ಭಾರತದ ಗಾಲ್ಫ್‌ ಕ್ಲಬ್ ಗಳಲ್ಲಿಯೇ ಮೊದಲ ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯಕ್ಕೆ ಚಾಲನೆ

KannadaprabhaNewsNetwork | Published : Oct 29, 2024 12:51 AM

ಸಾರಾಂಶ

ಭಾರತದ ಗಾಲ್ಫ್‌ ಕ್ಲಬ್‌ಗಳಲ್ಲಿಯೇ ಪ್ರಥಮ ಎಂಬ ಹಿರಿಮೆಗೆ ಕಾರಣವಾದ ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯವನ್ನು ಎಕ್ಸೆಲ್‌ ಸಂಸ್ಥೆಯ ಪಾಲುದಾರ ಮಹೀಂದ್ರನ್‌ ಬಾಲಚಂದ್ರನ್‌ ಉದ್ಘಾಟಿಸಿದರು. ಅಂದಾಜು 7 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೌಲಭ್ಯವನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತದ ಗಾಲ್ಫ್‌ ಕ್ಲಬ್ ಗಳಲ್ಲಿಯೇ ಪ್ರಥಮ ಎಂಬ ಹಿರಿಮೆಗೆ ಕಾರಣವಾದ ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯವನ್ನು ಮಡಿಕೇರಿ ಡೌನ್ಸ್ ಗಾಲ್ಫ್‌ ಕ್ಲಬ್ ನಲ್ಲಿ ಎಕ್ಸೆಲ್ ಸಂಸ್ಥೆಯ ಪಾಲುದಾರ ಮಹೀಂದ್ರನ್ ಬಾಲಚಂದ್ರನ್ ಉದ್ಘಾಟಿಸಿದರು.

ಮಡಿಕೇರಿ ಹೊರವಲಯದಲ್ಲಿರುವ ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ನಲ್ಲಿ ಅಂದಾಜು 7 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಭಾಭವನ, ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯ, ನೂತನ ಬಿಲಿಯರ್ಡ್ಸ್‌ ಕ್ರೀಡಾಂಗಣವನ್ನು ದಾನಿಗಳೂ ಆದ , ಎಕ್ಸೆಲ್ ಸಂಸ್ಥೆಯ ಪಾಲುದಾರ ಮಹೀಂದ್ರನ್ ಬಾಲಚಂದ್ರನ್ ವಿದ್ಯುಕ್ತವಾಗಿ ಉದ್ಘಾಟಿಸಿದರು,

ಈ ಸಂದರ್ಭ ಮಾತನಾಡಿದ ಮಹೀಂದ್ರನ್ ಬಾಲಚಂದ್ರನ್, ನಿಸರ್ಗದ ಮಡಿಲಲ್ಲಿರುವ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಗಾಲ್ಫ್‌ ಮೈದಾನ ನಿರ್ಮಾಣವಾಗಿರುವುದು ಕೊಡಗಿನಲ್ಲಿ ಗಾಲ್ಫ್‌ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ತನ್ನ ಸಂಸ್ಥೆ ಟುವಡ್ಸ್ ಈಕ್ವಲ್ ಫೌಂಡೇಷನ್ ಮೂಲಕ ಈಗಾಗಲೇ ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ನ ಸಿಬ್ಬಂದಿ ಮಕ್ಕಳಿಗೆ ಸೂಕ್ತ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯ ನೆರವು ನೀಡುವುದಾಗಿ ಘೋಷಿಸಿದರು.

ಮಕೇ೯ರಾ ಡೌನ್ಸ್ ಗಾಲ್ಫ್‌ ಕ್ಲಬ್ ಅಧ್ಯಕ್ಷ ಐ.ಕೆ. ಅನಿಲ್ ಮಾತನಾಡಿ, 1914 ರಲ್ಲಿ ಸ್ಥಾಪನೆಯಾದ ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ಪಾಲಿಗೆ ಸ್ಮರಣೀಯ ದಿನ ಇದಾಗಿದ್ದು 7 ಕೋಟಿ ರು. ವೆಚ್ಚದಲ್ಲಿ ಹಲವಷ್ಟು ವಿನೂತನ ಸೌಲಭ್ಯಗಳನ್ನು ಇದೀಗ ಮಡಿಕೇರಿಯ ಈ ಗಾಲ್ಫ್‌ ಮೈದಾನ ಹೊಂದುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

