಾಮಗಾರಿ ಶಾಶ್ವತವಾಗಿ ನೆರವಾಗುವ ಸಂಬಂಧ ಒಂದು ಬೆಳೆಯನ್ನು ಅನಿವಾರ್ಯವಾಗಿ ಕೈಬಿಡಬೇಕಿದ್ದು, ಈ ಕಾಮಗಾರಿಯಿಂದ ನಾಲೆ ಆರಂಭದಿಂದ ಅಂತ್ಯದವರೆವಿಗೂ ಬರುವ ಸಾರ್ವಜನಿಕರು ರೈತರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮುಖ್ಯ ಗುತ್ತಿಗೆದಾರರಾದ ಎಂ.ಶ್ರೀನಿವಾಸ್, ಕೆ.ವೀರೇಶ್, ಎಂ.ಬಾಬು, ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು, ಮಾಜಿ ಸದಸ್ಯ ಮರಿದೇವರು, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ, ಮುಖಂಡರಾದ ನಿತಿನ್, ಎಂ.ಎನ್.ಶರತ್‌ಚಂದ್ರ, ಪ್ರಶಾಂತ್, ಎಇಇ ನಾಗರಾಜು ಇತರರಿದ್ದರು.