ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಕನ್ನಡ ಹಬ್ಬ, ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ನಮ್ಮ ಭಾಷೆ, ಸಂಸ್ಕೃತಿ, ಸೌಹಾರ್ದದ ಮಹೋತ್ಸವವಾಗಿದೆ. ಕನ್ನಡಿಗರ ಏಕತೆ, ಗೌರವ ಮತ್ತು ಅಸ್ತಿತ್ವದ ಪ್ರತೀಕವಾಗಿದೆ. ನಾವೆಲ್ಲರೂ ಕನ್ನಡಿಗರು ಎಂಬ ಆತ್ಮಗೌರವದ ಭಾವನೆಯೊಂದಿಗೆ ಕೈಜೋಡಿಸಿದಾಗ ಮಾತ್ರ ನಮ್ಮ ನಾಡು ನಿಜವಾದ ಅಭಿವೃದ್ಧಿ ದಾರಿಯಲ್ಲಿ ಸಾಗುತ್ತದೆ ಎಂದರು.ಕನ್ನಡ ಕೇವಲ ಮಾತಿನ ಸಾಧನವಾಗಿರದೆ, ಅದು ನಮ್ಮ ಮನಸ್ಸಿನ ಶಕ್ತಿ, ನಮ್ಮ ಸಂಸ್ಕೃತಿಯ ಆತ್ಮ. ಇಂದಿನ ಪೀಳಿಗೆಯು ಕನ್ನಡದ ಗೌರವ ಕಾಪಾಡಿ, ತಂತ್ರಜ್ಞಾನ, ಶಿಕ್ಷಣ, ಮತ್ತು ಸೇವಾ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಭಾಷೆ-ನಮ್ಮ ಹೆಮ್ಮೆ ಎಂಬ ಧ್ಯೇಯದೊಂದಿಗೆ ಪ್ರಚಾರ, ಸಂರಕ್ಷಣೆ, ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು ಎಂದರು.
ಕನ್ನಡ ಹಬ್ಬ ಕುರಿತು ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಸಾಹಿತ್ಯ, ಸಾಹಿತ್ಯದ ವಿಚಾರಗಳನ್ನು ಓದುವುದರಿಂದ, ಬಳಸುವುದರಿಂದ ಭಾಷೆ ಬೆಳವಣಿಗೆ ಸಾಧಿಸುತ್ತದೆ. ಭಾಷೆಗೆ ಮಡಿವಂತಿಕೆ ಇರಬಾರದು. ಓದುವುದನ್ನು ರೋಮಾಂಚಕ ಹವ್ಯಾಸವೆನಿಸುವ ಶಕ್ತಿ ಭಾಷೆಗಿರಬೇಕು. ನಮ್ಮ ಭಾಷೆಯ ಅತ್ಯುನ್ನತ ಕೃತಿಗಳು ಬೇರೆ ಬೇರೆ ಭಾಷೆಗಳು ಅನುವಾದಗೊಳ್ಳಬೇಕು. ಆ ಭಾಷೆಗಳಲ್ಲಿರುವ ಮಹತ್ವದ ವಿಚಾರಗಳು ಕನ್ನಡಕ್ಕೆ ಅನುವಾದವಾಗಬೇಕು ಎಂದು ನುಡಿದರು.
ಪತ್ರಕರ್ತೆ ಸಬಾ ಹಕೀಮ್ ಮಾತನಾಡಿ, ಮಂಡ್ಯದವರು ರಾಜಕೀಯ ಪ್ರಜ್ಞಾವಂತರಿದ್ದಾರೆ. ಅತಿ ಹೆಚ್ಚು ಕನ್ನಡ ಮಾತನಾಡುವವರೂ ಇದೇ ನೆಲದಲ್ಲಿದ್ದಾರೆ. ಈ ಮಣ್ಣಿನ ಜನರು ಕನ್ನಡ ಮತ್ತು ಕಾವೇರಿ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ಇಲ್ಲಿನ೦ ಸಾಹಿತ್ಯ, ಸಂಪ್ರದಾಯ, ಆಚಾರ-ವಿಚಾರಗಳೆಲ್ಲವೂ ಸಂಪದ್ಭರಿತವಾಗಿದೆ. ಇಲ್ಲಿನ ಕನ್ನಡ ಪ್ರೇಮ ರಾಜ್ಯಕ್ಕೆ ವಿಸ್ತಾರಗೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶರಣಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ನರರೋಗ ತಜ್ಞ ಡಾ.ಸೂರ್ಯನಾರಾಯಣ ಶರ್ಮ, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಪತ್ರಕರ್ತೆ ಸಬಾ ಹಕೀಂ, ವೈದ್ಯ ಡಾ.ಚಂದ್ರಶೇಖರ್ ಅವರಿಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ ನೀಡಲಾಯಿತು.