ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !

KannadaprabhaNewsNetwork |  
Published : Nov 30, 2026, 04:15 AM IST
ಅರಿವು ಕೇಂದ್ರಗಳ ಸಮರ್ಪಕ ಬಳಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಾರ್ವಜನಿಕರ ಆಗ್ರಹ | Kannada Prabha

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪುಸ್ತಕ ಓದುವ ಆಸಕ್ತಿ ಇದ್ದರೂ, ಸಮರ್ಪಕ ಗ್ರಂಥಾಲಯ ಸೌಲಭ್ಯಗಳ ಕೊರತೆ ಅವರ ಓದುವ ಹವ್ಯಾಸಕ್ಕೆ ಅಡ್ಡಿಯಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪುಸ್ತಕ ಓದುವ ಆಸಕ್ತಿ ಇದ್ದರೂ, ಸಮರ್ಪಕ ಗ್ರಂಥಾಲಯ ಸೌಲಭ್ಯಗಳ ಕೊರತೆ ಅವರ ಓದುವ ಹವ್ಯಾಸಕ್ಕೆ ಅಡ್ಡಿಯಾಗಿದೆ. ಅಗತ್ಯ ಪುಸ್ತಕಗಳು, ಮೂಲಸೌಕರ್ಯ ಮತ್ತು ಓದಿಗೆ ಪೂರಕ ವಾತಾವರಣ ಇಲ್ಲದ ಪರಿಣಾಮ ಮೊಬೈಲ್‌ಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮೀಣ ಗ್ರಂಥಾಲಯಗಳ ಪುನಶ್ಚೇತನಕ್ಕೆ ಒತ್ತಾಯ ಕೇಳಿಬರುತ್ತಿದೆ.

ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ, ಕುಲಹಳ್ಳಿ, ನಾಲಗಿ, ಜಗದಾಳ, ಚಿಮ್ಮಡ ಸೇರಿ ಹಲವು ಗ್ರಾಮಗಳ ಗ್ರಂಥಾಲಯಗಳು ಕೇವಲ ಎರಡು-ಮೂರು ದಿನಪತ್ರಿಕೆಗಳಿಗೆ ಸೀಮಿತವಾಗಿವೆ. ಯುವಜನರಿಗೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಉದ್ಯೋಗ ಮಾಹಿತಿ, ಶೈಕ್ಷಣಿಕ ನಿಯತಕಾಲಿಕೆಗಳು ಹಾಗೂ ಜ್ಞಾನವರ್ಧಕ ಪುಸ್ತಕಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನೊಂದೆಡೆ ಯಲ್ಲಟ್ಟಿ, ಬಂಡಿಗಣಿ, ಹೊಸೂರು ಸೇರಿ ಹಲವು ಗ್ರಾಮಗಳಲ್ಲಿ ಗ್ರಂಥಾಲಯಗಳೇ ಇಲ್ಲದಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹಿನ್ನಡೆಯಾಗಿದೆ.

ಇರುವ ಗ್ರಂಥಾಲಯಗಳಲ್ಲಿಯೂ ಸುಸಜ್ಜಿತ ಕಟ್ಟಡ, ಆಸನ ವ್ಯವಸ್ಥೆ, ಸಮರ್ಪಕ ಬೆಳಕು, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಮೂಲಸೌಲಭ್ಯಗಳ ಕೊರತೆಯಿದೆ. ಹಳೆಯ ಪುಸ್ತಕಗಳೇ ಹೆಚ್ಚಾಗಿದ್ದು, ಕಾಲಕ್ಕೆ ತಕ್ಕಂತೆ ಹೊಸ ಪುಸ್ತಕಗಳ ಸೇರ್ಪಡೆಯಾಗುತ್ತಿಲ್ಲ. ಕೆಲವು ಕಡೆ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಕೊರತೆಯಿಂದ ಗ್ರಂಥಾಲಯಗಳ ಕಾರ್ಯನಿರ್ವಹಣೆಯೂ ಸಮರ್ಪಕವಾಗಿಲ್ಲ.

ಸ್ಮಾರ್ಟಫೋನ್‌, ಸಾಮಾಜಿಕ ಜಾಲತಾಣ ಹಾಗೂ ಮನರಂಜನಾ ವಿಡಿಯೋಗಳ ಆಕರ್ಷಣೆ ನಡುವೆ ಯುವಜನರಲ್ಲಿ ಓದುವ ಹವ್ಯಾಸ ಉಳಿಸಿ ಬೆಳೆಸುವುದು ಸವಾಲಾಗಿದೆ. ಆದರೆ ಸೂಕ್ತ ಪುಸ್ತಕಗಳು ಮತ್ತು ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸಿದರೆ ಯುವಕರು ಗ್ರಂಥಾಲಯಗಳತ್ತ ಮರಳುವುದರಲ್ಲಿ ಸಂಶಯವಿಲ್ಲ.

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳನ್ನಾಗಿ ಪರಿವರ್ತಿಸಿ ಡಿಜಿಟಲ್ ಕಲಿಕಾ ಸಂಪನ್ಮೂಲ, ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವ ಆಶಯ ಹೊಂದಿದೆ. ಈ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ. ಪುಸ್ತಕ ಜೋಳಿಗೆ, ದಾನಿಗಳ ಸಹಕಾರ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕವೂ ಗ್ರಂಥಾಲಯಗಳನ್ನು ಸಮೃದ್ಧಗೊಳಿಸುವಲ್ಲಿ ವಿಫಲವಾಗಿವೆ.

ಯುವಜನರ ಜ್ಞಾನಾರ್ಜನೆ ಮತ್ತು ಭವಿಷ್ಯದ ದೃಷ್ಟಿಯಿಂದ ಪ್ರತಿ ಗ್ರಾಮದಲ್ಲಿಯೂ ಗ್ರಂಥಾಲಯಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಅಗತ್ಯ ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹಣದ ಕೊರತೆ?:ಗ್ರಂಥಾಲಯಗಳಿಗೆ ನಿಯಮಿತವಾಗಿ ದಿನಪತ್ರಿಕೆಗಳನ್ನು ಸರಬರಾಜು ಮಾಡುತ್ತಿದ್ದರೂ, ಹಲವು ತಿಂಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯಿತಿಗಳುಹಣದ ಕೊರತೆಯ ನೆಪ ಹೇಳುತ್ತಿವೆ. ಬಾಕಿ ಬಿಲ್ ಪಾವತಿಸಲು ಸಾಧ್ಯವಾಗದ ಹಿನ್ನಲೆ ನಿಯತಕಾಲಿಕೆ ಹಾಗೂ ದಿನಪತ್ರಿಕೆಗಳ ಸರಬರಾಜು ನಿಲ್ಲಿಸುವಂತೆ ಸೂಚಿಸಿರುವುದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ
ವಾಯುಪಡೆ ನೇಮಕಾತಿ ಪರೀಕ್ಷೆಯಲ್ಲಿ ವೈಶಾಲಿ ರಾಜ್ಯಕ್ಕೆ ಫಸ್ಟ್