ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಬರಿದು: ಎಚ್‌ಡಿಕೆ

KannadaprabhaNewsNetwork |  
Published : Nov 18, 2026, 01:30 AM IST
17ಕೆಎಂಎನ್‌ಡಿ-1ಹಲಗೂರು ಸಮೀಪದ ಗುಂಡಾಪುರ ಗೇಟ್ ಬಳಿಯ ಶ್ರೀ ಬೆಟ್ಟದರಸಮ್ಮ ದೇವಿಯ ನೂತನ ಸ್ವಾಗತ ಕಮಾನಿಗೆ ಕಳಸ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಲೋಕಾರ್ಪಣೆ ನೆರವೇರಿಸಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬದಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ನಿರೀಕ್ಷಿತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹಲಗೂರು

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬದಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ನಿರೀಕ್ಷಿತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಗುಂಡಾಪುರ ಗೇಟ್ ಬಳಿಯ ಶ್ರೀಬೆಟ್ಟದರಸಮ್ಮ ದೇವಿಯ ನೂತನ ಸ್ವಾಗತ ಕಮಾನಿಗೆ ಕಳಸ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಗಳು ಕೇವಲ ಘೋಷಣೆ ಮಾಡುವುದರಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ. ರೈತರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕು. ದೇಶದಲ್ಲಿ ಇಂದಿಗೂ ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಬಡವರ ಬದುಕಿನಲ್ಲಿ ಬದಲಾವಣೆ ತರುವಂತಹ ಕಾರ್ಯಕ್ರಮಗಳಿಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದರು.

ಯಾರೂ ಕೂಡಾ ಮನೆಯಿಂದ ಹಣ ತಂದು ಸರ್ಕಾರಕ್ಕೆ ನೀಡುವುದಿಲ್ಲ. ಜನರು ಪಾವತಿಸುವ ತೆರಿಗೆಯ ಹಣದಿಂದಲೇ ಎಂದ ಅವರು, ಇಂದಿನ ಯುವ ಪೀಳಿಗೆಗೆ ನಮ್ಮ ಪೂರ್ವಜರ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಅಧಿಕಾರದ ಸ್ಥಾನವನ್ನು ಪಡೆದಿದ್ದು, ಜನರ ಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇನೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದರು.

ಜೆಡಿಎಸ್ ಮುಖಂಡರಾಗಿದ್ದ ರಾಮಚಂದ್ರಗೌಡ ಅವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಹಾಗೂ ಮೂಳೆ ಮತ್ತು ಕೀಲು ತಪಾಸಣಾ ಶಿಬಿರವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಷ್ಯ ಲೌಕಿಕ ಜೀವನದಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಭಗವಂತನ ಸ್ಮರಣೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಜೀವನಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದರು.

ಸಿದ್ದಗಂಗಾ ಮಠದ ಶ್ರೀಶಿವಸಿದ್ಧೇಶ್ವರ ಮಹಾಸ್ವಾಮೀಜಿ ಹಾಗೂ ದೇಗುಲ ಮಠದ ಶ್ರೀ ಚನ್ನಬಸವ ಪ್ರಭು ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಮಂಜೇಶ್, ಕಂಸಾಗರ ರವಿ, ಡಾ.ಜಗದೀಶ್, ಶರತ್, ಮಹಾದ್ವಾರದ ನಿರ್ಮಾತೃ ಕೆ.ಸುರೇಂದ್ರ, ಶಿಲ್ಪ ಸುರೇಂದ್ರ, ಎನ್.ಕೆ.ಕುಮಾರ್, ಬಸವರಾಜೇಗೌಡ, ಎವಿಟಿ ಕುಮಾರ್, ಕುಮಾರಸ್ವಾಮಿ, ಆನಂದಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕ: ಸುತ್ತೂರು ಶ್ರೀ

ಕನ್ನಡಪ್ರಭ ವಾರ್ತೆ ಮಂಡ್ಯ

ಭಗವಂತನನ್ನು ಪ್ರಾರ್ಥಿಸುವ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಧರ್ಮಮಾರ್ಗದಲ್ಲಿ ಮುನ್ನಡೆದಾಗ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು

