ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವೇಶ್ವರಯ್ಯ ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಏರಿ ಮೇಲಿನಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದ ಬಳಿ ರೈತರು ಪ್ರತಿಭಟನೆ ನಡೆಸಿದರು.ತಾಲೂಕಿನ ದೊಡ್ಡಗರುಡನಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಾಲೆಯ ಕೊಪ್ಪ ವಿಭಾಗಕ್ಕೆ ಹರಿಯುವ ನಾಲೆ ಬಳಿ ಸೇರಿದ ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಹೂಳು ತುಂಬಿರುವುದರಿಂದ ನಾಲೆಯಲ್ಲಿ ಹರಿಯುತ್ತಿರುವ ನೀರು ಏರಿ ಮೇಲೆ ಹರಿದು ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ರೈತರ ಬೆಳೆ ನಾಶವಾಗುವುದರ ಜೊತೆಗೆ ಹೊಲ-ಗದ್ದೆಗಳಿಗೆ ತೆರಳಲು ಕಷ್ಟಸಾಧ್ಯವಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರ ವಿದ್ಯಾಧರ್ ಮತ್ತು ನೀರು ಗಂಟಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲಾ ಏರಿಮೇಲೆ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದ ಕಾಲುವೆ ಕೋಡಿ ರಸ್ತೆ ಹಾಳಾಗುತ್ತಿದೆ. ದೊಡ್ಡಗರುಡನಹಳ್ಳಿ ಬಳಿ ಮಂಡ್ಯ-ನಾಗಮಂಗಲ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದನ್ನು ತಡೆಗಟ್ಟಲು ಮುಂದಾಗಲಿಲ್ಲ ಎಂದು ಕಿಡಿಕಾರಿದರು.
ಹಲವಾರು ವರ್ಷಗಳಿಂದ ನಾಲೆಯಲ್ಲಿ ಹೂಳು ತೆಗೆಯದ ಕಾರಣ ನೀರು ಸರಾಗವಾಗಿ ಕೊನೆ ಭಾಗಕ್ಕೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೊನೆಯ ಭಾಗದ ರೈತರ ಒತ್ತಡ ಹೆಚ್ಚಾದ ಕಾರಣ ಹೂಳು ತೆಗೆಯುವುದನ್ನು ಬಿಟ್ಟು ನಾಲೆಯಲ್ಲಿ ಅಧಿಕ ಪ್ರಮಾಣದ ನೀರು ಹರಿಸುತ್ತಿದ್ದಾರೆ. ಇದರಿಂದ ನಾಲಾ ಏರಿ ಮೇಲೆ ನೀರು ಹರಿದು ರೈತರ ಜಮೀನುಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಇದನ್ನು ಸರಿಪಡಿಸಿ ನಾಲೆಯಲ್ಲಿರುವ ಹೂಳು ತೆಗೆಸಬೇಕು. ಕೊನೆಯ ಭಾಗದ ರೈತರಿಗೆ ನೀರನ್ನು ಕೊಡುವುದರ ಜೊತೆಗೆ ನಾಲಾ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗದಂತೆ ಎಚ್ಚರ ವಹಿಸಬೇಕು. ಇಲ್ಲದ್ದಿದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಪಟೇಲ್ ಆನಂದ್, ಚನ್ನಕೇಶವ, ಮರೀಗೌಡ, ಶಾಮಿಯಾನ ಆನಂದ್, ಗ್ರಾ.ಪಂ. ಸದಸ್ಯಕುಮಾರ್, ಕೆಂಪೇಗೌಡ, ರುದ್ರೇಶ, ಪುಟ್ಟಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.