ದೇವನಹಳ್ಳಿ: ತಾಲೂಕಿನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಶೇ.೮೦ರಷ್ಟು ಮೀಸಲಾತಿ ಕಲ್ಪಿಸಬೇಕು ಹಾಗೂ ವಿಮಾನ ನಿಲ್ದಾಣದ ಆವರಣದಲ್ಲಿರುವ ಎಲ್ಲಾ ವಾಣಿಜ್ಯ ವ್ಯವಹಾರಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ, ವ್ಯಾಪಾರ ಮತ್ತು ಉದ್ಯಮ ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಮತ್ತು ದೇವನಹಳ್ಳಿ ತಾಲೂಕಿನ ಯುವ ಘಟಕದ ವತಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರಿಗೆ ಮನವಿ ಹಾಗೂ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಭಾಗಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗವಕಾಶಗಳ ಕುರಿತು ಕನ್ನಡಪರ ಸಂಘಟನೆಗಳು ಕೇಳಿದ ಮಾಹಿತಿಗೆ ಪ್ರತಿಯಾಗಿ ಬಿಐಎಎಲ್ ನೀಡಿರುವ ಮಾಹಿತಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಬಹಳಷ್ಟು ವಿಭಾಗಗಳಲ್ಲಿ ಕನ್ನಡಿಗರು ತೀರ ಕಡಿಮೆ ಇದ್ದಾರೆ. ಕೆಲವು ವಿಭಾಗಗಳಲ್ಲಿ ಕನ್ನಡಿಗರೇ ಇಲ್ಲ, ಉತ್ತರ ಭಾರತೀಯರು, ತಮಿಳರು, ತೆಲುಗು, ಮಲಯಾಳಿಗಳೇ ತುಂಬಿದ್ದಾರೆ. ಸ್ಥಳೀಯ ಕನ್ನಡಿಗರಿಗೆ ನೀಡಿದ ಭರವಸೆಯನ್ನು ಬಿಐಎಎಲ್ ಉಲ್ಲಂಘಿಸಿದೆ. ವಿಮಾನ ನಿಲ್ದಾಣದ ಹೋಟೆಲ್‌ಗಳಲ್ಲಿ ಚಹ ಕಾಫಿ ಅಂಗಡಿಗಳಲ್ಲಿ ಪರಿಚಾರಕರಾಗಿ ಡಿ ದರ್ಜೆ ಭದ್ರತಾ ಸಿಬ್ಬಂದಿಗಳಾಗಿ ದುಡಿಯುತ್ತಿರುವ ಕನ್ನಡಿಗರನ್ನು ತೋರಿಸುತ್ತಾ ಸ್ಥಳೀಯರಿಗೆ ಕೆಲಸ ಕೊಟ್ಟಿದ್ದೇವೆ ಎನ್ನಲಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಎಲ್ಲಾ ವಿಭಾಗಗಳಲ್ಲಿ ಕನ್ನಡಿಗರಿಗೆ ಶೇ.೮೦ರಷ್ಟು ಮೀಸಲಾತಿ ನೀಡಬೇಕೆಂದು ಸ್ಥಳೀಯ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರವೀಣ್ ಶೆಟ್ಟಿ ಬಣ ಹಕ್ಕೋತ್ತಾಯವನ್ನು ಮಂಡಿಸುತ್ತಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಶಿವರಾಜುಗೌಡ, ಜಿಲ್ಲಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ವೇಣು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹರ್ಷಿ ಗೌಡ, ಯುವ ಘಟಕದ ತಾಲೂಕು ಅಧ್ಯಕ್ಷ ನಿತಿನ್ ಬಾಬು, ಉಪಾಧ್ಯಕ್ಷ ಗೋಖರೆ ಸತೀಶ್, ಪರಮೇಶ್ವರ್, ಮಹೇಶ್, ಬಾಬು, ಸಾಗರ್ ಇತರರು ಭಾಗಿಯಾಗಿದ್ದರು.೧೭ ಬದೇವನಹಳ್ಳಿ ಚಿತ್ರಸುದ್ದಿ: ೦೧