ಗುತ್ತಲ: ಆನ್‌ಲೈನ್ ಬೆಟ್ಟಿಂಗ್‌ ಹಾಗೂ ಶೋಕಿಗಾಗಿ ಹಣ ಬೇಕಾಗಿದ್ದ ಕಾರಣಕ್ಕೆ ಗುತ್ತಲ ಸುತ್ತಮುತ್ತ ವಿವಿಧ ಗ್ರಾಮಗಳಲ್ಲಿ ಟಗರು ಹಾಗೂ ಆಡುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನು ಗುತ್ತಲ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಡಿವೈಎಸ್ಪಿ ಗಿರಿಮಲ್ಲ ತಲಕಟ್ಟಿ ತಿಳಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಹಾಗೂ ಕಳ್ಳರ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು. ಜನರು ಸಾಧ್ಯವಾದಷ್ಟು ಮನೆಯ ಅಥವಾ ಹೆಚ್ಚಿನ ಸಂಖ್ಯೆಯ ಕುರಿ, ಆಡುಗಳು ಇದ್ದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕೆಂದರು. ಗುತ್ತಲ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಅನೇಕ ದಿನಗಳಿಂದ ಮನೆಗಳ ಮುಂದೆ ಕಟ್ಟಲಾಗುತ್ತಿದ್ದ ಟಗರು ಹಾಗೂ ಆಡುಗಳು ಕಳ್ಳತನವಾಗುತ್ತಿದ್ದವು. ಈ ಬಗ್ಗೆ ಅನೇಕ ದೂರುಗಳ ಬಂದ ಹಿನ್ನೆಲೆಯಲ್ಲಿ ಹಾಗೂ ಜೂನ್ ತಿಂಗಳಿನಲ್ಲಿ ಕನವಳ್ಳಿ ಗ್ರಾಮದ ಆನಂದ ಬಸಪ್ಪ ಹರವಿ ಎಂಬುವರ ಮನೆಯ ಮುಂದೆ ಕಟ್ಟಿದ್ದ ಸುಮಾರು ೫೦ಸಾವಿರ ಮೌಲ್ಯದ ಮೂರು ಟಗರುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಗುತ್ತಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಗುತ್ತಲ ಪೋಲಿಸರು ಸಮೀಪದ ಚೌಡಯ್ಯದಾನಪುರದ ಕ್ರಾಸ್ ಬಳಿ ಸಮೀಪದ ಕೂರಗುಂದ ಗ್ರಾಮದ ಗುಡ್ಡಪ್ಪ ನಾಗರಾಜ ಹರಿಜನ ಹಾಗೂ ಕಿರಣ ಯಂಕಪ್ಪ ವಡ್ಡರ ಎಂಬ ಆರೋಪಿಗಳನ್ನ ಬಂಧಿಸಿ ಸುಮಾರು ೪ ಲಕ್ಷ ಮೌಲ್ಯದ ೧೧ ಟಗರು, ೪ ಆಡು, ೧ ಹೋತು ಹಾಗೂ ೧ ಬೈಕನ್ನು ಜಪ್ತಿ ಮಾಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಡಿವೈಎಸ್ಪಿ ಗಿರಿಮಲ್ಲ ತಲಕಟ್ಟಿ, ಗ್ರಾಮೀಣ ಠಾಣೆ ಸಿಪಿಐ ಸಿದ್ಧಾರೂಢ ಬಡಿಗೇರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪರಶುರಾಮ ಲಮಾಣಿ ನೇತೃತ್ವದಲ್ಲಿ ಪೊಲೀಸ್‌ ತಂಡ ರಚಿಸಿ ಎಸ್.ಎನ್. ಸವದಿ, ಕೆ.ವಾಯ್. ಕರಕಣ್ಣನವರ, ಪೀರು ಲಮಾಣಿ, ಸಿ.ಎಂ. ಕೋರೆಪ್ಪನವರ, ಸುರೇಶ ಕುಂಬಾವತ್, ಶಶಿಕುಮಾರ ಕಾಕೋಳ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ, ಸಿಟಿ ಕರೇಕಲ್ ಅವರುಗಳು ಕಾರ್ಯಾಚರಣೆ ನಡೆಸಿ ಅರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಪ್ರಕರಣವನ್ನು ಪತ್ತೆ ಹಚ್ಚಿದ ಪಿಎಸ್‌ಐ ತಂಡಕ್ಕೆ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಸಿದ್ಧಾರೂಢ ಬಡಿಗೇರ, ಪಿಎಸೈ ಪರಶುರಾಮ ಲಮಾಣಿ, ಪೇದೆಗಳಾದ ರವಿ ಕಲಾಲ, ಮಹಾನಂದ ಪಸಗಿ, ರವಿಯಪ್ಪ, ಗುಡ್ಡಪ್ಪ ಬಳ್ಳಾರಿ, ಸಿ.ಎಂ ಕೋರೆಪ್ಪನವರ ಸೇರಿದಂತೆ ಅನೇಕರಿದ್ದರು.