ಶಿರಾಡಿ ಘಾಟ್ ಕೆಲವೆಡೆ ಗುಡ್ಡ ಕುಸಿತ; ಸಂಚಾರದಲ್ಲಿ ವ್ಯತ್ಯಯ

KannadaprabhaNewsNetwork | Published : Jul 19, 2024 12:45 AM

ಸಾರಾಂಶ

ಭಾರಿ ಮಳೆಯಿಂದ ಘನ ವಾಹನಗಳನ್ನು ಹೆದ್ದಾರಿಯಲ್ಲೇ ಸಂಚಾರಕ್ಕೆ ಅನುವು ಮಾಡಿದ್ದು ಲಘು ವಾಹನಗಳನ್ನು ಕಾಡಮನೆ ಎಸ್ಟೇಟ್ ಮೂಲಕ ಹಾದು ಹೋಗುವಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ೭೫ ರ ಬೆಂಗಳೂರು- ಮಂಗಳೂರು ನಡುವಣ ಶಿರಾಡಿ ಘಾಟ್ ಪರಿಸರದ ಕೆಲವೆಡೆ ಗುಡ್ಡೆ ಕುಸಿತ ಉಂಟಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿರುವ ಘಟನೆ ಗುರುವಾರವೂ ನಡೆದಿದೆ. ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಎಂಬಲ್ಲಿ ಬುಧವಾರದಂದು ಭೂ ಕುಸಿತ ಆರಂಭವಾಗಿದ್ದು ಅದೇ ತಾಲೂಕಿನ ದೋಣಿಗಲ್ ಎಂಬಲ್ಲಿ ಬುಧವಾರ ರಾತ್ರಿ ಭೂ ಕುಸಿತಕ್ಕೆ ಓಮ್ನಿ ಕಾರೊಂದು ಸಿಲುಕಿದ ಘಟನೆ ನಡೆದಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಗುಡ್ಡ ಕಡಿಯಾಲಿಗದೆ. ಇದರಿಂದಾಗಿ ಸತತ ಮಳೆಗೆ ಸಿಲುಕಿ ಗುಡ್ಡದಿಂದ ಮಣ್ಣು ಜರಿತದಂತಹ ಘಟನೆಗಳು ನಡೆಯುತ್ತಿದೆ. ಅಪಾಯದ ಮಟ್ಟವನ್ನು ಅವಲೋಕಿಸಿದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಲಘು ವಾಹನಗಳಿಗೆ ಬದಲಿ ಮಾರ್ಗ ತೋರಿಸಲಾಗಿದೆ. ಭಾರಿ ಮಳೆಯಿಂದ ಘನ ವಾಹನಗಳನ್ನು ಹೆದ್ದಾರಿಯಲ್ಲೇ ಸಂಚಾರಕ್ಕೆ ಅನುವು ಮಾಡಿದ್ದು ಲಘು ವಾಹನಗಳನ್ನು ಕಾಡಮನೆ ಎಸ್ಟೇಟ್ ಮೂಲಕ ಹಾದು ಹೋಗುವಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ.

ಸಕಲೇಶಪುರ ತಾಲೂಕು ವ್ಯಾಪ್ತಿಯ ಮಾರನಹಳ್ಳಿ ಪೋಲಿಸರು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಘಾಟಿಯ ಉದ್ದಕ್ಕೂ ತಡೆ ಹಿಡಿಯಲ್ಪಟ್ಟ ವಾಹನಗಳನ್ನು ಸುರಕ್ಷತೆಯ ಖಾತ್ರಿಯಲ್ಲಿ ಕೆಲ ಸಮಯದ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಹೆದ್ದಾರಿಯಲ್ಲಿ ಅನಗತ್ಯ ವಾಹನ ದಟ್ಟನೆಯನ್ನು ತಪ್ಪಿಸುವ ಸಲುವಾಗಿ ಮಂಗಳೂರು- ಬೆಂಗಳೂರು ವಾಹನ ಸಂಚಾರವನ್ನು ಮಾಣಿಯಲ್ಲೇ ತಡೆ ಹಿಡಿದು ಪುತ್ತೂರು ಮೈಸೂರು ಮಾರ್ಗವಾಗಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಮಾಡಲಾಗಿದೆ. ಈ ಮಧ್ಯೆ ಶಿರಾಡಿ ಘಾಟ ಪರಿಸರದ ಹೆದ್ದಾರಿ ಪಾರ್ಶ್ವದ ಬೆಟ್ಟ ಗುಡ್ಡಗಳಲ್ಲಿ ಸತತ ಮಳೆಯಿಂದಾಗಿ ಜರಿತ ಕಂಡು ಬಂದಿದ್ದು, ಘಾಟಿಯಲ್ಲಿನ ಬೆಟ್ಟ ಗುಡ್ಡಗಳಿಂದ ಬಂಡೆ ಕಲ್ಲುಗಳು ಮಳೆಯ ಕಾರಣ ಕುಸಿತಗೊಳ್ಳುವ ಅಪಾಯದ ಭೀತಿ ಮೂಡಿದೆ.

Share this article