ಪಂಚಮಸಾಲಿ 2ಎ ಮೀಸಲಾತಿ ವಿಚಾರ : ಚಳಿಗಾಲದ ಅಧಿವೇಶನದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿ

KannadaprabhaNewsNetwork | Updated : Dec 13 2024, 06:54 AM IST

ಸಾರಾಂಶ

ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಹಾಗೂ ಪಂಚಮಸಾಲಿ 2ಎ ಮೀಸಲಾತಿ ವಿಚಾರ ಗುರುವಾರ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತು. ಲಾಠಿ ಚಾರ್ಜ್‌ಗೆ ಸಮುದಾಯದ ಕ್ಷಮೆಯನ್ನು ಸರ್ಕಾರ ಕೇಳಬೇಕು, ಘಟನೆ ಕುರಿತು ನ್ಯಾಯಾಂಗ ತನಿಖೆಗೆ ನಡೆಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

 ಸುವರ್ಣ ವಿಧಾನಮಂಡಲ : ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಹಾಗೂ ಪಂಚಮಸಾಲಿ 2ಎ ಮೀಸಲಾತಿ ವಿಚಾರ ಗುರುವಾರ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತು. ಲಾಠಿ ಚಾರ್ಜ್‌ಗೆ ಸಮುದಾಯದ ಕ್ಷಮೆಯನ್ನು ಸರ್ಕಾರ ಕೇಳಬೇಕು, ಘಟನೆ ಕುರಿತು ನ್ಯಾಯಾಂಗ ತನಿಖೆಗೆ ನಡೆಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಕ್ಷಮೆ ಕೋರುವುದಿಲ್ಲ ಹಾಗೂ ಲಾಠಿಚಾರ್ಜ್‌ಗೆ ಯಾವುದೇ ರೀತಿಯ ತನಿಖೆ ನಡೆಸುವುದಿಲ್ಲ ಎಂಬ ಪ್ರತಿಪಾದಿಸಿತು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಈ ಪ್ರಕ್ರಿಯೆಗೆ ಸದನದ ಬಹುತೇಕ ಅವಧಿ ಬಲಿಯಾಯಿತು.

ಗುರುವಾರ ಕಲಾಪ ಶುರುವಾಗುತ್ತಿದ್ದಂತೆಯೇ ಉಭಯ ಸದನಗಳ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಲಾಠಿ ಚಾರ್ಜ್‌ ವಿಷಯ ಪ್ರಸ್ತಾಪಿಸಿ ಸರ್ಕಾರ ಕ್ಷಮೆ ಕೋರಬೇಕು ಹಾಗೂ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಜತೆಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಒದಗಿಸಲೂ ಆಗ್ರಹಿಸಿದರು.

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌ ಸದಸ್ಯರು, ‘ಇದು ಬಿಜೆಪಿ ಪ್ರಾಯೋಜಿತ ಹೋರಾಟ. ಆರ್‌ಎಸ್‌ಎಸ್‌ ಕಾರ್ಯಕರ್ತರೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೈಕೋರ್ಟ್‌ಗೆ 2ಎ ಮೀಸಲಾತಿ ನೀಡುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿ ಇಲ್ಲಿ ಪಂಚಮಸಾಲಿ ಸಮುದಾಯದವರನ್ನು ಎತ್ತಿಕಟ್ಟುವ ನಾಟಕ ಆಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಕ್ರಮ ಆಗಬೇಕು- ಅಶೋಕ್‌:

ಮೊದಲಿಗೆ ಶೂನ್ಯ ವೇಳೆಯಲ್ಲಿ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಯಾಚಿಸಬೇಕು. ಜತೆಗೆ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸುವ ಪ್ರಶ್ನೆಯಿಲ್ಲ. ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸುತ್ತಿದ್ದವರನ್ನು ನಿಯಂತ್ರಿಸಲು ಲಾಠಿ ಚಾರ್ಜ್‌ ಮಾಡಲಾಗಿದೆ. ಈ ಬಗ್ಗೆ ತನಿಖೆಯ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಪ್ರಾಯೋಜಿತ ಹೋರಾಟ:

ಬಳಿಕ ಮಾತನಾಡಿದ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್‌, ನಾನು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಇದು ಬಿಜೆಪಿ ಪ್ರಾಯೋಜಿತ ಹೋರಾಟ. ಆರ್‌ಎಸ್‌ಎಸ್‌ ಕಾರ್ಯಕರ್ತರೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೈಕೋರ್ಟ್‌ಗೆ 2ಎ ಮೀಸಲಾತಿ ನೀಡುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿ ಇಲ್ಲಿ ಪಂಚಮಸಾಲಿ ಸಮುದಾಯದವರನ್ನು ಎತ್ತಿಕಟ್ಟುವ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಆರ್‌ಎಸ್‌ಎಸ್‌ ಎಂಬ ಪದವನ್ನು ತೆಗೆಯಬೇಕು. ಈ ರೀತಿ ಮಾತನಾಡಲು ಅವಕಾಶ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ಅರವಿಂದ ಬೆಲ್ಲದ್‌, ‘ಸಮಾಜದಿಂದ ನೀನು ಗೆದ್ದಿದ್ದೀಯ. ನೋಡಿಕೊಂಡು ಮಾತನಾಡು’ ಎಂದರು.

