ಭದ್ರಾ ಡ್ಯಾಂನಿಂದ 10 ದಿನ 1 ಟಿಎಂಸಿ ನೀರು ಹರಿಸುವ ಕುರಿತಂತೆ ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ನಿರ್ಲಕ್ಷ್ಯದ ಬಗ್ಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಡ್ಯಾಂನಿಂದ 10 ದಿನ 1 ಟಿಎಂಸಿ ನೀರು ಹರಿಸುವ ಕುರಿತಂತೆ ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ನಿರ್ಲಕ್ಷ್ಯದ ಬಗ್ಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿ ಶಾಸಕ ಸಂಗಮೇಶ್ವರ ತಮ್ಮ ತಾಲೂಕಿನ ರೈತರ ಹಿತದೃಷ್ಟಿಯಿಂದ 1 ಸಾವಿರ ಕ್ಯುಸೆಕ್ ನೀರು ಬಿಡಿಸಿದ್ದಾರೆ. ಸಂಗಮೇಶ್ವರಗೆ ತಮ್ಮ ರೈತರಿಗೆ ಇರುವಷ್ಟು ಕಾಳಜಿ, ಬದ್ಧತೆ ನಮ್ಮ ಜಿಲ್ಲೆಯ ಸಚಿವರು, ಶಾಸಕರಿಗೆ ಇಲ್ಲಿನ ರೈತರ ಬಗ್ಗೆ ಇಲ್ಲ ಎಂದರು.
ಹೀಗಾದರೆ ಜಿಲ್ಲೆಯ ಅಚ್ಚುಕಟ್ಟು ರೈತರ ಹಿತ ಕಾಯುವವರು ಯಾರು? ಭದ್ರಾ ಡ್ಯಾಂನಲ್ಲಿ 178 ಅಡಿ ನೀರಿದ್ದರೂ ಮಳೆಗಾಲದ ಬೆಲೆಗೆ ಸರ್ಕಾರ ನೀರು ಕೊಡಲಿಲ್ಲ. ಐಸಿಸಿ ಸಭೆ ಕರೆದರೂ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ, ಕುಡಿಯುವ ನೀರಿಗಾಗಿ ಒಮ್ಮೆ 1 ಟಿಎಂಸಿ, ಮತ್ತೊಮ್ಮೆ 3 ಟಿಎಂಸಿ, ವಾಣಿವಿಲಾಸಸಾಗರ ಜಲಾಶಯಕ್ಕೆ 1 ಟಿಎಂಸಿ ನೀರನ್ನು ಪದೇಪದೇ ಹರಿಸುವ ಮೂಲಕ ಐಸಿಸಿ ಸಭೆಗೆ ಅಗೌರವ ತೋರಲಾಗಿದೆ ಎಂದು ಅವರು ಆರೋಪಿಸಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು. ಮಳೆಗಾಲದಲ್ಲಿ ನೀರು ಕೊಡದಿದ್ದಾಗ ಕಾಂಗ್ರೆಸ್ ಶಾಸಕರಿಗೆ ಯಾಕೆ ರೋಷ ಬರಲಿಲ್ಲ? ಕಾಂಗ್ರೆಸ್ ಶಾಸಕರಿಗೆ ಈಗಲಾದರೂ ಧೈರ್ಯ ಬಂದಿರುವುದು ಉತ್ತಮ ಬೆಳವಣಿಗೆ, ಸ್ವಾಗತಾರ್ಹವಾಗಿದೆ. ಆದರೆ, ರೈತರು ಸಚಿವರ ಮನೆಗೆ ಮುತ್ತಿಗೆ ಹಾಕಿದರೂ, ಸಿಎಂ ಬಳಿ ಹೋದರೂ ಪ್ರಯೋಜನವಾಗಿಲ್ಲ. ಹೋರಾಟಗಳು ತಾರ್ಕಿಕ ಅಂತ್ಯ ಕಂಡಿಲ್ಲ. ಇವು ಅತ್ಯಂತ ಹಾಸ್ಯಾಸ್ಪದ ಹೋರಾಟಗಳು ಎಂದು ಕುಟುಕಿದರು.
ಮಳೆಗಾಲದ ಬೆಳೆಗೆ ಶೇ.30ರಷ್ಟು ಕಡಿಮೆ ನೀರನ್ನು ಬಳಸಿದ್ದರೂ ಬೆಳೆ ಕೈಗೆ ಬರುತ್ತಿತ್ತು. ಮಳೆಗಾಲದ ಬೆಳೆ ಇಲ್ಲದಂತೆ ಮಾಡಿ, ರೈತರ ಬದುಕನ್ನು ಹಾಳು ಮಾಡಿರುವ ಸಚಿವರು ಕನಿಷ್ಟ ಪಕ್ಷ ಬೇಸಿಗೆ ಬೆಳೆಗಾರದರೂ ಅಚ್ಚುಕಟ್ಟು ರೈತರಿಗೆ ನೀರು ಕೊಡಿಸುವ ಕೆಲಸ ಮಾಡಬೇಕು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಕೇವಲ ಭದ್ರಾವತಿ ತಾಲೂಕೇ ರಾಜ್ಯ ಎಂದುಕೊಂಡಿದ್ದಾರೆ ಎಂದು ಅಸಮಾಧಾನ ತೋರಿದರು.
ಬಿಜೆಪಿ ಮುಖಂಡರಾದ ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ರಮೇಶ ಇತರರು ಇದ್ದರು.
- - -
(ಬಾಕ್ಸ್)
* ರೈತರಿಗಾಗಿ ಒಗ್ಗಟ್ಟಿನ ಹೋರಾಟ ಅವಶ್ಯ
ಕಳೆದೊಂದು ವರ್ಷದಿಂದಲೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ದಿನದಿನಕ್ಕೂ ಉಲ್ಬಣಿಸುತ್ತಿದೆ. ಐಸಿಸಿ ಸಭೆಗೂ ಅಗೌರವ ತೋರಿಸಲಾಗುತ್ತಿದೆ. ರಾಜ್ಯ ಸರ್ಕಾರವು ವಿಚಿತ್ರ ಆಡಳಿತ ನಡೆಸುತ್ತಿದೆ. ರೈತರ ಹಿತ ಕಾಯಲು ಪಕ್ಷಭೇದ ಮರೆತು, ಎಲ್ಲರೂ ಒಟ್ಟಾಗಿ ಹೋರಾಟ ರೂಪಿಸುವ ಅವಶ್ಯಕತೆ ಇದೆ. ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಗೆ ಭೇಟಿಯಾಗಿ ಬರಲಿ. ಅನಂತರ ನಮ್ಮ ಪಕ್ಷದವರೊಂದಿಗೆ ತೀರ್ಮಾನಿಸಿ, ನಾನು ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಿ.ಪಿ.ಹರೀಶ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.