ಇಲ್ಲಿಗೆ ಸಮೀಪದ ಗುಂಡಾಪುರದಲ್ಲಿ ನಡೆದ ಶ್ರೀಬೆಟ್ಟದರಸಮ್ಮ ದೇವಿ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯರಾದವರು ಭಗವಂತನಲ್ಲಿ ಭಕ್ತಿ, ನಂಬಿಕೆ, ವಿಶ್ವಾಸವನ್ನು ಇಡಬೇಕು. ಭಗವಂತನ ಪ್ರಾರ್ಥನೆಯಿಂದ ಜೀವನದಲ್ಲಿ ಸುಖ-ಸಂತೋಷವನ್ನು ಕಾಣಬಹುದು. ಮನುಷ್ಯ ಲೌಕಿಕವಾಗಿ ಎಷ್ಟೇ ಶ್ರೀಮಂತನಾಗಿದ್ದರೂ ಭಗಹವಂತನ ಆಶೀರ್ವಾದದ ಮುಂದೆ ಅದೆಲ್ಲವೂ ತೃಣಕ್ಕೆ ಸಮಾನ ಎಂದರು.

ಭಾರತ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ದೇಗುಲಗಳು ನಿರ್ಮಾಣಗೊಂಡು ಭಕ್ತಿ ಮಾರ್ಗದಲ್ಲಿ ಎಲ್ಲರನ್ನೂ ಕೊಂಡೊಯ್ಯುವ ಸಂಸ್ಕೃತಿ ಬೆಳೆದುಬಂದಿದೆ. ದೇವರನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಸ್ಕೃತಿ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿದೆ. ಭಾರತಕ್ಕಿಂತಲೂ ಹೆಚ್ಚಾಗಿ ಅಮೆರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗವಾಗಿ ಹಿಂದೂ ದೇವಾಲಯಗಳು ನಿರ್ಮಾಣಗೊಳ್ಳುತ್ತಿರುವುದನ್ನು ಕಾಣಬಹುದು. ಆ ಮೂಲಕ ಭಗವಂತನಲ್ಲಿ ಭಕ್ತಿಯ ಬಿನ್ನಹವನ್ನು ಪ್ರದರ್ಶಿಸುವ ವಿಶಿಷ್ಟ ಸಂಸ್ಕೃತಿ ನಮ್ಮದಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಹೇಳಿದರು.ಮಾರಮ್ಮ ದೇವಿ ದೇವಿಗೆ ಪೂಜೆ ಸಲ್ಲಿಸಿದ ಎಚ್.ಡಿ.ಕೆ

ಮದ್ದೂರು:ಕೇಂದ್ರ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ತಾಲೂಕಿನ ಗೊರವನಹಳ್ಳಿ ಗ್ರಾಮದ ನೂತನ ಮಾರಮ್ಮ ದೇವಿ ದೇಗುಲದ ಉದ್ಘಾಟನೆಗೆ ಮುನ್ನ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಸಚಿವ ಕುಮಾರಸ್ವಾಮಿ ಅವರನ್ನು ಗ್ರಾಮದ ಶ್ರೀ ಮಾರಮ್ಮ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾದ್ಯ ಸಮೇತ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.ನಂತರ ಕುಮಾರಸ್ವಾಮಿ ಅವರು ನೂತನ ಮಾರಮ್ಮ ದೇವಿಯ ವಿಗ್ರಹ ಹಾಗೂ ಶಿಶಿರ ಕಳಸ ಸ್ಥಾಪನೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲ ನಿರ್ಮಾಣದಿಂದ ಗ್ರಾಮಸ್ಥರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಶ್ರೀ ಮಾರಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಗೊರವನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 50 ಲಕ್ಷ ರು ಅನುದಾನ ಮಂಜೂರು ಮಾಡುವುದಾಗಿ ಆಶ್ವಾಸನೆ ನೀಡಿದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ದೇಗುಲ ನಿರ್ಮಾಣಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ ದೇಣಿಗೆ ನೀಡಿದರು. ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಪಿಇಟಿ ಅಧ್ಯಕ್ಷ ವಿಜಯಾನಂದ, ಜಿಪಂ ಮಾಜಿ ಸದಸ್ಯ ಕೆ. ರವಿ, ಕೆ. ಟಿ.ರಾಜಣ್ಣ, ಕುಳಗೆರೆ ಕೆ.ಟಿ. ಶೇಖರ್ ಸೇರಿದಂತೆ ಮಾರಮ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