ಮಾತು ಮುಂದುವರೆಸಿದ ವಿಜಯಾನಂದ, ನೀವು ಯಾರೇ ಬಂದರೂ ಮುಂದಿನ ಚುನಾವಣೆಯಲ್ಲೂ ಗೆಲ್ಲುತ್ತೇನೆ. ನೀವು ಸಮುದಾಯಕ್ಕೆ ಮಾಡಿರುವ ಅನ್ಯಾಯ ಹೇಳುತ್ತಿದ್ದೇನೆ. ನಾನು ವೀರಶೈವ ಪಂಚಮಸಾಲಿ ಲಿಂಗಾಯತರ ರಾಷ್ಟ್ರೀಯ ಅಧ್ಯಕ್ಷ. ಲಾಠಿಚಾರ್ಜ್‌ ಆಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ಸುವರ್ಣಸೌಧ ಮುತ್ತಿಗೆಗೆ ಪ್ರಚೋದನೆ ನೀಡಲು ಕಾರಣವಾದವರು ಯಾರು? ಬಸವರಾಜ ಬೊಮ್ಮಾಯಿ ಅವರು 2ಎ ಮೀಸಲಾತಿ ಕೊಡದೆ 2ಡಿ, 2ಸಿ ನೀಡುವುದಾಗಿ ನಾಟಕ ಆಡಿ ಬಳಿಕ ಕೋರ್ಟ್‌ನಲ್ಲಿ 2ಎ ಮೀಸಲಾತಿ ನೀಡಲು ಬರುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದರು. ಇವರಿಗೆ ಹೋರಾಟ ಮಾಡಲು ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ಬಿಜೆಪಿಯಿಂದಲೇ ಪ್ರಮಾಣಪತ್ರ:

ಬಳಿಕ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ನಾಟಕ ಆಡಿತು. ಬಳಿಕ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ ಅಲ್ಪಸಂಖ್ಯಾತರ ಮೀಸಲಾತಿ ತೆಗೆದು 2ಡಿ, 2ಸಿಗೆ ನೀಡುವುದಿಲ್ಲ ಎಂದು ಬಿಜೆಪಿ ಸರ್ಕಾರವೇ ಸ್ಪಷ್ಟಪಡಿಸಿದೆ. ಈ ಕುರಿತು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಪ್ರಮಾಣಪತ್ರ ಪ್ರದರ್ಶಿಸಿದರು.

ಸ್ಪೀಕರ್‌ ವಿರುದ್ಧವೇ ಬಿಜೆಪಿ ಆಕ್ರೋಶ:

ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಒಂದೇ ವಿಷಯದ ಬಗ್ಗೆ ಇಬ್ಬರು ಸಚಿವರಿಗೆ ಮಾತನಾಡಲು ಅವಕಾಶವಿಲ್ಲ ಎಂದು ಕ್ರಿಯಾಲೋಪ ಎತ್ತಿದರು. ಬಿಜೆಪಿ ಸದಸ್ಯರ ಆಕ್ಷೇಪದ ಹೊರತಾಗಿಯೂ ಕೃಷ್ಣಬೈರೇಗೌಡ ಮಾತಿಗೆ ಸ್ಪೀಕರ್‌ ಅವಕಾಶ ಮಾಡಿಕೊಟ್ಟರು. ಹೀಗಾಗಿ ಆಕ್ರೋಶಗೊಂಡ ಬಿಜೆಪಿ ಸದಸ್ಯರು ನಿಯಮಾವಳಿ ಪುಸ್ತಕದ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕೃಷ್ಣ ಬೈರೇಗೌಡ ಮಾತನಾಡಿದ ತಕ್ಷಣ ಸ್ಪೀಕರ್ ಅವರು ಸಭೆಯನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ತಮಗೆ ಅವಕಾಶ ನೀಡದ ಬಗ್ಗೆ ಆಕ್ರೋಶಗೊಂಡಿದ್ದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಕಚೇರಿಗೆ ಹೋಗಿ ಗದ್ದಲ ನಡೆಸಿದರು.

