ಮೂರು ದಿನಗಳ ಹಬ್ಬಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ । ಪಟಾಕಿ ಮಳಿಗೆಗಳಿಗೆ ದಾಂಗುಡಿ
ಮೂರು ದಿನಗಳ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ಆಚರಣೆಗೆ ಜಿಲ್ಲೆಯಾದ್ಯಂತ ಜನರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ ಪಟಾಕಿ ವ್ಯಾಪಾರ ರಂಗೇರಿದೆ. ಪಟಾಕಿ ಮಳಿಗೆಗಳತ್ತ ಜನರು ಹೆಜ್ಜೆ ಹಾಕುತ್ತಿದ್ದಾರೆ.
ಗುರುವಾರದಿಂದ ದೀಪಾವಳಿ ಪ್ರಾರಂಭವಾಗಲಿದ್ದು, ಇದಕ್ಕಾಗಿ ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳತ್ತ ಮುಖಮಾಡಿ ಸಾಮಾಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಈ ಸಂಭ್ರಮದ ದೀಪಾವಳಿ ಆಚರಣೆಗೆ ಮಳೆರಾಯನು ವಿರಾಮ ನೀಡಿರುವುದರಿಂದ ಜನರು ಅದರಲ್ಲೂ ಮಕ್ಕಳು ಬಹಳ ಖುಷಿಯಿಂದ ತಮ್ಮ ಪೋಷಕರ ಜೊತೆ ಪಟಾಕಿ ಅಂಗಡಿಗಳಿಗೆ ಬಂದು ಪಟಾಕಿಗಳನ್ನು ಖರೀದಿಸುತ್ತಿದ್ದರು. ದೀಪಾವಳಿಯ ಸಂದರ್ಭದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.ಪಟಾಕಿ ವ್ಯಾಪಾರ ಬಲು ಜೋರು:
ಗುರುವಾರ ಬೆಳಿಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಮೆಗಾ ಕಾಂಪ್ಲೆಕ್ಸ್ ಬಳಿ ತೆರೆದಿರುವ ಪಟಾಕಿ ಅಂಗಡಿಗಳಿಗೆ ಮುಗಿಬಿದ್ದರು. ಜಿಲ್ಲಾಡಳಿತ ಈಗಾಗಲೇ ಹಸಿರು ಪಟಾಕಿಗಳನ್ನು ಹೆಚ್ಚು ಉಪಯೋಗಿಸುವಂತೆ ತಿಳಿಸಿದೆ. ರಾಜಸ್ತಾನಿ ಭಾಂದವರಿಗೆ, ಚಿನ್ನ ಮತ್ತು ಬೆಳ್ಳಿ ವ್ಯಾಪಾರಗಾರರಿಗೆ ದೀಪಾವಳಿ ದೊಡ್ಡ ಹಬ್ಬ. ಅದಕ್ಕಾಗಿ ತಮ್ಮ ಅಂಗಡಿ ಮಳಿಗೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಪೂಜೆ ನೆರವೇರಿಸಿ, ತಮ್ಮ ಗ್ರಾಹಕರಿಗೆ ಸಿಹಿ ವಿತರಿಸುತ್ತಿದ್ದರು. ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ದೀಪಾವಳಿ ಜಾತ್ರೆ ಮತ್ತು ಮಹಾ ರಥೋತ್ಸವ ನಡೆಯುತ್ತಿರುವುದರಿಂದ ಭಕ್ತರು ತಂಡೋಪತಂಡವಾಗಿ ಮಹದೇಶ್ವರನ ಬೆಟ್ಟಕ್ಕೆ ತೆರಳುತ್ತಿದ್ದರು.