ಬಳ್ಳಾರಿ: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಪ್ರತಿ 6 ತಿಂಗಳಿಗೊಮ್ಮೆ ತಪ್ಪದೇ 2 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆಗಳನ್ನು ಪಾಲಕರು ಕೊಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಹೇಳಿದರು.
ಮಕ್ಕಳ ಬೆಳವಣಿಗೆಯ ಆರಂಭದಲ್ಲಿಯೇ ರಕ್ತಹೀನತೆಯನ್ನು ಗುರುತಿಸುವುದರಿಂದ ದೇಹದ ಬೆಳವಣಿಗೆಗೆ ಆಗುವ ಕುಂಠಿತ ತೊಂದರೆಗಳು ಹಾಗೂ ಇತರೆ ಸಾಮಾನ್ಯ ತೊಂದರೆಗಳನ್ನು ಗುರುತಿಸಿ ಮಗುವಿನ ಬಾಲ್ಯವನ್ನು ಸದೃಢಗೊಳಿಸಲು 1 ರಿಂದ 02 ವರ್ಷದೊಳಗಿನ ಮಕ್ಕಳಿಗೆ 200 ಮಿಲಿಗ್ರಾಂ ಮಾತ್ರೆ ಹಾಗೂ 2 ರಿಂದ 16 ವರ್ಷದೊಳಗಿನ ಮಕ್ಕಳಿಗೆ 400 ಮಿಲಿಗ್ರಾಂ ಮಾತ್ರೆಗಳನ್ನು ಮಗುವಿಗೆ ಚೀಪಿಸಲು ಕೊಡಲು ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಎಲ್ಲಾ ಪಾಲಕರು ಇದರ ಸದುಪಯೋಗ ಪಡೆದುಕೊಂಡು ಮಗುವಿನ ಸದೃಢ ಆರೋಗ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಮಾತ್ರೆಗಳನ್ನು ವಿತರಿಸಲು ತಂಡಗಳನ್ನು ರಚಿಸಲಾಗಿದ್ದು, ಮೇ 13 ರಿಂದ 23 ರವರೆಗೆ ಆರೋಗ್ಯ ಇಲಾಖೆಯ ವೈದ್ಯಕೀಯ ತಂಡದವರು ಆಗಮಿಸಿ ಮಾತ್ರೆಗಳನ್ನು ಚೀಪಿಸಲು ಬಂದಾಗ ಪಾಲಕರು ಸಹಕರಿಸಬೇಕು ಎಂದು ವಿನಂತಿಸಿದರು.
ಕ್ಷೇತ್ರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ವೈದ್ಯಕೀಯ ತಂಡವು ಜಿಲ್ಲೆಯ ಪ್ರತಿ ಮನೆ ಮನೆಯ ಭೇಟಿಯ ಮೂಲಕ 4,05,388 ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು 1 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಮನೆಗಳಲ್ಲಿಯೇ ವಿತರಿಸಲಿದ್ದು, ಮಗುವಿಗೆ ಯಾವುದೇ ಕಾರಣಕ್ಕೂ ನುಂಗಿಸದೇ ಮಾತ್ರೆಗಳನ್ನು ಚೀಪಿಸಲು ತಿಳಿಸಬೇಕು ಎಂದು ವಿನಂತಿಸಿದರು.ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ವೈದ್ಯಾಧಿಕಾರಿ ಡಾ.ಕರುಣಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಎನ್‍ಒ ಗಿರೀಶ್, ಆರ್.ಕೆ.ಎಸ್.ಕೆ ಸಲಹೆಗಾರ ಮನೋಹರ್ ಸೇರಿದಂತೆ ಸಿಬ್ಬಂದಿಗಳಾದ ಚೈತ್ರಾ, ಪ್ರಸನ್ನ ಜ್ಯೋತಿ, ಸುನೀತಾ, ಪಲ್ಲವಿ ನಾಯ್ಕ್, ಅರುಣ ಜ್ಯೋತಿ, ಎಸ್.ತುಳಸಿ, ಅಲೀಯಾ ಬೇಗಂ, ಜಾನ್ ಅಬ್ರಹಾಂ, ಮರಿಸ್ವಾಮಿ, ಗಂಗಾಧರ, ಯಶೋಧಾ ಮಹಮ್ಮದ್ ಹಾಗೂ ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.