ಬಿಜೆಪಿ ಸದಸ್ಯರ ಸಭಾತ್ಯಾಗ:

ಭೋಜನ ವಿರಾಮದ ಬಳಿಕ ಶುರುವಾದ ಕಲಾಪದಲ್ಲೂ ಬಸನಗೌಡ ಪಾಟೀಲ್ ಯತ್ನಾಳ್‌, ಅರವಿಂದ್‌ ಬೆಲ್ಲದ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಕಾಂಗ್ರೆಸ್‌ನ ಲಕ್ಷ್ಮಣ ಸವದಿ, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌ ಸರ್ಕಾರವನ್ನು ಸಮರ್ಥಿಸಿಕೊಂಡರು. ಈ ವೇಳೆ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಗಿ ಅಂತಿಮವಾಗಿ ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಒತ್ತಾಯವೇ ಅಸಂವಿಧಾನಿಕ- ಸಿಎಂ:

ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತು ವಿಧಾನಪರಿಷತ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗದ 2ಎ ಪ್ರವರ್ಗಕ್ಕೆ ತಮ್ಮನ್ನು ಸೇರಿಸಬೇಕು ಎಂಬ ಪಂಚಮಸಾಲಿ ಸಮುದಾಯದ ಒತ್ತಾಯವೇ ಅಸಂವಿಧಾನಿಕ ಎಂದು ಹೇಳಿದರು. ವಿಧಾನಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಹಣಮಂತ ನಿರಾಣಿ, ಡಾ. ಧನಂಜಯ್‌ ಸರ್ಜಿ ಅವರು, ಪಂಚಮಸಾಲಿ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದರು.ಇದಕ್ಕೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಈ ಹಿಂದೆ ಎರಡು ಮೂರು ಬಾರಿ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯದ ಇತರೆ ಮುಖಂಡರ ಸಭೆ ಕರೆದಿದ್ದೆ. ನೀವು ಹೋರಾಟ ಮಾಡುವುದು ತಪ್ಪು ಎಂದು ನಾನು ಹೇಳಲ್ಲ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ನೀವು ಇಟ್ಟಿರುವ 2ಎ ಮೀಸಲಾತಿ ಒತ್ತಾಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೆ. ಇದು ಕೇವಲ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿಸಲು ಹುಟ್ಟಿಕೊಂಡಿದ್ದ ಹೋರಾಟ ಎಂದು ಹೇಳಿದರು.

ಬಿಜೆಪಿ ಸದಸ್ಯರ ಆಕ್ಷೇಪ:

ಮುರುಗೇಶ್ ನಿರಾಣಿ ಅವರ ಸಚಿವ ಸ್ಥಾನಕ್ಕಾಗಿ ಹುಟ್ಟ ಹೋರಾಟ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, 30 ವರ್ಷದ ಹಿಂದಿನ ಹೋರಾಟ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು.

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ರೀತಿ ದಾರಿ ತಪ್ಪಿಸಿ ನಮ್ಮವರನ್ನೇ ಇಬ್ಭಾಗ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸಿದ್ದರಾಮಯ್ಯ, ಹಾಗಾದರೆ ಹೋರಾಟ ಶುರುವಾಗಿದ್ದು ಯಾವಾಗ ಹೇಳು. 2002ರಲ್ಲೇ ಪ್ರವರ್ಗವಾರು ಆದೇಶ ಆಯಿತಲ್ಲ ಆಗ ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದಾಗ ಕೆಲ ಕಾಲ ಆರೋಪ-ಪ್ರತ್ಯಾರೋಪ ನಡೆಯಿತು. ಬಳಿಕ ಶೂನ್ಯ ವೇಳೆಯ ಅವಧಿ ಮುಗಿದಿದೆ ಎಂದು ಹೇಳಿ ಚರ್ಚೆಗೆ ಸಭಾಪತಿ ಬಸವರಾಜ ಹೊರಟ್ಟಿ ತೆರೆ ಎಳೆದರು. 

ಆರ್‌ಎಸ್ಎಸ್‌ ಪದ ಬಳಕೆಗೆ ಆಕ್ಷೇಪ: ಗದ್ದಲ

ವಿಜಯಾನಂದ ಕಾಶಪ್ಪನವರ್‌ ಅವರು ಆರ್‌ಎಸ್‌ಎಸ್‌ನವರೇ ಪೊಲೀಸರಿಗೆ ಕಲ್ಲು ಹೊಡೆದಿದ್ದಾರೆ ಎಂಬ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ಆರ್‌ಎಸ್‌ಎಸ್‌ ಪದ ಬಳಕೆ ಮಾಡಿದ್ದನ್ನು ಕಡತದಿಂದ ತೆಗೆಯಬೇಕು ಎಂಬ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಪರಮೇಶ್ವರ್‌, ಆರ್‌ಎಸ್‌ಎಸ್‌ ಎಂಬುದು ಅಸಂಸದೀಯ ಪದ ಎಂದು ಒಪ್ಪಿಕೊಳ್ಳಲಿ ಕಡತದಿಂದ ತೆಗೆಸುತ್ತೇವೆ ಎಂದು ಹೇಳಿದರು. ಈ ವೇಳೆ ಗದ್ದಲ ಉಂಟಾದರೂ ಸ್ಪೀಕರ್‌ ಪದವನ್ನು ಕಡತದಿಂದ ತೆಗೆಯಲಿಲ್ಲ.

Share this article