ಈಡೇರದ ಕಳೆದ ವರ್ಷದ ಬಜೆಟ್ ಘೋಷಣೆಗಳು

KannadaprabhaNewsNetwork | Published : Mar 7, 2025 12:47 AM

ಸಾರಾಂಶ

ಎತ್ತಿನ ಹೊಳೆ ಯೋಜನೆಗೆ ಈ ಭಾರಿಯಾದರೂ ವೇಗ ಪಡೆದು ಜಿಲ್ಲೆಯ ಜನತೆಗೆ ಕುಡಿಯುವ ನೀರು ಪೂರೈಸಲಿ, ದಶಕಗಳ ಬೇಡಿಕೆಯಾದ ಹಣ್ಣು-ತರಕಾರಿ ಶೀತಲ ಗೃಹಗಳ ನಿರ್ಮಾಣ, ವೈನ್ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಸ್ತುತ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ. 7ರ ಶುಕ್ರವಾರದಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಜಿಲ್ಲೆಯ ಜನರು ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಪ್ರತಿ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಘೋಷಣೆಯಾದ ಯೋಜನೆಗಳೆಲ್ಲವೂ ಅನುಷ್ಠಾನವಾಗಿವೆಯೇ ಎಂದು ಹಳೆಯ ಬಜೆಟ್‌ಗಳತ್ತ ನೋಡಿದರೆ ನಿರಾಸೆ ಎದ್ದು ಕಾಣುತ್ತದೆ. ಅದರಂತೆ ಕಳೆದ ವರ್ಷದ ಬಜೆಟ್ ನಲ್ಲಿ ಘೋಷಣೆಯಾದ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಹಣ. ಬಯೋ ಸಿಎಸ್‌.ಜಿ, ರೈಲ್ವೆ ಕೆಳ ನೇತುವೆ. ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ ಆರಂಭಿಸುವುದಾಗಿ ತಿಳಿಸಿದ್ದರು.

2023ರ ಬಜೆಟ್ ನಲ್ಲಿ ಘೋಷಣೆಯಾದ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ರೂ 75 ಕೋಟಿ ಹಣ ಮೀಸಲಿಟ್ಟಿತು. ಇದಕ್ಕಾಗಿ ಹನುಮಂತಪುರ ಗ್ರಾಮದ ಬಳಿ ಜಾಗ ಗುರುತಿಸಲಾಯಿತು. ಆ ಜಾಗದ ಅಕ್ಕ ಪಕ್ಕದ ರೈತರ ಜಮೀನುಗಳನ್ನು ಖರೀದಿಸಿಸಲಾಯಿತು. ನಂತರ 2024ರ ಬಜೆಟ್ ನಲ್ಲಿ ಮತ್ತೆ ರು. 75 ಕೋಟಿ ಹಣ ಮೀಸಲಿಟ್ಟಿತು. ಆದರೆ ಇನ್ನೂ ಯಾವುದೇ ಕಾರ್ಯಾರಂಭವಾಗಿಲ್ಲ.

ಇನ್ನುಳಿದಂತೆ 2024 ರ ಬಜೆಟ್ ನಲ್ಲಿ ಘೋಷಣೆಯಾದ ಬಯೋ ಸಿಎಸ್‌.ಜಿ, ರೈಲ್ವೆ ಕೆಳ ಸೇತುವೆ. ಸ್ವಯಂ ಚಾಲಿತ ಚಾಲನಾ ಪರೀಕ್ಷಾವಥ ಗಳನ್ನು ಕಾರ್ಯಾರಂಭ ಆಗಿಲ್ಲ.ಬಜೆಟ್‌ ಬಗ್ಗೆ ಜನತೆಯ ನಿರೀಕ್ಷೆಗಳು

ಎತ್ತಿನ ಹೊಳೆ ಯೋಜನೆಗೆ ಈ ಭಾರಿಯಾದರೂ ವೇಗ ಪಡೆದು ಜಿಲ್ಲೆಯ ಜನತೆಗೆ ಕುಡಿಯುವ ನೀರು ಪೂರೈಸಲಿ, ದಶಕಗಳ ಬೇಡಿಕೆಯಾದ ಹಣ್ಣು-ತರಕಾರಿ ಶೀತಲ ಗೃಹಗಳ ನಿರ್ಮಾಣ, ವೈನ್ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಸ್ತುತ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದ್ದು, ಈಗಾಗಲೇ ಘೋಷಣೆಗೊಂಡಿರುವ ನೂತನ ತಾಲೂಕುಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡ ಬೇಕಿದೆ.ಶೀತಲೀಕರಣ ಘಟಕ ಸ್ಥಾಪಿಸಿ

ಜಿಲ್ಲೆಯ ರೈತರು ಹಾಲು, ರೇಷ್ಮೆ, ತರಕಾರಿ, ಹೂವು, ಹಣ್ಣು ಬೆಳೆಯುವುದರಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಹೂವು, ಹಣ್ಣು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ಮಾರುಕಟ್ಟೆ ನಿರ್ಮಿಸ ಬೇಕಿದೆ. ಇಲ್ಲಿ ಹಣ್ಣು, ತರಕಾರಿ, ಹೂವು ಶೇಖರಿಸಿಡುವ ಶೀತಲೀಕರಣ ಘಟಗಗಳ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದರೂ, ಜಿಲ್ಲೆಯಲ್ಲಿ ಒಂದೇ ಒಂದು ವೈನ್ ತಯಾರಿಕಾ ಘಟಕವಿಲ್ಲ. ಹಾಗಾಗಿ ದಲ್ಲಾಳಿಗಳ ಕಾಟ ಎದುರಿಸಲಾಗದೆ ಬಂದ ಬೆಲೆಗೆ ತೋಟದಲ್ಲಿಯೇ ದ್ರಾಕ್ಷಿ ಮಾರುವ ದುಸ್ಥಿತಿ ಎದುರಾಗಿದೆ. ವೈನ್ ತಯಾರಿಕಾ ಘಟಕ ಸ್ಥಾಪಿಸಿ ಸಮಸ್ಯೆ ಪರಿಹಾರಿಸಲು ಹಲವು ದಶಕಗಳಿಂದ ಬೆಳೆಗಾರರಿಂದ ಒತ್ತಾಯ ಕೇಳಿ ಬರುತ್ತಿದ್ದು ಈ ಬಜೆಟ್ ನಲ್ಲಿ ಸಾಕಾರವಾಗುತ್ತಾ ಎಂಬುದನ್ನು ಕಾದು ನೋಡಬೇಕು.

Share this article