ವಿಜಯಪುರ: ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ೨೫೦ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು
ವಿಜಯಪುರ: ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ೨೫೦ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ವಿಜಯಪುರ ಹೋಬಳಿ ಕೋರಮಂಗಲ ಗ್ರಾಪಂ ವ್ಯಾಪ್ತಿಯ ದಂಡಿಗಾನಹಳ್ಳಿಯಿಂದ ಚಿಕ್ಕಬಳ್ಳಾಪುರ ಮುಖ್ಯರಸ್ತೆವರೆಗೆ ೭೦ ಲಕ್ಷ, ಚಿಕ್ಕಬಳ್ಳಾಪುರ ಮುಖ್ಯರಸ್ತೆಯಿಂದ ಗೊಡ್ಲುಮುದ್ದೇನಹಳ್ಳಿ ಮೂಲಕ ಪಿ.ರಂಗನಾಥಪುರದ ರಸ್ತೆ ಸುಮಾರು ೬೫ ಲಕ್ಷ ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ. ವಿಧಾನಪರಿಷತ್ ಚುನಾವಣೆಯ ಕಾರಣದಿಂದಾಗಿ ಎಲ್ಲಾ ಕಾಮಗಾರಿಗಳ ಆರಂಭ ಪೂಜೆಯಲ್ಲಿ ನಾನು ಪಾಲ್ಗೊಳ್ಳಲಿಲ್ಲ. ಮುಂದಿನ ಒಂದು ವಾರದಲ್ಲಿ, ಕ್ಷೇತ್ರದಲ್ಲಿ ಎಷ್ಟು ಕಾಮಗಾರಿಗಳು ಮಾಡಿದ್ದೇವೆ. ಏನೇನು ಅಭಿವೃದ್ಧಿ ಕೆಲಸಗಳು ಮಾಡಿದ್ದೇವೆ ಎನ್ನುವ ಕುರಿತು, ದಾಖಲೆಗಳ ಸಮೇತ ಜನತೆಗೆ ತಿಳಿಸಲಿದ್ದೇವೆ. ಸಾರ್ವಜನಿಕರೂ ಕೂಡಾ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿಕೊಡಬೇಕು. ಗ್ರಾಮೀಣ ಭಾಗದ ರಸ್ತೆಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದರು.
ವಿಜಯಪುರ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕೆಎಸ್ಆರ್ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಈಗಾಗಲೇ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಕೊಟ್ಟಿದ್ದೇವೆ. ಅದು ಶೀಘ್ರವಾಗಿ ನೆರವೇರಲಿದೆ. ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಪದವಿ ಕಾಲೇಜು ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಗ್ರಾಮೀಣ ಮಕ್ಕಳು, ಪದವಿಯವರೆಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ನಾನೂ ಕೂಡಾ ಪ್ರಯತ್ನ ಮಾಡುತ್ತಿದ್ದೇನೆ. ಮುಂದಿನ ಬಜೆಟ್ ನಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಎ.ಚಿನ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಕೋರಮಂಗಲ ಗ್ರಾಪಂ ಅಧ್ಯಕ್ಷ ಸಿ.ದೇವರಾಜ್, ಹಾರೋಹಳ್ಳಿ ಗ್ರಾಪಂ ಅಧ್ಯಕ್ಷೆ ಎಸ್.ಮಂಜುಳಮ್ಮ, ತಾಪಂ ಮಾಜಿ ಅಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷ ಪುರಕೃಷ್ಣಪ್ಪ, ವಿಜಯಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಆರ್.ಅಮರನಾಥ್, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ಮಂಡಿಬೆಲೆ ದೇವರಾಜ್, ವೆಂಕಟೇನಹಳ್ಳಿ ವೀರೇಗೌಡ, ಹಾರೋಹಳ್ಳಿ ರಘು, ಮಂಜುನಾಥ್, ಬಿಜ್ಜವಾರ ಶ್ರೀವತ್ಸ, ತಿಮ್ಮಹಳ್ಳಿ ಮನೋಹರ್, ಕೊಮ್ಮಸಂದ್ರ ಸುರೇಶ್, ಚಿಕ್ಕನಳ್ಳಿ ವೆಂಕಟೇಶಪ್ಪ, ಎಸ್.ಶಿವಾನಂದ, ಸೀನಪ್ಪ, ಗೋಣೂರು ವೆಂಕಟಸ್ವಾಮಿ, ಮುರಳಿಮೋಹನ್, ವಿ.ರಾಮಚಂದ್ರಪ್ಪ, ರಂಗನಾಥಪುರ ನಟರಾಜ್, ಭಟ್ರೇನಹಳ್ಳಿ ನಾರಾಯಣಪ್ಪ, ಗ್ಯಾಸ್ ಶ್ರೀನಿವಾಸ್, ಮುದುಗುರ್ಕಿ ನಾರಾಯಣಸ್ವಾಮಿ, ಬಿಜ್ಜವಾರ ಮಹೇಶ್, ಚಂದೇನಹಳ್ಳಿ ಮುನಿಯಪ್ಪ ಇತರರು ಹಾಜರಿದ್ದರು.
(ಫೋಟೋ ಕ್ಯಾಫ್ಷನ್)
ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿ ಗ್ರಾಮದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.