2002 ರಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ನಲ್ಲಿ ಕ್ಲಬ್ ಹೌಸ್ ಸ್ಥಾಪನೆಯಾಯಿತು, 2013 ರಲ್ಲಿ ನೂತನ ರಸ್ತೆ ನಿರ್ಮಾಣವಾಗಿದ್ದರೆ, 2017 ರಲ್ಲಿ 8 ಕೋಣೆಗಳ ನೂತನ ಅತಿಥಿಗೃಹ ನಿರ್ಮಾಣವಾಯಿತು, 2019 ರಲ್ಲಿ ಗಾಲ್ಫ್‌ ಕೋಸ್೯ಗೆ ಹೊನಲು ಬೆಳಕಿನ ವ್ಯವಸ್ಥೆಯಾಯಿತು, ಇದೀಗ 2024 ರಲ್ಲಿ ಸಭೆ, ಸಮಾರಂಭಗಳಿಗೆ ಅನುಕೂಲಕರವಾದ ಸಭಾಂಗಣ ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯ, ನೂತನ ಬಿಲಿಯಡ್ಸ್೯ ಕ್ರೀಡಾಂಗಣ, 10 ಸುಸಜ್ಜಿತ ಕೋಣೆಗಳು, ಈಜುಕೊಳ ಹೊಂದಿರುವ ಬಹುಉದ್ದೇಶದ ಕಟ್ಟಡ ನಿರ್ಮಾಣವಾಗಿರುವುದು ಮರ್ಕೇರಾ ಡೌನ್ಸ್ ಗಾಲ್ಪ್ ಕ್ಲಬ್ ನ ಹೆಮ್ಮೆಯ ಸಾಧನೆಯಾಗಿದೆ ಎಂದೂ ಐ.ಕೆ. ಅನಿಲ್ ಹೇಳಿದರು.

ಈ ಎಲ್ಲ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ಮತ್ತಷ್ಟು ಗಾಲ್ಫ್‌ ಕ್ರೀಡಾ ಚಟುವಟಿಕೆಗಳ ಆಯೋಜನೆಗೆ ಸಹಕಾರಿಯಾಗಲಿದೆ ಎಂದೂ ಅನಿಲ್ ಆಶಾಭಾವನೆ ವ್ಯಕ್ತಪಡಿಸಿದರು. ಭಾರತದ ಗಾಲ್ಫ್‌ ಕ್ಲಬ್ ಗಳಲ್ಲಿಯೇ ಮೊದಲ ಬಾರಿಗೆ ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಗಾಲ್ಫ್‌ ಕ್ರೀಡಾ ಸೌಲಭ್ಯ ಹೊಂದುವ ಮೂಲಕ ಮಳೆಗಾಲದಲ್ಲಿಯೇ ಗಾಲ್ಫ್‌ ಕ್ರೀಡಾಪಟುಗಳು ಈ ಒಳಾಂಗಣ ಗಾಲ್ಫ್‌ ಕ್ರೀಡಾಂಗಣದ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ ಎಂದೂ ಅನಿಲ್ ಮಾಹಿತಿ ನೀಡಿದರು.

ಇದೇ ಸಂದರ್ಭ ನೂತನ ಬಿಲಿಯರ್ಡ್ಸ್‌ ಕ್ರೀಡಾಂಗಣಕ್ಕೆ ಚಾಲನೆ ನೀಡಿ ಮಾತನಾಡಿದ ಸಕಲೇಶಪುರ ಮೂಲದ ಅಂತಾರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ನಟಾಷ ಚೇತನ್, ಗಾಲ್ಫ್‌ ನಂತೆಯೇ ಸ್ನೂಕರ್ ಕೂಡ ಛಲ ಮತ್ತು ಗುರಿಯನ್ನು ಪ್ರಧಾನವಾಗಿ ಹೊಂದಿರುವ ಕ್ರೀಡೆಯಾಗಿದೆ ಎಂದರು.

ಐ.ಕೆ ರಾಹುಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಕೇ೯ರಾ ಡೌನ್ಸ್ ಗಾಲ್ಫ್‌ ಕ್ಲಬ್ ಆಯೋಜಿಸಿದ್ದ ಟಿ. ಆರ್. ಬಾಲಚಂದ್ರನ್ ಹೆಸರಿನ 6 ನೇ ಆವೃತ್ತಿಯ ಗಾಲ್ಫ್‌ ಪಂದ್ಯಾವಳಿ ಸಮಿತಿ ಅಧ್ಯಕ್ಷ ಕೆ.ಪಿ ರಂಜಿತ್ ವಂದಿಸಿದರು. ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಅಪ್ಪಣ್ಣ, ಸಂಗೀತಾ ಮಹೀಂದ್ರನ್ ಹಾಜರಿದ್ದರು. ಟಿ.ಆರ್ ಬಾಲಚಂದ್ರನ್ ಗಾಲ್ಫ್‌ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಿಕ್ಕಮಗಳೂರು ಗಾಲ್ಫ್‌ ಕ್ಲಬ್ ಅಧ್ಯಕ್ಷ ಸುದಶ೯ನ್, ಉಪಾಸಿ ಕ್ರೀಡಾ ಸಮಿತಿ ಅಧ್ಯಕ್ಷ ಸಿ.ಎಂ. ಅಪ್ಪಣ್ಣ, ಕೊಡಗು ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕೆ.ಎ.ಚಂಗಪ್ಪ, ಕನಾ೯ಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್, ನಿವೖತ್ತ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಹಾಜರಿದ್ದರು.

Share this article